ಶೇ 40ರಷ್ಟು ಕಮೀಷನ್: ವಿಚಾರಣೆಗೆ 45 ದಿನದ ಡೆಡ್‌ಲೈನ್
ಬೆಂಗಳೂರು, ಡಿಸೆಂಬರ್ 14: ಕಳೆದ ನಾಲ್ಕು ವರ್ಷದಲ್ಲಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯ ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮೀಷನ್ ಆರೋಪ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅವರ ಏಕ ವ್ಯಕ್ತಿ ಆಯೋಗಕ್ಕೆ ವರದಿ ಸಲ್ಲಿಸಲು ಹೈಕೋರ್ಟ್ 45 ದಿನಗಳ ಗಡುವು ವಿಧಿಸಿದೆ.
ಮೆರ್ಸಸ್ ನಿಕ್ಷೇಪ್ ಇನ್ಫ್ರಾಪ್ರಾಜೆಕ್ಟ್ಸ್ ಸೇರಿದಂತೆ ಹಲವು ಗುತ್ತಿಗೆ ಕಂಪನಿಗಳು ಮತ್ತು ಗುತ್ತಿಗೆದಾರರು ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆ.5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.

ನ್ಯಾಯಾಲಯದ ಆದೇಶವೇನು?; ಪ್ರಕರಣಕ್ಕೆ ಸಂಬಂಧಿಸಿ ಎಲ್ಲಾ ಪಾಲುದಾರರು ಮತ್ತು ಆಯೋಗವು ಇರಿಸುವ ಎಲ್ಲಾ ದಾಖಲೆಗಳನ್ನು ಪರಿಗಣಿಸಲು ಆಯೋಗಕ್ಕೆ 45 ದಿನಗಳ ಕಾಲಮಿತಿ ನಿಗದಿಪಡಿಸಲಾಗುತ್ತಿದೆ. ಎಲ್ಲಾ ಪಾಲುದಾರರ ವಾದವನ್ನು ಆಯೋಗವು ಆಲಿಸಿದ ನಂತರ ಕಾನೂನು ಪ್ರಕಾರ ವರದಿಯನ್ನು ಸಿದ್ಧಪಡಿಸಿ ಆ ವರದಿಯನ್ನು 45 ದಿನಗಳ ಪೂರ್ಣಗೊಂಡ ನಂತರ ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು 2024ರ ಫೆ.6ಕ್ಕೆ ಮುಂದೂಡಿದೆ.
2019-20ರಿಂದ 2022-23ರವರೆಗೆ ಬಿಬಿಎಂಪಿ ಸೇರಿದಂತೆ ರಾಜ್ಯದ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ವಹಿಸಿದ ಎಲ್ಲಾ ಗುತ್ತಿಗೆ ಕಾಮಗಾರಿಗಳ ತನಿಖೆಗೆ ರಾಜ್ಯ ಸರ್ಕಾರವು ವಿಶೇಷ ತನಿಖಾ ಘಟಕವನ್ನು (ಎಸ್‌ಐಟಿ) ರಚಿಸಿದೆ. ಈ ಎಸ್‌ಐಟಿಯ ರಚನೆಯ ಸಿಂಧುತ್ವವನ್ನು ಈ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗಿದೆ.
ಎಸ್‌ಐಟಿ ರಚನೆಯ ನಂತರ ಯಾವುದೇ ಪ್ರಕ್ರಿಯೆಗಳೂ ನಡೆದಿಲ್ಲ. ಇದರ ಬೆನ್ನಲ್ಲೆಯೇ 2019ರಿಂದ 2023ರವರೆಗೆ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ಏಕವ್ಯಕ್ತಿ ಆಯೋಗವನ್ನು ರಚಿಸಲಾಗಿದೆ. ಅಲ್ಲಿಯೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಅಡ್ವೋಕೇಟ್ ಜನರಲ್ ಸೂಕ್ತ ಸಮಯವಕಾಶ ಕಲ್ಪಿಸಿದರೆ ಆಯೋಗವು ವಿಚಾರಣೆ ನಡೆಸಲಿದೆ. ಗುತ್ತಿಗೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಆರೋಪಗಳ ಕುರಿತು ಸಮಗ್ರ ತನಿಖೆಗಾಗಿ ಎಸ್‌ಐಟಿಯ ಶೋಧನೆಗಳನ್ನು ಸಹ ಆಯೋಗಕ್ಕೆ ವರ್ಗಾಯಿಸಲಾಗುವುದು ಎಂದು ತಿಳಿಸಿದರು. ಈ ವಾದ ಪರಿಗಣಿಸಿದ ನ್ಯಾಯಪೀಠ, ಏಕವ್ಯಕ್ತಿ ಆಯೋಗಕ್ಕೆ ವಿಚಾರಣಾ ವರದಿ ಸಲ್ಲಿಸಲು 45 ದಿನಗಳ ಕಾಲಾವಕಾಶ ನೀಡಿತು.
ಇದಲ್ಲದೇ, ಗುತ್ತಿಗೆದಾರಿಗೆ ಹಣ ಪಾವತಿ ಮಾಡುವ ವಿಚಾರ ಕುರಿತು ಅಡ್ವೋಕೇಟ್ ಜನರಲ್, ಯಾವುದೇ ಅಕ್ರಮಗಳ ಆರೋಪ ಹೊಂದಿರದ ಗುತ್ತಿಗೆದಾರರಿಗೆ ಅವರು ಕ್ಲೇಮು ಮಾಡಿದ ಹಣದ ಪೈಕಿ ಶೇ.75ರಷ್ಟು ಹಿರಿತನದ ಆಧಾರದ ಮೇಲೆ ಪಾವತಿಸಲಾಗುತ್ತದೆ.
ಜತೆಗೆ, ಆರೋಪ ಹೊತ್ತಿರುವ ಗುತ್ತಿಗೆದಾರಿಗೆ ಶೇ.50ರಷ್ಟು ಮಾತ್ರ ಪಾವತಿಸಲಾಗುತ್ತದೆ. ಈ ಕುರಿತ ಸರ್ಕಾರದ ಆದೇಶಗಳು ಹೈಕೋರ್ಟ್ ಅಥವಾ ಏಕವ್ಯಕ್ತಿ ಆಯೋಗದ ಮುಂದಿರುವ ಪ್ರಕ್ರಿಯೆಗಳಿಗೆ ಬದ್ಧವಾಗಿರುತ್ತವೆ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.












Click it and Unblock the Notifications