Pothole: ರಾಜ್ಯದ 5 ಪ್ರಮುಖ ನಗರಗಳಲ್ಲಿ ಕೇವಲ 11 ತಿಂಗಳಲ್ಲಿ ರಸ್ತೆಗುಂಡಿಗೆ 558 ಬಲಿ!
Pothole: ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರಸ್ತೆಗುಂಡಿಗಳ ಸಮಸ್ಯೆ ವಿಪರೀತವಾಗಿದೆ. ಕೇವಲ ಪ್ರಮುಖ ನಗರಗಳಲ್ಲಿ ಮಾತ್ರವಲ್ಲ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ರಸ್ತೆಗುಂಡಿಗಳಿಂದ ಜನ ಹೈರಾಣಾಗಿದ್ದಾರೆ. ರಸ್ತೆಗುಂಡಿಯಿಂದ 558 ಜನ ಅಮಾಯಕರು ಸಾವನ್ನಪ್ಪಿದ್ದಾರೆ. ಕೇವಲ ಒಂದು ವರ್ಷದ ಅವಧಿಯೊಳಗಾಗಿ ರಾಜ್ಯದಲ್ಲಿ ಇಷ್ಟೊಂದು ಜನ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರು ಹೊರತುಪಡಿಸಿ ರಾಜ್ಯದ ಪ್ರಮುಖ 5 ಮಹಾನಗರ ಪಾಲಿಕೆಗಳಲ್ಲಿ ಕೇವಲ ಒಂದು ವರ್ಷದ ಒಳಗೆ (11 ತಿಂಗಳ ಅವಧಿಯಲ್ಲಿ) ರಸ್ತೆಗುಂಡಿ ಹಾಗೂ ರಸ್ತೆಗುಂಡಿಗೆ ಸಂಬಂಧಿಸಿದಂತಹ ಅಪಘಾತಗಳ ಸಂಖ್ಯೆ ವಿಪರೀತವಾಗಿದ್ದು, ಇದರಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಹೌದು ಬೆಂಗಳೂರಿನಲ್ಲೂ ರಸ್ತೆಗುಂಡಿಗಳ ಸಮಸ್ಯೆ ವಿಪರೀತವಾಗಿದೆ. ಆದರೆ, ಬೆಂಗಳೂರಿನಲ್ಲಿ ಅದೃಷ್ಟವಶಾತ್ ಯಾವುದೇ ಸಾವು - ನೋವು ಸಂಭವಿಸಿರುವುದು ವರದಿಯಾಗಿಲ್ಲ.

ಮೈಸೂರು, ಶಿವಮೊಗ್ಗ ತುಮಕೂರು, ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಲ್ಲಿ ರಸ್ತೆಗುಂಡಿ ಸಮಸ್ಯೆ ಹೆಚ್ಚಾಗಿದೆ. ಸುಮಾರು 79,000 ಸಾವಿರಕ್ಕೂ ಅಧಿಕ ಗುಂಡಿಗಳು ಈಗಲೂ ರಸ್ತೆಯಲ್ಲಿ ಕಿಲ್ಲರ್‌ಗಳಾಗಿ ಬಾಯ್ದೆರೆದುಕೊಂಡಿವೆ ಎಂದು "ವಿಜಯ ಕರ್ನಾಟಕ" ವರದಿ ಮಾಡಿದೆ. ರಸ್ತೆಗುಂಡಿಗಳಿಂದಾಗಿ 3,000 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳೆ ಹಾಗೂ ಅತಿವೃಷ್ಟಿಯಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು. ಈ ರಸ್ತೆಗಳನ್ನು ಸರಿಪಡಿಸುವ ಕೆಲಸ ಆಗಿಲ್ಲ. ಮಳೆ ಹಾಗೂ ಕಳಪೆ ಕಾಮಗಾರಿಗಳಿಂದಲೂ ರಸ್ತೆಗಳು ಹಾಳಾಗುತ್ತಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ಈ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಇನ್ನು ರಾಜ್ಯದಲ್ಲಿ ಪ್ರತಿ ವರ್ಷವೂ ಮಳೆ ಬಂದಾಗ ರಸ್ತೆ ಗುಂಡಿಗಳು ಸೃಷ್ಟಿಯಾಗುವುದು ಸಾಮಾನ್ಯವಾಗಿತ್ತು. ಆದರೆ ರಸ್ತೆಗುಂಡಿಗಳು ನಿರ್ಮಾಣವಾಗುತ್ತಿದ್ದಂತೆಯೇ ಅವುಗಳನ್ನು ಮುಚ್ಚುವ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ ಈಗ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಆರ್. ಅಶೋಕ್ ಟೀಕೆ
ಇನ್ನು ರಾಜ್ಯದಲ್ಲಿ ರಸ್ತೆಗುಂಡಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಬಗ್ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕೆ ಮಾಡಿದ್ದು. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾಜ್ಯದ 5 ಮಹಾನಗರಗಳಲ್ಲಿ ಕಳೆದ 11 ತಿಂಗಳಲ್ಲಿ ರಸ್ತೆಗುಂಡಿಗಳಿಂದ 558 ಸಾವುಗಳಾಗಿರುವ ಆತಂಕಕಾರಿ ಅಂಕಿ-ಅಂಶ ಬೆಳಕಿಗೆ ಬಂದಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅಸಮರ್ಥತೆಗೆ ಅಮಾಯಕ ನಾಗರಿಕರು ನಡುರಸ್ತೆಯಲ್ಲಿ ಪ್ರಾಣ ಬಿಡುವ ದುಸ್ಥಿತಿ ಎದುರಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ರಾಜ್ಯದ ಉದ್ದಗಲಕ್ಕೂ ಯಮಸ್ವರೂಪಿ ಗಂಡಾ ಗುಂಡಿಗಳದ್ದೇ ಹಾವಳಿಯಾಗಿದೆ. ಇಡೀ ರಾಜ್ಯದಲ್ಲಿ ರಸ್ತೆಗಳು ಹದಗೆಟ್ಟಿವೆ. ಜನಸಾಮಾನ್ಯರು, ವಾಹನ ಸವಾರರು ದಿನನಿತ್ಯ ಛೀ ಥೂ ಎಂದು ಸರ್ಕಾರಕ್ಕೆ ಉಗಿಯುತ್ತಿದ್ದರೂ ನಿಮ್ಮ ದಪ್ಪ ಚರ್ಮದ ಸರ್ಕಾರ ಮಾತ್ರ ಪವರ್ ಶೇರಿಂಗ್, ಬ್ರೇಕ್ ಫಾಸ್ಟ್ ಮೀಟಿಂಗ್ ಅಂತ ಸ್ವಾರ್ಥ ಸಾಧನೆಯಲ್ಲೇ ಮುಳುಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕೆ ಮಾಡಿದ್ದಾರೆ.












Click it and Unblock the Notifications