ಬೆಂಗಳೂರಿನ 5 ಕಟ್ಟಡ ಅತಿ ಭದ್ರತಾ ವಲಯ, ಕೆಐಎಎಸ್‌ಎಫ್ ಭದ್ರತೆ
ಬೆಂಗಳೂರು, ಜುಲೈ 15 : ಬೆಂಗಳೂರಿನ 5 ಪ್ರತಿಷ್ಠಿತ ಕಟ್ಟಡಗಳಿಗೆ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ರಕ್ಷಣೆ ದೊರೆಯಲಿದೆ. ಐದೂ ಕಟ್ಟಡಗಳನ್ನು ಅತಿ ಭದ್ರತಾ ವಲಯ ಎಂದು ಘೋಷಣೆ ಮಾಡಲಾಗುತ್ತಿದ್ದು, ಶಸ್ತ್ರ ಸಜ್ಜಿತ ಪೊಲೀಸರು ರಕ್ಷಣೆಗೆ ನಿಲ್ಲಲಿದ್ದಾರೆ.
ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಕೆಪಿಎಸ್‌ಸಿ ಕಚೇರಿ ಮತ್ತು ಕರ್ನಾಟಕ ಹೈಕೋರ್ಟ್ ಭದ್ರತೆಯ ಹೊಣೆ ಕೆಐಎಎಸ್‌ಎಫ್ ನಿಯಂತ್ರಣಕ್ಕೆ ಬರಲಿದೆ. ಈ ಎಲ್ಲಾ ಕಟ್ಟಡದ ಆವರಣದಲ್ಲಿ ಕೆಐಎಎಸ್‌ಎಫ್ ನಿಯಂತ್ರಣ ಕೊಠಡಿ ನಿರ್ಮಾಣವಾಗಲಿದೆ.
ಈ ಕಟ್ಟಡಗಳನ್ನು ಅತಿ ಭದ್ರತಾ ವಲಯ ಎಂದು ಘೋಷಣೆ ಮಾಡಿ ಕೆಐಎಎಸ್‌ಎಫ್ ರಕ್ಷಣೆ ಒದಗಿಸಬೇಕು ಎಂದು ಪೊಲೀಸರು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಈಗ ಇಲಾಖೆ ಒಪ್ಪಿಗೆ ನೀಡಿದೆ. ಐದೂ ಕಟ್ಟಡಗಳ ರಕ್ಷಣೆಗೆ ಶಸ್ತ್ರ ಸಜ್ಜಿತ ಗಸ್ತು ತಿರುಗಲಿದ್ದಾರೆ.

ಗೃಹ ಸಚಿವ ಮತ್ತು ಉಪ ಮುಖ್ಯಂತ್ರಿ ಡಾ.ಜಿ.ಪರಮೇಶ್ವರ ಅವರು ಈ ಕುರಿತು ಮಾಹಿತಿ ಹೇಳಿಕೆ ನೀಡಿದ್ದು, 'ಈ ಕಟ್ಟಡಗಳಿಗೆ ನಿತ್ಯ ಸಾವಿರಾರು ಜನ ಬಂದು ಹೋಗುತ್ತಾರೆ. ಹೀಗಾಗಿ ಅತಿ ಭದ್ರತೆಯ ವಲಯವೆಂದು ಪರಿಗಣಿಸಲು ನಿರ್ಧರಿಸಿದ್ದೇವೆ. ನೂರು ಸಿಬ್ಬಂದಿ ಇರುವ ಪ್ರತ್ಯೇಕ ದಳ ಭದ್ರತೆ ಒದಗಿಸಲಿದೆ' ಎಂದು ಹೇಳಿದ್ದಾರೆ.
2015ರಲ್ಲಿ ಪೊಲೀಸ್ ಇಲಾಖೆ ಈ ಕುರಿತು ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈಗ ಇದಕ್ಕೆ ಒಪ್ಪಿಗೆ ಸಿಕ್ಕಿದೆ. ಈ ಐದೂ ಕಟ್ಟಡದ ಆವರಣದಲ್ಲಿ ಕೆಐಎಎಸ್‌ಎಫ್ ನಿಯಂತ್ರಣ ಕೊಠಡಿ ನಿರ್ಮಾಣವಾಗಲಿದೆ. ದಿನದ 24 ಗಂಟೆಯೂ ಶಸ್ತ್ರ ಸಜ್ಜಿತ ಪೊಲೀಸರು ಪಹರೆ ಕಾಯಲಿದ್ದಾರೆ.












Click it and Unblock the Notifications