7th Pay Commission; ಲೋಕಸಭಾ ಚುನಾವಣೆ ಮುನ್ನವೆ ರಾಜ್ಯದಲ್ಲಿ 7 ನೇ ವೇತನ ಆಯೋಗದ ವರದಿ ಜಾರಿ!?
ಬೆಂಗಳೂರು, ಮಾರ್ಚ್ 14: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇದೇ ಹೊತ್ತಲ್ಲಿ ಕಾಜ್ಯ ಸರ್ಕಾರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶಿಸಿದೆ. ಆದರೆ, ನೌಕರರ ಬಹುದಿನಗಳ ಬೇಡಿಕೆಯಾದ 7 ನೇ ವೇತನ ಆಯೋಗದ ವರದಿ ಮಾತ್ರ ಜಾರಿಯಾಗುತ್ತಿಲ್ಲ. ಈ ವೇಳೆ ಅಪ್‌ಡೇಟ್ ಸಿಕ್ಕಿದ್ದು, ಯಾವುದೇ ಕ್ಷಣದಲ್ಲಿ ಆಯೋಗದ ವರದಿ ಜಾರಿಯಾಗುವ ಸಂಭವವಿದೆ.
ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದ ಕೆ. ಸುಧಾಕರ್ ನೇತೃತ್ವದಲ್ಲಿ ರಾಜ್ಯ 7ನೇ ವೇತನ ಆಯೋಗವನ್ನು ರಚನೆ ಮಾಡಿದೆ. ಈ ವೇತನ ಆಯೋಗದ ಅವಧಿ ಮಾರ್ಚ್ 15ಕ್ಕೆ ಅಂತ್ಯವಾಗುತ್ತಿದೆ. ಈ ಹಿಂದೆಯೇ ಆಯೋಗದ ಅವಧಿಯ್ನು ವಿಸ್ತರಿಸಿದ್ದ ಕಾರಣ ಮತ್ತೆ ವಿಸ್ತರಣೆ ಮಾಡಬಾರದು ಎಂಬ ದೊಡ್ಡ ಒತ್ತಡ ಸರ್ಕಾರದ ಮೇಲಿದೆ. ಇದೇ ಕಾರಣಕ್ಕೆ ವರದಿ ಯಾವುದೇ ಕ್ಷಣದಲ್ಲಿಯಾದರೂ ಜಾರಿಯಾಗಬಹುದು ಎಂದು ಹೇಳಲಾಗುತ್ತಿದೆ.

ಕಳೆದ ವರ್ಷದ ಜೂನ್ ತಿಂಗಳಿನಲ್ಲಿಯೇ ವೇತನ ಆಯೋಗ ಪರಿಷ್ಕರಣೆ ಆಗಬೇಕಿತ್ತು. ಆದರೆ, ಆಯೋಗದ ಅವಧಿಯನ್ನು ವಿಸ್ತರಿಸುತ್ತಿದ್ದ ಕಾರಣ ಈಗ ಮತ್ತೆ ವಿಸ್ತರಣೆ ಮಾಡುವಂತಿಲ್ಲ ಎಂದು ಸರ್ಕಾರಿ ನೌಕರರು ಪಟ್ಟು ಹಿಡಿದಿದ್ದಾರೆ. ಆಯೋಗದ ಮುಕ್ತಾಯ ಆಗುತ್ತಿದ್ದು, ಯಾವುದೇ ಕ್ಷಣದಲ್ಲಿಯೂ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.
ವರದಿ ಸಲ್ಲಿಕೆಯಾದ ತಕ್ಷಣವೇ ಅನುಷ್ಠಾನ ಆಗುವುದು ನಿಶ್ಚಿತ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹೊತ್ತಲ್ಲಿ ಆಯೋಗದ ವರದಿ ಅನುಷ್ಠಾನವಾದರೇ ಚುನಾವಣೆ ಮೇಲು ಪ್ರಭಾವ ಬೀರುವ ಸಾಧ್ಯತೆಯಿದೆ. ಇದನ್ನು ಸರ್ಕಾರ ತನ್ನ ಪ್ರಚಾರಕ್ಕೂ ಬಳಸಿಕೊಳ್ಳುವ ಸಂಭವವಿದೆ.
ಶೇಕಡಾ 25 ರಷ್ಟು ವೇತನ ಹೆಚ್ಚಳ
ಕೇಂದ್ರ ಮತ್ತು ರಾಜ್ಯ ಸರ್ಕಾರ ನೌಕರರ ನಡುವೆ ಇರುವ ಶೇ.67 ರಷ್ಟು ವ್ಯತ್ಯಾಸವನ್ನು ಸರಿಪಡಿಸುವ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ರಾಜ್ಯ ಸರ್ಕಾರಿ ನೌಕರರ ಒತ್ತಾಯ. ಸಿಎಂ ಸಿದ್ದರಾಮಯ್ಯ ತಮ್ಮ 15ನೇ ಬಜೆಟ್‌ನಲ್ಲಿ 13 ಸಾವಿರ ಕೋಟಿ ರೂಪಾಯಿಗಳನ್ನು ವೇತನ ಆಯೋಗದ ವರದಿ ಜಾರಿಗೆ ಮೀಸಲಿಟ್ಟಿದ್ದಾರೆ. 13 ಸಾವಿರ ಕೋಟಿ ರೂ. ಮೀಸಲಿಟ್ಟಿರುವುದದಿಂದ ವೇತನದಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಬಹುದು ಎಂದು ಅಂದಾಜು ಮಾಡಲಾಗಿದೆ.

ರಾಜ್ಯದಲ್ಲಿ 5.11 ಲಕ್ಷ ಸರ್ಕಾರಿ ನೌಕರರು ಇದ್ದಾರೆ. ರಾಜ್ಯದಲ್ಲಿ ಇರುವ ಪಿಂಚಣಿದಾರರ ಸಂಖ್ಯೆ 5.62 ಲಕ್ಷವಿದೆ. ಇನ್ನು, ವೇತನ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಅದನ್ನು ಯಥಾವತ್ತಾಗಿ ಜಾರಿ ಮಾಡುತ್ತದೆ ಎಂಬ ವಿಶ್ವಾಸದಲ್ಲಿ ಸರ್ಕಾರಿ ನೌಕರರಿದ್ದಾರೆ. ಸರ್ಕಾರ ಬಜೆಟ್‌ನಲ್ಲಿ ಹಣ ಕೂಡ ಮೀಸಲಿಟ್ಟಿರುವುದರಿಂದ ನೌಕರರು ಸರ್ಕಾರದ ಮೇಲೆ ವಿಶ್ವಾಸವಿಟ್ಟಿದ್ದಾರೆ.
ಇನ್ನು, ಏಳನೇ ವೇತನ ಆಯೋಗದ ಶಿಫಾರಸು ಮುಂದಿನ ಹಣಕಾಸು ವರ್ಷದಲ್ಲಿ ಜಾರಿಗೆ ಬಂದರೆ ಸರ್ಕಾರದ ಬೊಕ್ಕಸಕ್ಕೆ 15 ರಿಂದ 20 ಸಾವಿರ ಕೋಟಿ ರೂಪಾಯಿ ಹೊರೆ ಬೀಳುತ್ತದೆ. ಎನ್‌ಪಿಎಸ್ ರದ್ದು ಮಾಡಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವುದು 4.5% ಹೆಚ್ಚಿನ ಹೊರೆ ಎಂಬ ಆರ್‌ಬಿಐ ಪ್ರಸ್ತಾಪವೂ ಇದೆ.











Click it and Unblock the Notifications