ಕಮೀಷನ್ ಆರೋಪ; ಸಂತೋಷ್ ವಿರುದ್ಧ ಮಾನನಷ್ಟ ಮೊಕದ್ದಮೆ
ಬೆಂಗಳೂರು, ಮಾರ್ಚ್ 29; "ನನ್ನ ಮೇಲೆ ಮಾಡಿರುವ ಕಪೋಲಕಲ್ಪಿತ ಆರೋಪ ಗಮನಕ್ಕೆ ಬಂದ ಕೂಡಲೇ ಸಂತೋಷ್ ಕೆ. ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು 6ನೇ ಅಪರ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ 4 ಕೋಟಿಗಳ ಕಾಮಗಾರಿಗೆ ಹಣ ಬಿಡುಗಡೆ ಮಾಡಲು ಕಮೀಷನ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ ಎಂಬ ಆರೋಪವನ್ನು ಸಂತೋಷ್ ಕೆ. ಪಾಟೀಲ್ ಎಂಬ ವ್ಯಕ್ತಿಯು ಮಾಡಿದ್ದರು.
ಈ ವಿಚಾರ ರಾಜ್ಯ ರಾಜಕೀಯದಲ್ಲಿ ಈಗ ಕೋಲಾಹಲಕ್ಕೆ ಕಾರಣವಾಗಿದೆ. ಸೋಮವಾರ ವಿಧಾನಸಭೆ ಕಲಾಪದಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಈ ಆರೋಪದ ಕುರಿತು ಸ್ಪಷ್ಟನೆ ನೀಡಿದರು.

ಸಂತೋಷ್ ಕೆ. ಪಾಟೀಲ್ ಮಾಡಿರುವ ಆರೋಪದ ಬಗ್ಗೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ಸ್ಪಷ್ಟೀಕರಣ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಂತೋಷ್ ಕೆ. ಪಾಟೀಲ್ ಉಲ್ಲೇಖಿಸಿರುವ ಕಾಮಗಾರಿಗೆ ಅನುಮೋದನೆ ಕೋರಿಲ್ಲ ಮತ್ತು ಸರ್ಕಾರವು ಯಾವುದೇ ಕಾಮಗಾರಿಯನ್ನು ಮಂಜೂರು ಮಾಡಿಲ್ಲ ಎಂದು ತಿಳಿಸಲಾಗಿದೆ.
ಈ ಕಾಮಗಾರಿಯ ಸಂಬಂಧ ಇಲಾಖೆಯು ಯಾವುದೇ ಕಾರ್ಯಾದೇಶವನ್ನು ನೀಡಿಲ್ಲ ಮತ್ತು ಆಡಳಿತಾತ್ಮಕ ಅನುಮೋದನೆಯನ್ನು ಸಹ ನೀಡಿಲ್ಲ. ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಕೆ. ಪಾಟೀಲ್ ಹೇಳುವಂತಹ ಕಾಮಗಾರಿಯು ಇಲಾಖಾ ವತಿಯಿಂದ ಅನುಷ್ಠಾನಗೊಂಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಯಾವುದೇ ಸರ್ಕಾರಿ ಏಜೆನ್ಸಿಗಳು ಈ ಕಾಮಗಾರಿಗೆ ತಾಂತ್ರಿಕ ಅನುಮೋದನೆ ನೀಡಿಲ್ಲ ಅಥವಾ ಉಸ್ತುವಾರಿ ಮಾಡಿಲ್ಲ. ಹೀಗಾಗಿ ಹಣ ಬಿಡುಗಡೆ ಮಾಡುವ ಪ್ರಶ್ನೆಯೇ ಉದ್ಬವವಾಗುವುದಿಲ್ಲ.
ಮಾನನಷ್ಟ ಮೊಕದ್ದಮೆ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಕೆ. ಎಸ್. ಈಶ್ವರಪ್ಪ ಮಾತನಾಡಿ, "9/3/2022ರಂದು ಖಾಸಗಿ ಸುದ್ದಿ ವಾಹಿನಿಯಲ್ಲಿ ಸಂತೋಷ್ ಕೆ. ಪಾಟೀಲ್ ಸಂದರ್ಶನ ನೀಡಿ ಮಾಡಿದ ಕಪೋಲಕಲ್ಪಿತ ಆರೋಪವು ನನ್ನ ಗಮನಕ್ಕೆ ಬಂದ ಕೂಡಲೇ 10/3/2022ರಂದು ಸಂತೋಷ್ ಕೆ. ಪಾಟೀಲ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಮಾನ್ಯ 6ನೇ ಅಪರ ಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಲಯ ಸಮಕ್ಷಮ ಸಲ್ಲಿಸಲಾಗಿದೆ" ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಚರ್ಚೆ; 40 ಪೆರ್ಸೆಂಟ್ ಕಮೀಷನ್ ಕೇಳಿದ ಬಗ್ಗೆ ವಿಧಾನಸಭೆಯಲ್ಲಿ ಸಹ ಚರ್ಚೆ ನಡೆದಿತ್ತು. ಸೋಮವಾರ ಕಾಂಗ್ರೆಸ್ ಸದಸ್ಯರು ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನಡುವೆ ಜಟಾಪಟಿಗೆ ಕಲಾಪ ಸಾಕ್ಷಿಯಾಗಿತ್ತು.
ಕಾಂಗ್ರೆಸ್ ಸದಸ್ಯ ಅಮರೇಗೌಡ ಬಯ್ಯಾಪುರ, "ಉಳಿದವರು ಪ್ರಮಾಣಿಕ ಸಚಿವರಲ್ಲವೇ? ಶೇ ಕಮೀಷನ್ ಪಡೆಯುವವರೇ?" ಎಂದು ವ್ಯಂಗ್ಯವಾಡಿದ್ದರು. ಇದು ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಯಿತು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, "ಹಾಗಿದ್ದರೆ ನೀವೆಲ್ಲ ಶೇ 10ರಷ್ಟು ಶಾಸಕರೇ, ಇಂದಿನ ಪತ್ರಿಕೆಗಳಲ್ಲಿ ನಿಮ್ಮ ಬಗ್ಗೆಯೂ ಬಂದಿದೆ. ಅದನ್ನು ನೋಡಿದ್ದೀರಾ?" ಎಂದು ಪ್ರಶ್ನೆ ಮಾಡಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, "ಗುತ್ತಿಗೆದಾರರ ಸಂಘದವರು ಆರೋಪ ಮಾಡಿರುವುದು ನಿಮ್ಮ ಸರ್ಕಾರದ ಬಗ್ಗೆ. ಅದು ಬಿಟ್ಟು ಶಾಸಕರ ಬಗ್ಗೆ ಆರೋಪ ಮಾಡುವುದು ಎಷ್ಟರ ಮಟ್ಟಿಗೆ ಸರಿ?" ಎಂದರು.
ಕಾಂಗ್ರೆಸ್ ಸದಸ್ಯ ಶಿವಾನಂದ ಪಾಟೀಲ್ ಮಾತನಾಡಿ, "ಕೇವಲ ನಾಲ್ಕೈಗು ಗುತ್ತಿಗೆದಾರರು ನೀರಾವರಿ ಯೋಜನೆಗಳ ಸಾವಿರಾರು ಕೋಟಿ ಮೌಲ್ಯದ ಗುತ್ತಿಗೆಗಳನ್ನು ಪಡೆಯುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿಯೂ ಒಪ್ಪಿಗೆ ಪಡೆಯದೇ ಕಾಮಗಾರಿಗಳನ್ನು ಮಂಜೂರು ಮಾಡಲಾಗುತ್ತಿದೆ" ಎಂದು ಆರೋಪಿಸಿದರು.












Click it and Unblock the Notifications