Breaking: ಅಯೋಧ್ಯೆಗೆ ಹೊರಟ ಒಂದೇ ಕುಟುಂಬದ 7 ಮಂದಿ ದುರ್ಮರಣ: ಸಿಎಂ ಸಂತಾಪ
ಲಕ್ನೋ, ಮೇ 29: ಉತ್ತರ ಪ್ರದೇಶದ ಲಖೀಂಪುರ್ ಖೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮೃತಪಟ್ಟವರು ಕರ್ನಾಟಕದವರು.
ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟವರೆಲ್ಲ ಬೀದರ್ ಜಿಲ್ಲೆಯವರಾಗಿದ್ದು, ಅಯೋಧ್ಯೆ ಯಾತ್ರೆಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಈ ಘಟನೆಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.
ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸಾ ಸೌಲಭ್ಯ ಒದಗಿಸುವ ಜೊತೆಗೆ ಮೃತದೇಹಗಳನ್ನು ರಾಜ್ಯಕ್ಕೆ ತರಲು ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪುಣ್ಯಭೂಮಿ ಅಯೋಧ್ಯೆಗೆ ತೆರಳುತ್ತಿದ್ದ ಬೀದರನ ಪ್ರವಾಸಿಗರ ತಂಡದ ಬಸ್ ಉತ್ತರಪ್ರದೇಶದ ಲಖೀಂಪುರಖೇರಿ ಬಳಿ ಭೀಕರ ಅಪಘಾತಕ್ಕೆ ಒಳಗಾಗಿ ಒಂದೇ ಕುಟುಂಬದ 7 ಜನ ಅಸುನೀಗಿ, 9ಜನ ಗಾಯಗೊಂಡಿರುವ ಸುದ್ದಿ ತಿಳಿದು ಅತ್ಯಂತ ದುಃಖಿತನಾಗಿದ್ದೇನೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸುತ್ತಾ, ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
— Basavaraj S Bommai (@BSBommai) May 29, 2022
ಯೋಗಿ ಆದಿತ್ಯನಾಥ್ ಜೊತೆ ಚರ್ಚೆ: ಉತ್ತರ ಪ್ರದೇಶ ಲಖೀಂಪುರ್ ಖೇರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ ಸ್ಥಳದಲ್ಲಿ ಜಿಲ್ಲಾಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸಿದೆ. ರಾಜ್ಯದ ಪ್ರವಾಸಿಗರ ಸುರಕ್ಷತೆ, ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಕುರಿತಂತೆ ಈಗಾಗಲೇ ತಾವು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.













Click it and Unblock the Notifications