ಚಾಮರಾಜನಗರ: ಕಾಡು ಕುರಿ ಬೇಟೆಯಾಡಿದ್ದ ಐವರ ಬಂಧನ
ಚಾಮರಾಜನಗರ, ಜನವರಿ,07 : ಕಾಡಿನಲ್ಲಿ ಅಕ್ರಮವಾಗಿ ಕಾಡು ಕುರಿ ಬೇಟೆ ಮಾಡಿ ಭಕ್ಷಿಸಿದ ಆರೋಪದ ಮೇಲೆ ಕೊಳ್ಳೇಗಾಲ ತಾಲೂಕಿನ ಬೈಲೂರು ಅರಣ್ಯ ವಲಯಕ್ಕೆ ಸೇರಿದ ಹೊನಮೇಟಿ ಎಸ್ಟೇಟ್ ನ ಐವರು ಕಾರ್ಮಿಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಹೊನಮೇಟಿ ಎಸ್ಟೇಟ್ ನ ಸಮೀಪದ ನೀಲಗಿರಿ ತೋಪಿನ ಬಳಿಯ ಎಸ್ಟೇಟ್ ಕಾರ್ಮಿಕರಾದ ಹೆಚ್.ಡಿ.ಕೋಟೆ ತಾಲೂಕಿನ ಜಿ.ವಿ.ಸರಗೂರು ಗ್ರಾಮದ ಶಿವಪ್ಪ, ಕೊಳ್ಳೇಗಾಲ ತಾಲೂಕಿನ ಉದ್ದಟ್ಟಿ ಗ್ರಾಮದ ಮಾರ, ನಂಜನಗೂಡು ತಾಲೂಕಿನ ನೇರಳೆ ಗ್ರಾಮದ ಸಿದ್ದಶೆಟ್ಟಿ, ಕೃಷ್ಣ, ಕೊಳ್ಳೇಗಾಲ ತಾಲೂಕಿನ ಪಿ.ಜಿ ಪಾಳ್ಯ ಗ್ರಾಮದ ಶಿವಣ್ಣ ಬಂಧಿತರು.[ಹೊಸ ವರ್ಷದ ಕೊಡುಗೆ : 3 ವೈದ್ಯಕೀಯ ಕಾಲೇಜು ಆರಂಭ]

ಈ ಐವರು ಆರೋಪಿಗಳು ಅರಣ್ಯದಲ್ಲಿದ್ದ ಕಾಡುಕುರಿಯನ್ನು ಭೇಟೆ ಮಾಡಿ ಭಕ್ಷಿಸಿದ್ದರು. ಈ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ವನ್ಯ ಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಆಹಾರ ಸಿಗದೆ ಆನೆ ಮರಿ ಸಾವನ್ನಪ್ಪಿತೇ?
ಚಾಮರಾಜನಗರ, ಜನವರಿ,07: ಕಾಡಿನಲ್ಲಿ ಅಡ್ಡಾಡುತ್ತಿದ್ದಾಗ ತಾಯಿ ಆನೆಯಿಂದ ಬೇರ್ಪಟ್ಟ ಆರು ತಿಂಗಳ ಗಂಡು ಆನೆ ಮರಿಯೊಂದು ಮೃತಪಟ್ಟಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯ ಅರಣ್ಯದ ವ್ಯಾಪ್ತಿಗೆ ಬರುವ ಆಲತ್ತೂರು ಗ್ರಾಮದ ಬಳಿ ಗಂಡಾನೆ ಸಾವನ್ನಪ್ಪಿದೆ.[ಆನೆಯನ್ನು ತುಂಡರಿಸಿ ಬಾವಿಗೆ ಹಾಕಿದ ರೈತ]

ಕೆಲವರು ಹುಲಿ ದಾಳಿಗೆ ಸತ್ತಿದೆ ಎಂದು ಹೇಳಿದರೆ, ಇನ್ನೂ ಕೆಲವರು ಆಹಾರ ಕೊರತೆಯಿಂದ ಸತ್ತು ಹೋಗಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ. ಮರಿ ಆನೆಯ ಕೊಳೆತ ಕಳೇಬರದ ಅಂತ್ಯಕ್ರಿಯೆ ನಡೆಸಲಾಗಿದೆ.












Click it and Unblock the Notifications