Karnataka Rains: ಜನವರಿಯಿಂದ ಈವರೆಗೆ ಸುರಿದ ಮಳೆಗೆ 69 ಜನ ಮೃತ: ಕೃಷ್ಣಭೈರೇಗೌಡ
ಬೆಂಗಳೂರು,ಮೇ 31: ರಾಜ್ಯದಲ್ಲಿ ಆಗಿರುವ ಮಳೆ ಹಾನಿಯ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮಾರ್ಚ್, ಮೇ ತಿಂಗಳಿನಲ್ಲಿ ಕೆಲಭಾಗದಲ್ಲಿ ಹೆಚ್ಚು ಮಳೆಯಾಗಿದ್ದು, ಜನವರಿಯಿಂದ ಈವರೆಗೆ ಸುರಿದ ಮಳೆಗೆ 69 ಜನ ಮೃತಪಟ್ಟಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜನವರಿ ಈಚೆಗೆ ಮಾರ್ಚ್, ಮೇ ನಲ್ಲಿ ಕೆಲ ಜಿಲ್ಲೆಯಲ್ಲಿ ಮಳೆ ಆಗಿದೆ. 67 ಮಂದಿ ಪ್ರಾಣಹಾನಿ ಆಗಿದೆ. 60 ಮಂದಿ ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಉಳಿದವರಿಗೆ ಪರಿಹಾರ ನೀಡುತ್ತೇವೆ. 487 ಜಾನುವಾರು ಪ್ರಕೃತ ವಿಕೋಪಕ್ಕೆ ಬಲಿಯಾಗಿವೆ ಎಂದು ಹೇಳಿದರು.

ಇನ್ನೂ ಸರ್ಕಾರದಿಂದ ಪರಿಹಾರ ನೀಡುವ ಕಾರ್ಯ ಆಗಲಿದೆ. 1400 ಮನೆಗಳಿಗೆ ಮಳೆಯಿಂದ ಭಾಗಶಃ ಹಾನಿ ಆಗಿದೆ. ಇತ್ತ ಬೆಳೆ 20160 ಹೆಕ್ಟೇರ್ ಪ್ರದೇಶದಲ್ಲಿ ಹಾನಿ ಆಗಿದೆ. ಬೆಳೆಹಾನಿಗೆ ರೈತರ ಖಾತೆಗೆ ನೇರವಾಗಿ ಹಣ ಜಮಾವಣೆ ಆಗಲಿದೆ. ಪರಿಹಾರ ಪೋರ್ಟಲ್ ಆರಂಭಿಸಲು ಸೂಚಿಸಿದ್ದೇವೆ. ಅಧಿಕಾರಿಗಳಿಗೂ ಮಾಹಿತಿ ನೀಡುವಂತೆ ಸೂಚಿಸಿದ್ದೇವೆ ಎಂದರು.
ಈ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಪರಿಹಾರದ ಮೊತ್ತ ನಿಗದಿ ಆಗಲಿದೆ ಎಂದು ತಿಳಿಸಿದ ಅವರು, 538 ಕೋಟಿ ರೂ. ಜಿಲ್ಲಾಧಿಕಾರಿ ಖಾತೆಯಲ್ಲಿ ಲಭ್ಯವಿದೆ. ಕೊರತೆ ಇರುವಲ್ಲಿ ಒಂದೆರಡು ದಿನದಲ್ಲಿ ತಲುಪಿಸುತ್ತೇವೆ.
ಪ್ರಕೃತಿ ವಿಕೋಪ ಪ್ರಕರಣ ಎದುರಿಸಲು ಆಡಳಿತ ಸಜ್ಜಾಗುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ಬಾರಿ ವಾಡಿಕೆಯಂತೆ ಮಳೆ ಆಗಲಿದೆ. ಜೂನ್ ನಲ್ಲಿ ಕಲ್ಬುರ್ಗಿ, ಯಾದಗಿರಿ , ಬೀದರ್ ಇತರೆಡೆ ಸ್ವಲ್ಪ ಮಳೆ ಕಡಿಮೆಯಾಗಲಿದೆ ಎಂಬ ಮಾಹಿತಿ ಇದೆ. ಮಳೆ ಆದರೆ ರೈತರಿಗೆ, ಜನರಿಗೆ ಅನುಕೂಲ. ಹಳೇ ಪ್ರಕರಣ 1 ಲಕ್ಷ ಪರಿಹಾರ ಕೊಟ್ಟು, ಮನೆ ಸ್ಯಾಂಕ್ಷನ್ ಮಾಡಿಕೊಡುವ ಕೆಲಸ ಮಾಡಿದ್ದಾರೆ.
ಆದರೆ ಕೆಲವು ಕಡೆ ಸ್ಯಾಂಕ್ಷನ್ ಮಾಡಿಲ್ಲ. ಬೆಂಗಳೂರು ಸುತ್ತಮುತ್ತ ಬೊಗಸ್ ದಾಖಲೆ ಸಲ್ಲಿಸಿ ಕಬಳಿಸಿರುವ ಬಗ್ಗೆ ಸಭೆ ನಡೆಸಿ ಅಧಿಕಾರಿಗಳಿಗೆ ಸೂಚಿಸಿದ್ದೇವೆ.

ಖಾಸಗಿಯವರಿಗೆ ಸರ್ಕಾರಿ ಭೂಮಿ ನೀಡಿರುವ ಬಗ್ಗೆ ಹಿರಿಯ ಅಧಿಕಾರಿಗಳಿಂದ ರೀ ವೆರಿಫಿಕೇಷನ್ ಮಾಡಿಸಲು ಸೂಚಿಸಿದ್ದೇವೆ. ಅದರಲ್ಲಿ ತಪ್ಪುಗಳಾಗಿದ್ರೆ ಅದನ್ನ ಮತ್ತಷ್ಟು ಗಮನ ಹರಿಸಲು ಸೂಚಿಸಿದ್ದೇವೆ. ರೀಜಿನಲ್ ಕಮಿಷನರ್ ಮೂಲಕ ವೆರಿಫಿಕೇಷನ್ ಮಾಡಿಸಲು ಚರ್ಚೆ ಮಾಡುತ್ತಿದ್ದೇವೆ ಎಂದರು.
ಬಗರ್ ಹುಕುಂ ಸಾಗುವಳಿದಾರರ ಅರ್ಜಿ ವಿಲೇವಾರಿಗೆ ನೇಮಿಸಿದ್ದ ಸಮಿತಿ ವಜಾ ಗೊಂಡಿದೆ. ಮುಂದಿನ ಒಂದು ತಿಂಗಳಿನಲ್ಲಿ ಸಮಿತಿ ಮಾಡುತ್ತೇವೆ. ಅರಣ್ಯ ಮತ್ತು ಕಂದಾಯ ಇಲಾಖೆಯ ಜಮೀನಿನ ಬಗ್ಗೆ ಗೊಂದಲ ಮಲೆನಾಡು, ಕರಾವಳಿ ಭಾಗದಲ್ಲಿ ಸಾಕಷ್ಟು ಇದೆ. ಅರಣ್ಯ ಇಲಾಖೆ ಕಂದಾಯ ಇಲಾಖೆಯ ಜಂಟಿ ಸರ್ವೆ ಮಾಡಿಸುವ ಪ್ರಯತ್ನ ಮಾಡ್ತೇವೆ. ಅರಣ್ಯ ಇಲಾಖೆಯವರ ಜೊತೆ ಚರ್ಚೆ ಮಾಡಿ ಸರ್ವೆ ಮಾಡಿಸುವ ಕೆಲಸ ಮಾಡುತ್ತೇವೆ ಎಂದರು.
ಪಂಚ ಗ್ಯಾರಂಟಿಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಅಧಿಕಾರಿಗಳಿಂದ ಯಾವುದೇ ಗೊಂದಲ ಇಲ್ಲ. ಅದನ್ನ ಹೇಗೆ ಜಾರಿಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ, ಯಾವ ಅಧಿಕಾರಿಗಳು ಹಣಕಾಸಿನ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಧಿಕಾರಿಗಳು ಹಣಕಾಸಿನ ವಿಚಾರವಾಗಿ ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಅದರಲ್ಲಿ ಯಾವುದು ಸೂಕ್ತ ಎಂಬ ಬಗ್ಗೆ ಸಚಿವ ಸಂಪುಟ ತೀರ್ಮಾನ ಮಾಡಲಿದೆ. ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ ಎಂದರು.












Click it and Unblock the Notifications