7th Pay Commission: ನಿವೃತ್ತ ಸರ್ಕಾರಿ ನೌಕರರ ತುಟ್ಟಿ ಭತ್ಯೆ, ಇತರ ನಿವೃತ್ತಿ ಸೌಲಭ್ಯಗಳ ವಿವರ
ಬೆಂಗಳೂರು, ಆಗಸ್ಟ್ 29: ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿಯನ್ನು ಅಂಗೀಕರಿಸಿ, ಜಾರಿಗೊಳಿಸುತ್ತಿರುವ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಮನ್ನಣೆ ನೀಡಿದೆ. ಈಗ ನಿವೃತ್ತ ನೌಕರರಿಗೆ ನೀಡುವ ಸೌಲಭ್ಯಗಳ ಕುರಿತು ಆದೇಶಗಳನ್ನು ಹೊರಡಿಸಿದೆ. ಆಗಸ್ಟ್ 1ರಿಂದಲೇ ಜಾರಿಗೆ ಬರುವಂತೆ ನೌಕರರ ವೇತನ, ಭತ್ಯೆ, ಪಿಂಚಣಿಯಲ್ಲಿ ಬದಲಾವಣೆ ಆಗುತ್ತದೆ. ಆಯೋಗದ ವರದಿಯಿಂದ ನಿವೃತ್ತ ನೌಕರರಿಗೆ ಸಿಗುವ ಅನುಕೂಲಗಳ ಕುರಿತು ಈಗ ಸರ್ಕಾರಿ ಆದೇಶದಲ್ಲಿ ವಿವರಣೆ ನೀಡಲಾಗಿದೆ.
ಬುಧವಾರ ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳ ವಿವರಣೆ ನೀಡಲಾಗಿದೆ. ಎಷ್ಟು ಪಿಂಚಣಿ ದೊರೆಯಲಿದೆ ಎಂದು ಹಂತ ಹಂತವಾಗಿ ಮಾಹಿತಿ ನೀಡಲಾಗಿದೆ.

ತುಟ್ಟಿ ಭತ್ಯೆ: ಅಖಿಲ ಭಾರತ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕ (ಸಾಮಾನ್ಯ) 361.704 ಅಂಶಗಳವರೆಗಿನ (ಆಧಾರ ವರ್ಷ 2001=100) ತುಟ್ಟಿ ಭತ್ಯೆಯನ್ನು ದಿನಾಂಕ 1ನೇ ಜುಲೈ 2022ರಂದು ಲಭ್ಯವಿದ್ದ ಪ್ರಸ್ತುತ ಮೂಲ ಪಿಂಚಣಿ/ ಕುಟುಂಬ ಪಿಂಚಣಿಯೊಂದಿಗೆ ವಿಲೀನಗೊಳಿಸಿ ರಾಜ್ಯ ಸರ್ಕಾರಿ ನೌಕರರ ಪರಿಷ್ಕೃತ ಪಿಂಚಣಿ/ ಕುಟುಂಬ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗಿರುತ್ತದೆ.
ಆದುದರಿಂದ, ಪರಿಷ್ಕೃತ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ ಮೇಲಿನ ತುಟ್ಟಿ ಭತ್ಯೆಯ ಮೊದಲನೇ ಕಂತನ್ನು ದಿನಾಂಕ 1ನೇ ಜನವರಿ 2023ರಿಂದ ಲೆಕ್ಕಹಾಕಿ ಕೆಳಗೆ ತಿಳಿಸಿರುವ ದಿನಾಂಕದಿಂದ ಮಂಜೂರು ಮಾಡತಕ್ಕದ್ದು ಎಂದು ಆದೇಶ ಹೇಳಿದೆ.
ಕಾರ್ಯನಿರತ ಸರ್ಕಾರಿ ನೌಕರರಿಗೆ ಕಾಲ ಕಾಲಕ್ಕೆ ಮಂಜೂರು ಮಾಡುವ ತುಟ್ಟಿ ಭತ್ಯೆ ಆದೇಶಗಳನ್ನು ಅನ್ವಯಿಸಿ ನಿವೃತ್ತಿ ವೇತನದಾರರು ಮತ್ತು ಕುಟುಂಬ ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಕ್ರಮಬದ್ಧಗೊಳಿಸಿ ಮಂಜೂರು ಮಾಡುವುದನ್ನು ಮುಂದುವರೆಸತಕ್ಕದ್ದು. ಅದರಂತೆ, ಪರಿಷ್ಕೃತ ನಿವೃತ್ತಿ ವೇತನ/ ಪರಿಷ್ಕೃತ ಕುಟುಂಬ ನಿವೃತ್ತಿ ವೇತನದ ಮೇಲೆ ತುಟ್ಟಿ ಭತ್ಯೆಯನ್ನು ಕೆಳಕಂಡಂತೆ ಕಾಲ್ಪನಿಕವಾಗಿ ಕ್ರಮಬದ್ಧಗೊಳಿಸತಕ್ಕದ್ದು.
* 01.07.2023 - ಶೂನ್ಯ
* 01.07.2023 - 2.75% ಪರಿಷ್ಕೃತ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ
* 01.07.2023 - 5.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ
* 01.01.2024 - 8.5% ಪರಿಷ್ಕೃತ ಮೂಲ ನಿವೃತ್ತಿ ವೇತನ/ ಕುಟುಂಬ ನಿವೃತ್ತಿ ವೇತನ
ಮುಂದಿನ ತುಟ್ಟಿ ಭತ್ಯೆಯ ಮಂಜೂರಾತಿಯು ಈ ಸಂಬಂಧ ರಾಜ್ಯ ಸರ್ಕಾರವು ಹೊರಡಿಸುವ ಆದೇಶಗಳಲ್ಲಿ ಕ್ರಮಬದ್ಧಗೊಳಿಸಿದಂತೆ ಇರತಕ್ಕದ್ದು. ತುಟ್ಟಿ ಭತ್ಯೆಯನ್ನು 1ನೇ ಜನವರಿ ಮತ್ತು 1ನೇ ಜುಲೈರಿಂದ ಅನ್ವಯಿಸುವಂತೆ ವರ್ಷಕ ಎರಡು ಬಾರಿ ಪಾವತಿಸುವುದು ಎಂದು ಆದೇಶ ತಿಳಿಸಿದೆ.
ನಿವೃತ್ತಿ ಉಪದಾನ/ ಮರಣ ಉಪದಾನ: ದಿನಾಂಕ 01.07.2022ರಂದು ಮತ್ತು ನಂತರದಲ್ಲಿ ಹಾಗೂ ದಿನಾಂಕ 01.08.2024ಕ್ಕೂ ಮುಂಚಿತವಾಗಿ ಸೇವೆಯಿಂದ ನಿವೃತ್ತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನಗೊಂಡ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅವಕಾಶಗಳನ್ವಯ ಪಾವತಿಸಲಾಗುವ ನಿವೃತ್ತಿ ಉಪದಾನವು ಪೂರ್ಣಗೊಳಿಸಲಾದ ಪ್ರತಿ ಆರು ಮಾಸಿಕ ಅರ್ಹತಾ ಸೇವೆಗೆ ಪ್ರಸ್ತುತ ಉಪಲಬ್ದಗಳ ಗರಿಷ್ಠ ಮಿತಿ 16 1/2ಕ್ಕೆ ಸೀಮಿತಗೊಳಿಸಿ, ಪ್ರಸ್ತುತ ಉಪಲಬ್ಧಗಳ 1/4 ನೇ ಭಾಗಕ್ಕೆ ಸಮನಾಗತಕ್ಕದು. ಈ ರೀತಿ ಲೆಕ್ಕ ಹಾಕಲಾದ ನಿವೃತ್ತಿ ಉಪದಾನದ ಗರಿಷ್ಠ ಮಿತಿಯು ರೂ. 20 ಲಕ್ಷಗಳಾಗಿರುತ್ತದೆ.
ದಿನಾಂಕ 01.07.2022 ರಂದು ಅಥವಾ ತದನಂತರ ಆದರೆ ದಿನಾಂಕ 01.08.2024ರೊಳಗೆ ಸೇವೆಯಲ್ಲಿರುವಾಗಲೇ ಮರಣ ಹೊಂದಿದ ಸರ್ಕಾರಿ ನೌಕರನ ಪ್ರಕರಣದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಡಿ ಲಭ್ಯವಿರುವ ಮರಣ ಉಪದಾನವು ಕೆಳಗಿನಿಂತೆ ಲಭ್ಯವಾಗುತ್ತದೆ.
* 1 ವರ್ಷಕ್ಕಿಂತ ಕಡಿಮೆ - ಪ್ರಸಕ್ತ ಉಪಲಬ್ಧಗಳ ಎರಡರಷ್ಟು
* 1 ವರ್ಷಗಳಿಗಿಂತ ಹೆಚ್ಚು ಆದರೆ 5 ವರ್ಷಗಳಿಗಿಂತ ಕಡಿಮೆ - ಪ್ರಸಕ್ತ ಉಪಲಬ್ಧಗಳ ಆರರಷ್ಟು
* 5 ವರ್ಷಗಳಿಗಿಂತ ಹೆಚ್ಚು ಆದರೆ 20 ವರ್ಷಗಳಿಗಿಂತ ಹೆಚ್ಚು - ಪ್ರಸಕ್ತ ಉಪಲಬ್ಧಗಳ ಹನ್ನೆರಡರಷ್ಟು
* 20 ವರ್ಷಗಳಿಗಿಂತ ಹೆಚ್ಚು - ಪೂರೈಸಿದ ಪ್ರತಿ ಅರ್ಧ ವರ್ಷದ ಅರ್ಹತಾ ಸೇವೆಗೆ ಪ್ರಸಕ್ತ ಉಪಲಬ್ಧಗಳ ಅರ್ಧದಷ್ಟು ಈ ರೀತಿ ದೊರೆಯುವ ಉಪದಾನವು ಗರಿಷ್ಠ ಮೊತ್ತ ಉಪಲಬ್ಧಗಳ 33 ಹಾಗೂ ಮರಣ ಉಪದಾನವು ಯಾವುದೇ ಕಾರಣಕ್ಕೂ ರೂ. 20 ಲಕ್ಷಗಳಿಗೆ ಮೀರತಕ್ಕದ್ದಲ್ಲ.
ದಿನಾಂಕ 01.08.2024ರಂದು ಮತ್ತು ತದನಂತರದಲ್ಲಿ ಸೇವೆಯಿಂದ ನಿವೃತ್ತನಾದ ಅಥವಾ ಸೇವೆಯಲ್ಲಿರುವಾಗಲೇ ಮೃತನಾದ ಕಾರಣದಿಂದ ಸೇವೆಯಲ್ಲಿರುವುದು ಕೊನೆಗೊಂಡ ಸರ್ಕಾರಿ ನೌಕರನ/ ಳ ಪ್ರಕರಣದಲ್ಲಿ ಅವನ/ ಅವಳ ನಿವೃತ್ತಿ/ ಮರಣ ಉಪದಾನವನ್ನು ಪರಿಷ್ಕೃತ ಉಪಲಬ್ಧಗಳನ್ನು ಆಧಾರವಾಗಿರಿಸಿ ಈ ಮೇಲೆ ತಿಳಿಸಿರುವಂತೆ ಲೆಕ್ಕಹಾಕತಕ್ಕದ್ದು ಎಂದು ಆದೇಶ ತಿಳಿಸಿದೆ.












Click it and Unblock the Notifications