5 ಗ್ಯಾರಂಟಿ: ಸಿದ್ದರಾಮಯ್ಯಗೆ ಮಾಜಿ ಸಿಎಂ ಬೊಮ್ಮಾಯಿ ಪತ್ರ: ಆಗ್ರಹವೇನು?
ಬೆಂಗಳೂರು, ಮೇ 31: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂಪಾಯಿಗಳು ಬೇಕಾಗಬಹುದು ಎಂದು ಸರ್ಕಾರ ತಿಳಿಸಿದೆ. ಇದರ ಸಾಧಕ-ಬಾಧಕ, ಇನ್ನಿತರ ಕ್ಷೇತ್ರಗಳಿಗೆ ನೀಡಬೇಕಾದ ಅಧ್ಯತೆ, ಹಣಕಾಸಿನ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಗುರುವಾರ ಬೊಮ್ಮಾಯಿ ಅವರು ಬರೆದ ಪತ್ರದಲ್ಲಿ, ಆರಂಭದಲ್ಲಿ ತಾವು ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದಕ್ಕೆ ಸಿದ್ದರಾಮ್ಯನವರಿಗೆ ಅಭಿನಂದನೆ ತಿಳಿಸಿದ್ದಾರೆ. ಕಳೆದ ಎರಡು ವಾರದಿಂದ ತಾವು (ಸಿದ್ದರಾಮಯ್ಯ) ಕಾಂಗ್ರೆಸ್ ನೀಡಿರುವ ಐದು ಗ್ಯಾರೆಂಟಿಗಳ ಅನುಷ್ಠಾನಕ್ಕಾಗಿ ಹಲವಾರು ಸಭೆಗಳನ್ನು ನಡೆಸಿದ್ದೀರಿ. ಅದರಲ್ಲಿಯೂ ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿರುವುದು ತಿಳಿದಿದೆ.

ಸರ್ಕಾರವೇ ತಿಳಿಸಿರುವಂತೆ ಎಲ್ಲ ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನ ಮಾಡಲು ಸುಮಾರು 50,000 ಕೋಟಿ ರೂಪಾಯಿ ಬೇಕೆಂದು ರಾಜ್ಯದ ಜನತೆಗೆ ತಿಳಿಸಿದ್ದೀರಿ.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಸಂದರ್ಭದಲ್ಲಿ ಕೆಲವು ಎಚ್ಚರಿಕೆ ವಹಿಸುವುದು ರಾಜ್ಯದ ಪ್ರಮುಖ ಕ್ಷೇತ್ರಗಳಾದ ಶಿಕ್ಷಣ, ಆರೋಗ್ಯ, ಮಹಿಳಾ ಅಭಿವೃದ್ಧಿ, ಮೂಲಭೂತ ಸೌಕರ್ಯ, ರೈತರ, ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಹಿತ ಕಾಪಾಡುವುದು ಅವಶ್ಯಕತೆ ಇದೆ. ಈ ಕುರಿತು ಮಾತುಗಳು ಜನರಿಂದಲೇ ಕೇಳಿ ಬಂದಿದ್ದು, ಅದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಆವರ್ತ ನಿಧಿಯ ಹಣ ಕಡಿತ ಬೇಡ
ರೈತರಿಗೆ ನೀಡಲಾಗುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿ ಮೂರು ಲಕ್ಷದಿಂದ ಐದು ಲಕ್ಷಕ್ಕೆ ಏರಿಸಿರುವುದು ಯಾವುದೇ ಹಣಕಾಸಿನ ಕಡಿತ ಮಾಡುವುದು ಸೂಕ್ತವಲ್ಲ. ರೈತರ ಕನಿಷ್ಟ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಆವರ್ತ ನಿಧಿ 3500 ಕೋಟಿಗೆ ಹೆಚ್ಚಿಸಲು 2023-24 ರ ಆಯವ್ಯಯದಲ್ಲಿ 1500 ಕೋಟಿ ಒದಗಿಸಲಾಗಿದ್ದು ಇದು ಅತ್ಯಂತ ಅಗತ್ಯವಾಗಿದ್ದು ಇದನ್ನು ಕಡಿತಗೊಳಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ವಿವೇಕ ಯೋಜನೆ ಅಡಿಯಲ್ಲಿ 7,601 ಶಾಲಾ-ಕೊಠಡಿಗಳು ಹಾಗೂ ಇತರ ಯೋಜನೆ ಅಡಿಯಲ್ಲಿ ಸೇರಿ ಒಟ್ಟು 9,556 ಶಾಲಾ ಕೊಠಡಿಗಳ ನಿರ್ಮಾಣವನ್ನು ಪ್ರಸ್ತುತ ವರ್ಷ ಪೂರ್ಣಗೊಳಿಸುವ ಉದ್ದೇಶವಿದೆ. ಅದರಲ್ಲಿ ಅನುದಾನದ ಕಡಿತ ಮಾಡಬಾರದು ಎಂದರು.
ರೈತರು, ಕಾರ್ಮಿಕರು, ಮೀನುಗಾರರು, ನೇಕಾರರು ಇತರಿರಿಗೆ ರೈತ ವಿದ್ಯಾನಿಧಿ ಕಾರ್ಯಕ್ರಮ ಮುಂದುವರೆಸುವ ಅಗತ್ಯತೆ ಇದೆ. ಅದಕ್ಕಾಗಿ ಹಿಂದಿನ ಆಯವ್ಯಯದಲ್ಲಿ ಸೂಕ್ತ ಅನುದಾನ ಒದಗಿಸಿದ್ದು, ಅದನ್ನು ಕಡಿತಗೊಳಿಸಬಾರದು ಎಂದು ಒತ್ತಾಯಿಸಿದರು.
ಬಿಜೆಪಿ ಒದಗಿಸಿದ ಅನುದಾನ ನಿಲ್ಲಿಸಬಾರದು: ಬೊಮ್ಮಾಯಿ
ಉಚಿತ ಡಯಾಲಿಸಿಸ್ ಸೇವೆ ಒಂದು ಲಕ್ಷ ಸೈಕಲ್‌ಗೆ ವಿಸ್ತರಣೆ ಮಾಡಿದ್ದು, ಹಾಗೂ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಕಿಮೊ ಥೆರಪಿ ಸೈಕಲ್ ಗಳನ್ನು ಹೆಚ್ಚಿಸುವಂತಹದ್ದು, ಮತ್ತು ಪಿಎಚ್ ಸಿಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಣ ಮಾಡುವ ಯೊಜನೆಗಳನ್ನು ಯಾವುದೇ ಕಾರಣಕ್ಕು ನಿಲ್ಲಿಸಬಾರದು.
ಮಹಿಳೆಯರಿಗೆ ಸ್ತ್ರೀ ಸಾಮರ್ಥ್ಯ ಯೋಜನೆ, ಮಹಿಳಾ ಮತ್ತು ಮಕ್ಕಳ ಪೌಷ್ಠಿಕ ಕಾರ್ಯಕ್ರಮಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭಿವೃದ್ಧಿಗೆ ಎಸ್ಸಿಪಿ, ಟಿಎಸ್ ಪಿ ಅನುದಾನವನ್ನು ಕಡಿತಗೊಳಿಸಲು ಮುಂದಾಗಬಾರದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನೀಡಿದ ಹಾಸ್ಟೆಲ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದಕ್ಕೆ ಅನುದಾನ ಕಡಿಮೆ/ಸ್ಥಗಿತಗೊಳಿಸಿದಂತೆ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಗಳಾದ 'ಜಲಜೀವನ್ ಮಿಷನ್, ಗೃಹ ನಿರ್ಮಾಣ, ನೀರಾವರಿ ಯೋಜನೆ, ಪಂಚಾಯತಿಗೆ ಅನುದಾನ ಕೊರತೆಯಾಗದಂತೆ ನೋಡಿಕೊಳ್ಳುವುದು. ಅದೇ ರೀತಿ ರಾಜ್ಯ, ಜಿಲ್ಲಾ ರಸ್ತೆಗಳ ನಿರ್ಮಾಣ ಪ್ರಗತಿಯನ್ನು ಮೊಟಕುಗೊಳಿಸಬಾರದು ಹಾಗೂ ಕೇಂದ್ರ ರಾಜ್ಯ ಸಹಭಾಗಿತ್ವದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಹಣಕಾಸು ಒದಗಿಸಬೇಕು ಎಂದು ಹೇಳಿದರು.
ಬೆಂಗಳೂರು ಅಭಿವೃದ್ಧಿ ಯೋಜನೆ ಮುಂದುವರೆಸಿ
ನಗರ ಪ್ರದೇಶಗಳಲ್ಲಿ ನಗರೊತ್ಥಾನ ಸ್ಮಾರ್ಟ್ ಸಿಟಿ ಯೊಜನೆ ಮೆಟ್ರೊ, ಉಪನಗರ ಯೋಜನೆಗಳನ್ನು ಮುಂದುವರೆಸುವುದು ಬೆಂಗಳೂರಿನ ಅಭಿವೃದ್ಧಿಗೆ ಅತೀ ಅವಶ್ಯವಿರುತ್ತದೆ ಎಂದು ಬೊಮ್ಮಾಯಿ ವಿವರಿಸಿದರು.
ಈ ಮೇಲಿನ ಎಲ್ಲ ವಿಷಯಗಳ ಜೊತೆಗೆ ಇತರ ಇಲಾಖೆಗಳ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಮುಂದುವರೆಸಬೇಕು. ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಅವಶ್ಯಕತೆ ಇದೆ. ಇದರ ಬಗ್ಗೆ ಅನುದಾನವನ್ನು ಖಚಿತಪಡಿಸಿ ಆ ಬಗ್ಗೆ ಸಮಗ್ರ ಮಾಹಿತಿ ರಾಜ್ಯದ ಜನತೆಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಗ್ಯಾರೆಂಟಿ ಯೋಜನೆಗಳಿಗೆ 50 ಸಾವಿರ ಕೋಟಿ ರೂಪಾಯಿ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ಬಿಗಡಾಯಿಸಬಾರದು. ರಾಜ್ಯದ ಜನತೆಯ ಮೇಲೆ ಅಪರೊಕ್ಷವಾಗಿ ಹೆಚ್ಚಿನ ಭಾರ ಬೀಳಬಾರದೆಂದು ಈ ಪತ್ರ ಬರೆದು ತಿಳಿಸುತ್ತಿದ್ದೇನೆ ಎಂದರು.












Click it and Unblock the Notifications