Gram Panchayat; ಬಾಪೂಜಿ ಸೇವಾ ಕೇಂದ್ರದಲ್ಲಿ ಹೊಸ 44 ಸೇವೆ, ಶುಲ್ಕದ ವಿವರಗಳು
ಬೆಂಗಳೂರು, ಅಕ್ಟೋಬರ್ 25: ಕರ್ನಾಟಕ ಸರ್ಕಾರ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ವಿವಿಧ ಹೊಸ ಸೇವೆಗಳನ್ನು ನೀಡುತ್ತಿದೆ. ಈ ಮೂಲಕ ಜನರು ವಿವಿಧ ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಮುಂದಾಗಿದೆ. ಈಗ ಒಟ್ಟು 44 ಸೇವೆಗಳನ್ನು ನೀಡುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ.
ಶುಭ ಕಲ್ಯಾಣ್, ನಿರ್ದೇಶಕರು, ಇ-ಆಡಳಿತ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಪಂಚತಂತ್ರ 2.0 ತಂತ್ರಾಂಶದ ಮೂಲಕ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಟಲ್ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳನ್ನು ಒದಗಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಸುತ್ತೋಲೆಯಲ್ಲಿ ಕಂದಾಯ ಇಲಾಖೆಯ ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದಡಿ ನಾಡಕಛೇರಿಗಳಲ್ಲಿ ಒದಗಿಸಲಾಗುತ್ತಿರುವ 44 ಸೇವೆಗಳನ್ನು ಪಡೆಯಲು ಜನರು ಹೋಬಳಿ ಮಟ್ಟದಲ್ಲಿರುವ ಅಟಲ್ ಜೀ ಜನಸ್ನೇಹಿ ಕೇಂದ್ರ/ ನಾಡಕಛೇರಿಗಳಿಗೆ ಭೇಟಿ ನೀಡಬೇಕಾಗಿರುತ್ತದೆ. ಪ್ರತಿಯೊಂದು ಹೋಬಳಿಯಲ್ಲಿ ಆರರಿಂದ ಏಳು ಗ್ರಾಮ ಪಂಚಾಯತಿಗಳನ್ನು ಹೊಂದಿರುತ್ತದೆ ಎಂದು ಹೇಳಿದೆ.
ಈ ಎಲ್ಲಾ ಗ್ರಾಮ ಪಂಚಾಯತಿಯ ಸುಮಾರು 20-50 ಸಾವಿರ ಜನರು, ಸರ್ಕಾರಿ ಸೇವೆಗಳನ್ನು ಹೋಬಳಿ ಮಟ್ಟದಲ್ಲೇ ಪಡೆಯಬೇಕಾದುದರಿಂದ ಜನಸಂದಣಿ ಹೆಚ್ಚುವುದರ ಜೊತೆಗೆ ಕೇಂದ್ರದಲ್ಲಿ ತ್ವರಿತ ಗತಿಯಲ್ಲಿ ಸೇವೆಯನ್ನು ಒದಗಿಸುವುದಕ್ಕೆ ತೊಡಕಾಗುತ್ತಿತ್ತು. ಜೊತೆಗೆ ಸಾರ್ವಜನಿಕರು ಸೇವೆಗಳನ್ನು ಪಡೆಯಲು ಸಾಕಷ್ಟು ದೂರ ಕ್ರಮಿಸಬೇಕಾದುದರಿಂದ ಸಾಕಷ್ಟು ಹಣ ವ್ಯಯಿಸಬೇಕಾಗುತ್ತಿತ್ತು ಎಂದು ವಿವರಿಸಿದೆ.
ಸುತ್ತೋಲೆಯ ಅಂಶಗಳು; ಈ ಸಮಸ್ಯೆಗೆ ಪರಿಹಾರವಾಗಿ, ಗ್ರಾಮೀಣ ಜನತೆ ತಮಗೆ ಅವಶ್ಯವಿರುವ ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದಡಿ ಬರುವ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರಗಳಂತಹ ಪ್ರಮುಖ ಸೇವೆಗಳನ್ನು ಮತ್ತಷ್ಟು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಯಲ್ಲೇ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಥಾಪಿಸಲಾಗಿರುವ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಒದಗಿಸಲು ಸರ್ಕಾರವು ನಿರ್ಧರಿಸಿದೆ.
ಇದರಿಂದಾಗಿ, ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಅಂದಾಜು 3.7 ಕೋಟಿ ಜನರಿಗೆ ಅಂದರೆ 78 ಲಕ್ಷ ಕುಟುಂಬಗಳು ಅಟಲ್‌ಜೀ ಜನಸ್ನೇಹಿ (ನಾಡಕಛೇರಿ) ಸೇವೆಗಳನ್ನು ಪಡೆಯುವಲ್ಲಿ ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರಗಳು ಮಹತ್ವದ ಪಾತ್ರವಹಿಸಲಿವೆ.
ಆದುದರಿಂದ, ಪಂಚತಂತ್ರ 2.0 ತಂತ್ರಾಂಶವನ್ನು ನಾಡಕಛೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇನ್ನು ಮುಂದೆ ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದಡಿ ಬರುವ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರಗಳಂತ ಪ್ರಮುಖ ಸೇವೆಗಳನ್ನು ಮತ್ತು ಇನ್ನೂ ಮುಂತಾದ 44 ಅಟಲ್‌ಜೀ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳಿಗೆ ಅರ್ಜಿ ಸಲ್ಲಿಸಿ, ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸದರಿ ಸೇವೆಗಳನ್ನು ಪಡೆಯಬಹುದಾಗಿದೆ.
ಅದರಂತೆ, ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ 44 ಅಟಲ್‌ಜೀ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳಿಗೆ ಪಂಚತಂತ್ರ 2.0 ತಂತ್ರಾಂಶದ ಮೂಲಕ ಅರ್ಜಿಗಳನ್ನು ಸ್ವೀಕರಿಸಿ, ಉಲ್ಲೇಖಿತ ಆದೇಶದಂತೆ ತಿಳಿಸಲಾಗಿರುವ ಅರ್ಜಿ ಶುಲ್ಕವನ್ನು ಪಡೆಯಲು ಆದೇಶಿಸಿದೆ ಎಂದು ಸುತ್ತೋಲೆ ಹೇಳಿದೆ.
ಸೇವೆಗಳು ಮತ್ತು ಶುಲ್ಕಗಳು; ಜನಸಂಖ್ಯಾ ಪ್ರಮಾಣ ಪತ್ರ 40 ರೂ., ಜಾತಿ ಮತ್ತು ಆದಾಯ ಪ್ರಮಾಣ ಪತ್ರ 40 ರೂ., ಜಾತಿ ಪ್ರಮಾಣ ಪತ್ರ (ಪ್ರವರ್ಗ-ಎ) 40 ರೂ., ಜಾತಿ ಪ್ರಮಾಣ ಪತ್ರ (ಅ.ಜಾ/ ಅ. ಪಂ) 40 ರೂ., ಹಿಂದುಳಿದ ಪ್ರವರ್ಗ ಪ್ರಮಾಣ ಪತ್ರ (ಕೇ. ಸ) 40 ರೂ., ವಾಸ ಸ್ಥಳ ಪ್ರಮಾಣ ಪತ್ರ 40 ರೂ., ಆದಾಯ ಪ್ರಮಾಣ ಪತ್ರ 40 ರೂ., ಗೇಣಿರಹಿತ ದೃಢೀಕರಣ ಪತ್ರ 40 ರೂ., ವಿಧವೆ ದೃಢೀಕರಣ ಪತ್ರ 40 ರೂ., ಜೀವಂತ ದೃಢೀಕರಣ ಪತ್ರ 40 ರೂ., ವ್ಯವಸಾಯಗಾರರ ಕುಟುಂಬದ ದೃಢೀಕರಣ ಪತ್ರ 40 ರೂ., ಮರುವಿವಾಹವಾಗದಿರುವ ಬಗ್ಗೆ ದೃಢೀಕರಣ ಪತ್ರ 40 ರೂ.ಗಳ ಶುಲ್ಕ ನಿಗದಿ ಮಾಡಲಾಗಿದೆ.
ಜಮೀನು ಇಲ್ಲದಿರುವ ಬಗ್ಗೆ ದೃಢೀಕರಣ ಪತ್ರ 40 ರೂ., ಮೃತರ ಕುಟುಂಬ ಸದಸ್ಯರ ದೃಢೀಕರಣ ಪತ್ರ 40 ರೂ., ನಿರುದ್ಯೋಗಿ ದೃಢೀಕರಣ ಪತ್ರ 40 ರೂ., ಸರ್ಕಾರಿ ನೌಕರಿ ಇಲ್ಲದಿರುವ ಬಗ್ಗೆ ಪ್ರಮಾಣ ಪತ್ರ 40 ರೂ., ವ್ಯವಸಾಯಗಾರ ದೃಢೀಕರಣ ಪತ್ರ 40 ರೂ., ಸಣ್ಣ/ ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ 40 ರೂ., ಕೃಷಿ ಕಾರ್ಮಿಕ ಪ್ರಮಾಣ ಪತ್ರ 40 ರೂ., ಮೇಲುಸ್ಥರಕ್ಕೆ ಸೇರಿಲ್ಲವೆಂದು ದೃಢೀಕರಣ ಪತ್ರ 40 ರೂ., ಭೂ ಹಿಡುವಳಿ ಪ್ರಮಾಣ ಪತ್ರ 40 ರೂ., ಬೋನಫೈಡ್ ದೃಢೀಕರಣ ಪತ್ರ 40 ರೂ., ಸಾಲ ತೀರಿಸುವ ಶಕ್ತಿ ಪ್ರಮಾಣ ಪತ್ರ 40 ರೂ., ನಿವಾಸಿ ಪ್ರಮಾಣ ಪತ್ರ 40 ರೂ., ಆದಾಯ ದೃಢೀಕರಣ ಪತ್ರ (ಉದ್ಯೋಗದ ಸಲುವಾಗಿ ಮಾತ್ರ) 40 ರೂ.ಗಳ ಶುಲ್ಕ ಪಾವತಿ ಮಾಡಬೇಕು.
ಆದಾಯ ದೃಢೀಕರಣ ಪತ್ರ (ಅನುಕಂಪ ಆಧಾರದ ನೇಮಕಾತಿಗೆ) 40 ರೂ., ಕುಟುಂಬ ವಂಶವೃಕ್ಷ ದೃಢೀಕರಣ ಪತ್ರ 40 ರೂ., ಹೈದರಾಬಾದ್-ಕರ್ನಾಟಕ ವಿಭಾಗ/ ವಲಯದ ವಾಸಸ್ಥಳ ದೃಢೀಕರಣ ಪತ್ರ 40 ರೂ., ಬೆಳೆ ದೃಢೀಕರಣ ಪತ್ರ 40 ರೂ., ಅಲ್ಪ ಸಂಖ್ಯಾತ ಪ್ರಮಾಣ ಪತ್ರ 40 ರೂ., ಜಾತಿ ಪ್ರಮಾಣ ಪತ್ರ (ಆರ್ಯ ವೈಶ್ಯ) 40 ರೂ., ಇನ್ ಕಮ್ ಎಂಡ್ ಅಸೆಟ್ ಸರ್ಟಿಫಿಕೇಟ್ 40 ರೂ., ಕ್ಯಾಸ್ಟ್ ಸರ್ಟಿಫಿಕೇಟ್ (ಎಸ್‌ಸಿ/ ಎಸ್‌ಟಿ-ಮೈಗ್ರೇಟ್) 40 ರೂ.,ಗಳ ಶುಲ್ಕ ನಿಗದಿ ಮಾಡಲಾಗಿದೆ.
ಯಾವುದೇ ಶುಲ್ಕವಿಲ್ಲದ ಸೇವೆಗಳು. ಅಂಗವಿಕಲ ಪೋಷಣಾ ವೇತನ, ನಿರ್ಗತಿಕ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ಕುಟುಂಬ ಕ್ಷೇಮ ಯೋಜನೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಮೈತ್ರಿ, ಮನಸ್ವಿನಿ, ಅಂತ್ಯ ಸಂಸ್ಕಾರ ಯೋಜನೆ, ಆಸಿಡ್ ದಾಳಿಗೊಳಗಾದ ಮಹಿಳೆಯ ವೇತನ, ರೈತರ ವಿಧವಾ ವೇತನ, ಎಂಡೋಸಲ್ಫಾನ್ ವಿಕ್ಟಿಮ್ ಪೆನ್ಷನ್ ಸಹ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಡೆಯಬಹುದಾಗಿದೆ.












Click it and Unblock the Notifications