7th pay commission: ವೇತನ ಆಯೋಗ ಜಾರಿಯಾದರೂ ಮುಷ್ಕರ ಕೈ ಬಿಡದ ಸರ್ಕಾರಿ ನೌಕರರು
ಬೆಂಗಳೂರು, ಜುಲೈ 17: ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ. ಈ ಕುರಿತು ವಿಧಾನಸಭೆ ಅಧಿವೇಶನದಲ್ಲಿಯೂ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ನಮ್ಮ ಸರ್ಕಾರವು 7ನೇ ವೇತನ ಆಯೋಗದ ವರದಿಯ ಶಿಫಾರಸ್ಸುಗಳನ್ನು ಆಗಸ್ಟ್ 1 ರಿಂದ ಜಾರಿಗೆ ತರಲು ನಿರ್ಧರಿಸಿದೆ. ಇದರಿಂದ ಸರ್ಕಾರಿ ನೌಕರರ ಮೂಲವೇತನ ಮತ್ತು ಪಿಂಚಣಿಯಲ್ಲಿ ಶೇ 58.50 ಹೆಚ್ಚಳವಾಗಲಿದ್ದು, ಇದಕ್ಕಾಗಿ ವಾರ್ಷಿಕ ರೂ.20,208 ಕೋಟಿ ಹೆಚ್ಚುವರಿ ವೆಚ್ಚವನ್ನು ಸರ್ಕಾರ ಭರಿಸಲಿದೆ" ಎಂದು ಹೇಳಿದ್ದಾರೆ.

7ನೇ ವೇತನ ಆಯೋಗದ ವರದಿ ಜಾರಿಗೆ ಸರ್ಕಾರ ಒಪ್ಪಿಗೆ ನೀಡಿದರೂ ಸಹ ರಾಜ್ಯ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರದ ಕರೆಯನ್ನು ವಾಪಸ್ ಪಡೆದಿಲ್ಲ. ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕವೂ ನೌಕರರ ಸಂಘ ಮಾಹಿತಿಯನ್ನು ನೀಡಿದೆ.
ಪ್ರಕಟಣೆಯ ಮಾಹಿತಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಪಡಾಕ್ಷರಿ ಪ್ರಕಟಣೆ ಮೂಲಕ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರಿ ನೌಕರರ ವೇತನ-ಭತ್ಯೆಗಳ ಪರಿಷ್ಕರಣೆಗೆ ರಚಿಸಿದ್ದ ರಾಜ್ಯ 7ನೇ ವೇತನ ಆಯೋಗವು ಮಾಡಿದ್ದ ಶಿಫಾರಸ್ಸು ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಎಂಬ ವಿಷಯವನ್ನು ಪ್ರಕಟಣೆ ಒಳಗೊಂಡಿದೆ.
ರಾಜ್ಯ 7ನೇ ವೇತನ ಆಯೋಗದ ವರದಿಯ ಶಿಫಾರಸ್ಸನ್ನು ಯಥಾವತ್ತಾಗಿ ಜಾರಿಗೊಳಿಸಲು ಅನುಮೋದನೆ ನೀಡಿರುವುದಕ್ಕಾಗಿ ಸಮಸ್ತ ರಾಜ್ಯ ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಚಿವ ಸಂಪುಟದ ಸಚಿವರುಗಳಿಗೆ ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳಿಗೆ ಸಂಘವು ಧನ್ಯವಾದಗಳನ್ನು ಸಲ್ಲಿಸುತ್ತದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ದಿನಾಂಕ 01/7/2022ರಿಂದ ಕಾಲ್ಪನಿಕವಾಗಿ ವೇತನ ನಿಗದಿ, ದಿನಾಂಕ 01/08/2024 ರಿಂದ ಆರ್ಥಿಕ ಸೌಲಭ್ಯವನ್ನು ನೀಡಲು ಹಾಗೂ ವೇತನ ಆಯೋಗ ಶಿಫಾರಸ್ಸು ಮಾಡಿದ ಶೇ 27.50 ವೇತನ ವೇತನ ನಿಗದಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುತ್ತದೆ ಎಂದು ಹೇಳಿದೆ.
ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಾದ; ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಅನುಷ್ಠಾನಗೊಳಿಸಿ ಆದೇಶ ಹೊರಡಿಸುವುದು. ಎನ್.ಪಿ.ಎಸ್. ರದ್ದುಪಡಿಸಿ ಹಳೇ ಪಿಂಚಣೆ ಯೋಜನೆಯನ್ನು ಮರು ಜಾರಿಗೊಳಿಸುವುದು. ಮತ್ತು ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಲೋಕಾರ್ಪಣೆ ಮಾಡುವುದು.
ಮೇಲ್ಕಂಡ ಮೂರು ಬೇಡಿಕೆಗಳನ್ನು ಶೀಘ್ರ ಈಡೇರಿಸಿ ಆದೇಶ ಹೊರಡಿಸುವ ಸಂಬಂಧ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯು ದಿನಾಂಕ 7/7/2024ರಂದು ತೆಗೆದುಕೊಂಡ ಹೋರಾಟದ ತೀರ್ಮಾನದಂತೆ ಸಂಘವು ಸರ್ಕಾರಕ್ಕೆ ಒತ್ತಡ ತರಲು ಹಂತ-ಹಂತದ ಹೋರಾಟ ಕಾರ್ಯಕ್ರಮಗಳನ್ನು ರೂಪಿಸಿತ್ತು.
ಸಂಘದ ಮತ್ತೊಂದು ಪ್ರಮುಖ ಬೇಡಿಕೆಯಾದ ನೂತನ ಪಿಂಚಣಿಯ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವ ಬೇಡಿಕೆಯು ಸಚಿವ ಸಂಪುಟದ ಅನುಮೋದನೆಯಾಗುವ ನಿರೀಕ್ಷೆಯನ್ನು ಸಂಘವು ಹೊಂದಿತ್ತು.
ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಉಚಿತ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಯೋಜನೆಗೆ ಹಿಂದಿನ ಸರ್ಕಾರದ ಸಚಿವ ಸಂಪುಟ ಅನುಮೋದನೆ ನೀಡಿ 2 ವರ್ಷ ಪೂರ್ಣಗೊಂಡರೂ ಈವರಗೆ ಜಾರಿ ಆಗಿರುವುದಿಲ್ಲ.
ಸಂಘದ ಪ್ರಮುಖ ಬೇಡಿಕೆಗಳಿಗೆ ಸಚಿವ ಸಂಪುಟದ ಅನುಮೋದನೆ ಹೊರತಾಗಿಯೂ ಮೂರು ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಕೂಡಲೇ ಆದೇಶ ಹೊರಡಿಸಿ ಜಾರಿಗೊಳಿಸುವ ನಿರೀಕ್ಷೆಯನ್ನು ಸಂಘವು ಹೊಂದಿದೆ.
ಒಂದು ವೇಳೆ ಸರ್ಕಾರ ಆದೇಶ ಹೊರಡಿಸಲು ವಿಳಂಬ ಮಾಡಿದಲ್ಲಿ ಸಂಘದ ಕಾರ್ಯಕಾರಿ ಸಮಿತಿ ನಿರ್ಣಯದಂತೆ ಹೋರಾಟದ 2ನೇ ಹಂತದ ಭಾಗವಾಗಿ ದಿನಾಂಕ 23/07/2024ರಂದು ರಾಜ್ಯದ ಎಲ್ಲಾ ಇಲಾಖೆಗಳು, ನಿಗಮ-ಮಂಡಳಿ,ಪ್ರಾಧಿಕಾರ, ವಿಶ್ವವಿದ್ಯಾಲಯಗಳು, ಸ್ಥಳೀಯ ಸಂಸ್ಥೆಗಳು, ಸ್ವಾಯತ್ತ ಸಂಸ್ಥೆ ಮತ್ತು ಅನುದಾನಿತ ಸಂಸ್ಥೆಗಳು ಹಾಗೂ ರಾಜ್ಯ ನಿವೃತ್ತ ನೌಕರರ ಸಂಘವೂ ಸೇರಿದಂತೆ ವೃಂದ ಸಂಘಗಳ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಮುಂದಿನ ಹೋರಾಟದ ರೂಪು-ರೇಷೆಗಳ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದೆ.
ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿನ ಪ್ರಮುಖ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸದೇ ಇದ್ದಲ್ಲಿ ಅನಿವಾರ್ಯವಾಗಿ ದಿನಾಂಕ 29/07/2024ರಿಂದ ಅನಿರ್ದಿಷ್ಟಾವದಿಯವರೆಗೆ ಕಚೇರಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಹೋರಾಟವನ್ನು ನಡೆಸಲಾಗುವುದು.
ಸರ್ಕಾರವು ರಾಜ್ಯ ಸರ್ಕಾರಿ ನೌಕರರು ಹೋರಾಟ ಮಾರ್ಗ ಹಿಡಿಯಲು ಅವಕಾಶ ಮಾಡಿಕೊಡದೆ ಸಂಘದ ಮೇಲ್ಕಂಡ ಬೇಡಿಕೆಗಳ ಕುರಿತಂತೆ ಸರ್ಕಾರಿ ಆದೇಶ ಹೊರಡಿಸುವಂತೆ ಸಂಘವು ಈ ಮೂಲಕ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಮಾಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications