Kannada in Spain: ಸ್ಪೇನ್ ದೇಶದಲ್ಲಿ ಕನ್ನಡ ತರಗತಿಗಳು ಆರಂಭ
ಬೆಂಗಳೂರು, ನವೆಂಬರ್ 03: 69ನೇ ಕರ್ನಾಟಕ ರಾಜ್ಯೋತ್ಸವವನ್ನು ಈ ಬಾರಿ ಕನ್ನಡ ಸಾಹಿತ್ಯ ಪರಿಷತ್ 'ಸ್ಪೇನ್' (Spain) ದೇಶದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇಲ್ಲಿನ ರಚನಾತ್ಮಕ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಸ್ಪೇನ್ ದೇಶದ ರಾಯಭಾರಿ ಅವರು ಕನ್ನಡ ಚಟವಟಿಕೆಗಳಿಗೆ ಬೇಕಾದ ಸ್ಥಳಾವಕಾಶ ಒದಗಿಸುವುದಾಗಿ ತಿಳಿಸಿದ್ದಾರೆ ಎಂದು ಪರಿಷತ್ ಮಾಹಿತಿ ನೀಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಅವರು ವಿದೇಶದಲ್ಲಿ ಕನ್ನಡ ಕಲರವವನ್ನು ಹಂಚುವ ತಮ್ಮ ಯೋಜನೆಯ ಅಂಗವಾಗಿ ಯುರೋಪ್ ಪ್ರವಾಸದಲ್ಲಿದ್ದಾರೆ. ಇದರ ಅಂಗವಾಗಿ ಅವರು ಸ್ಪೇನ್ ದೇಶದ ವಾಣಿಜ್ಯ ನಗರಿ ಬಾರ್ಸಿಲೋನಾದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಎರಡೂ ಸಂಭ್ರಮಾಚರಣೆಗಳು ಸೇರಿದ "ದೀಪೋತ್ಸವ" ಎನ್ನುವ ವಿಶಿಷ್ಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸ್ಪೇನ್ ದೇಶದ ಬಾರ್ಸಿಲೋನಾದಲ್ಲಿ ಭಾರತದ ಹೊಸ ರಾಯಭಾರಿ ಕಚೇರಿಯಲ್ಲಿ ಕನ್ನಡ ತರಗತಿ ಪ್ರಾರಂಭವಾಗಲಿದೆ ಎಂದು ಇದೇ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಮಾಹಿತಿ ನೀಡಿದ್ದಾರೆ.
87ನೇ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನ
ಬಾರ್ಸಿಲೋನಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಕೌನ್ಸಿಲ್ ಜನರಲ್ ಇಭಾಸ್ಕರ್ ಸುಂದರಮೂರ್ತಿ ಮತ್ತು ಸ್ಪೇನ್ ದೇಶದ ಸೆನೆಟರ್ ಆಗಿರುವ ಭಾರತ ಮೂಲದ ರಾಬರ್ಟ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕಾರ್ಯಕ್ರಮ, ಅದರ ಮಹತ್ವವನ್ನು ತಿಳಿಸಿದರು.

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವಂತೆ ಅಲ್ಲಿನ ಕನ್ನಡಿಗರು ಹಾಗೂ ರಾಯಭಾರಿಗಳಿಗೆ ವಿನಂತಿಸಿಕೊಂಡರು.
ವಿದೇಶದಲ್ಲಿರುವ ಕನ್ನಡಿಗರನ್ನೂ ಒಳಗೊಳ್ಳುವ ಪ್ರಯತ್ನವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಇದೇ ಮೊಟ್ಟಮೊದಲ ಬಾರಿಗೆ ಮಾಡುತ್ತಿದ್ದಾರೆ. ಎಂದು ಅಲ್ಲಿದ್ದ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ 'ಸ್ಪೇನ್ ಕನ್ನಡ ಕೂಟ' ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಕನ್ನಡ ತರಗತಿ ನಡೆಸಲು ಸೌಲಭ್ಯ ಪೂರೈಕೆ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಬಂದಿರುವ ಕಾರಣಕ್ಕೆ ತಾವು ಕಾರ್ಯಕ್ರಮಕ್ಕೆ ಬಂದಿರುವುದಾಗಿ ಬಾರ್ಸಿಲೋನಾದಲ್ಲಿರುವ ಭಾರತದ ಕೌನ್ಸಿಲ್ ಜನರಲ್ ಇಭಾಸ್ಕರ್ ಸುಂದರಮೂರ್ತಿ ಹೇಳಿದರು. ಹೊಸದಾಗಿ ರೂಪುಗೊಳ್ಳುತ್ತಿರುವ ಭಾರತ ರಾಯಭಾರ ಕಚೇರಿಯಲ್ಲಿ ಕನ್ನಡ ತರಗತಿ ನಡೆಸಲು ಜಾಗದ ಜೊತೆಗೆ ಎಲ್ಲ ಮೂಲ ಸೌಕರ್ಯವನ್ನು ಸಹಾ ಒದಗಿಸುವುದಾಗಿಯೂ ಅವರು ತಿಳಿಸಿದರು. ಅಲ್ಲಿದ್ದವರು ಜೈ ಕನ್ನಡ ಎಂದು ಘೋಷಣೆ ಮೊಳಗಿಸಿದರು.
ಸ್ಪೇನ್ ಕನ್ನಡ ಕೂಟ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಒಟ್ಟಾಗಿ ಕನ್ನಡ ತರಗತಿಗಳನ್ನು ನಡೆಸುವುದಾಗಿ ಡಾ. ಮಹೇಶ್ ಜೋಶಿ ಅವರು ಹೇಳಿದರು. ಸ್ಪೇನ್ ನಲ್ಲಿನ ಕನ್ನಡಿಗರನ್ನು ಒಟ್ಟುಗೂಡಿಸುವ ರಚನಾತ್ಮಕ ಕ್ರಮಗಳ ಬಗ್ಗೆ ಅವರು ಬೆಳಕು ಚೆಲ್ಲಿದರು.
ಡಾ.ಪುನೀತ್ ರಾಜಕುಮಾರಸ್ವಾ ಸ್ಮರಿಸಿದ ಜೋಶಿ
ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಪವರ್ ಚಲನಚಿತ್ರ ಚಿತ್ರೀಕರಣಗೊಂಡ ಸ್ಥಳದಲ್ಲಿ ನಾಡೋಜ ಡಾ. ಮಹೇಶ್ ಜೋಶಿ ಅವರು ಪುನೀತ್ ಅವರನ್ನು ಸ್ಮರಿಸಿ ಗೌರವವನ್ನು ಅರ್ಪಿಸಿದರು.
ಸ್ಪೇನ್ ದೇಶದಲ್ಲಿ ಕನ್ನಡ ಕಲರವ ಹರಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಪ್ರಯತ್ನ ಸಫಲವಾಗಿದ್ದು, ಇದಕ್ಕೆ ಸ್ಪೇನ್ ಕನ್ನಡ ಕೂಟದ ಅಧ್ಯಕ್ಷ ಭರತ್ ಅನಂತರಾಮ್, ಖಜಾಂಚಿ ಸುಹಾಸ್ ಲಕ್ಷ್ಮಿಕಾಂತಯ್ಯ, ಉತ್ಸಾಹಿ ಬಸಂತ್ ಕುಮಾರ್ ಕಲಬುರ್ಗಿ ಅವರನ್ನು ಒಳಗೊಂಡಂತೆ, ಅಲ್ಲಿ ಸೇರಿದ್ದ ದೊಡ್ಡ ಸಂಖ್ಯೆಯ ಕನ್ನಡಿಗರೇ ಸಾಕ್ಷಿಯಾಗಿದ್ದರು.
ಒಟ್ಟಾರೆ ಕರ್ನಾಟಕದಲ್ಲಿ ಕನ್ನಡ ಉಳಿಸಿ ಬೆಳೆಸುವಂತೆ ಕೇಳಿಕೊಳ್ಳುತ್ತಿರುವ ಸಂದರ್ಭದಲ್ಲಿ ವಿದೇಶದಲ್ಲಿ ಕನ್ನಡ ಕಂಪು ಪಸರಿಸುತ್ತಿರುವ ಕಸಾಪ ನಡೆಗೆ ಪ್ರಶಂಸೆ ವ್ಯಕ್ತವಾಗಿದೆ.












Click it and Unblock the Notifications