ಕಾಂಗ್ರೆಸ್ ಬಿಡಲು 50 ಶಾಸಕರು ರೆಡಿ: ಸ್ಟೋಟಕ ಹೇಳಿಕೆ ನೀಡಿದ ಮಾಜಿ ಸಚಿವ
ಬಾಗಲಕೋಟೆ,ಜನವರಿ 01: ರಾಜ್ಯ ಕಾಂಗ್ರೆಸ್ 135 ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೆ ಬಂದರು ಸಹ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಲಿದೆ ಎನ್ನುವ ಮಾತುಗಳು ಪದೇ ಪದೇ ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದೆ.
ಹೌದು, ಸರ್ಕಾರ ಲೋಕಸಭಾ ಚುನಾವಣೆಯ ಬಳಿಕ ಪತನಗೊಳಲಿದೆ ಎಂದು ಹಲವು ಬಿಜೆಪಿ ನಾಯಕರು ಭವಿಷ್ಯ ನುಡಿದಿದ್ದಾರೆ. ಈ ಕುರಿತು ಮಾಜಿ ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಕೋಮಾದಲ್ಲಿರುವ ಕಾಂಗ್ರೆಸ್, ಒಳ ಜಗಳಗಳಿಂದಲೇ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‌ನ 50 ಶಾಸಕರು ಪಕ್ಷ ತೊರೆಯಲು ತುದಿಗಾಲ ಮೇಲೆ ನಿಂತಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಸರಕಾರ ಚಾಲನೆ ನೀಡಿದ್ದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮಗ ಎಂದು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ಅವರ ಸಾರಥ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕಾಣಿಕೆ ನೀಡಬೇಕು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಮಾತನಾಡಿ, ಅಭಿವೃದ್ಧಿ ಮರೆತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಯಾವಾಗ ಬೇಕಾದರೂ ಪತನವಾಗಬಹುದು. ಒಂದು ವೇಳೆ ರಾಜ್ಯದಲ್ಲಿ ನಾಳೆ ವಿಧಾನಸಭೆ ಚುನಾವಣೆ ಬಂದರೂ ಬಿಜೆಪಿ 140 ಸ್ಥಾನದಲ್ಲಿ ಗೆಲುವು ಸಾಧಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡುವವರೆಗೆ ನಾನು ವಿಶ್ರಮಿಸುವುದಿಲ್ಲ ಎಂದು ಶಪಥ ಮಾಡಿದ್ದೇನೆ ಎಂದು ವಿಜಯೇಂದ್ರ ಹೇಳಿದರು.
ರಾಜ್ಯದಲ್ಲಿ ಮಳೆ , ಬೆಳೆ ಇಲ್ಲದೆ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಗಿ ನೋಡಲಿಲ್ಲ. ಅಲ್ಪಸಂಖ್ಯಾತರಿಗೆ ಸಿದ್ದರಾಮಯ್ಯ ಅವರು ಸಾವಿರ ಕೋಟಿ ರುಪಾಯಿ ನೀಡುವುದಾಗಿ ಹೇಳಿದ್ದಾರೆ. ಅದೇ ಹಣವನ್ನು ಉತ್ತರ ಕರ್ನಾಟಕ್ಕೆ ನೀಡಿದರೆ ಇಲ್ಲಿನ ಜ್ವಲಂತ ಸಮಸ್ಯೆಗಳೇ ಬಗೆಹರಿಯುತ್ತಿದ್ದವು. ದಿನದ 24 ಗಂಟೆ ಅಲ್ಪಸಂಖ್ಯಾತರ ಬಗ್ಗೆ ಚಿಂತನೆ ನಡೆಸುವ ಸಿಎಂಗೆ ಬಡವರ, ರೈತರ ಹಾಗೂ ದೀನ ದಲಿತರ ಸಮಸ್ಯೆಗಳ ಬಗ್ಗೆ ಗಮನವಿಲ್ಲ. ಮುಂಬರುವ ಲೋಕಸಭೆ ಚುನಾವಣೆಗಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ನೀವು ರಾಜ್ಯಕ್ಕೆ ಸಿಎಂ, ಕೇವಲ ಅಲ್ಪಸಂಖ್ಯಾತರಿಗಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸೀಟ್‌ಗಳನ್ನು ಗೆಲ್ಲಿಸೋಣ. ವ್ಯತ್ಯಾಸ ಬದಿಗಿಟ್ಟು, ಕಾರ್ಯಕರ್ತರಿಂದಲೇ ನಾವು ಶಾಸಕ ಹಾಗೂ ಸಂಸದರಾಗಿದ್ದೇವೆ ಎಂಬುವುದನ್ನು ಅರಿತು, ಬೇಸರ ಪಡದೇ ಪಕ್ಷ ಸಂಘಟಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.












Click it and Unblock the Notifications