ನಾಲ್ವರು ಸಚಿವರ ರಾಜೀನಾಮೆಗೆ ರಾಹುಲ್ ಗಾಂಧಿ ಸೂಚನೆ?
Recommended Video

ಬೆಂಗಳೂರು, ಜನವರಿ 16 : ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನ ಆರಂಭಿಸಿದೆ. ಅತೃಪ್ತ ಶಾಸಕರಿಗೆ ಸಚಿವ ಸ್ಥಾನದ ಆಫರ್ ಅನ್ನು ಪಕ್ಷ ನೀಡಲಿದ್ದು, ಇದಕ್ಕಾಗಿ ನಾಲ್ವರು ಸಚಿವರಿಗೆ ರಾಜೀನಾಮೆ ನೀಡಲು ಸೂಚನೆ ಕೊಡಲಾಗಿದೆ.
ಹೌದು, ಕರ್ನಾಟಕದ ರಾಜಕೀಯ ಬೆಳವಣಿಗೆಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಮನಿಸುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರಿಂದ ಮಾಹಿತಿಯನ್ನು ಪಡೆದಿದ್ದಾರೆ. ಮಂಗಳವಾರ ಎಚ್.ಡಿ.ದೇವೇಗೌಡರ ಜೊತೆಗೂ ಮಾತುಕತೆ ನಡೆಸಿದ್ದರು.
ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಕೆ.ಸಿ.ವೇಣುಗೋಪಾಲ್ ಅವರಿಗೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಆದ್ದರಿಂದ, ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಿ, ಮನವೊಲಿಸಿ ಎಂದು ನಿರ್ದೇಶನ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಸೇರಿದಂತೆ ಎಲ್ಲಾ ನಾಯಕರ ಜೊತೆ ಮಾತುಕತೆ ನಡೆಸಬೇಕು. ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಪ್ರಮುಖ ಶಾಸಕರನ್ನು ಗುರುತಿಸಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಅವರು ಸೂಚನೆ ಕೊಟ್ಟಿದ್ದಾರೆ....

ನಾಲ್ವರು ಸಚಿವರು ರಾಜೀನಾಮೆ ನೀಡಲಿ
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ನಾಲ್ವರು ಸಚಿವರು ರಾಜೀನಾಮೆ ನೀಡಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ನಾಲ್ವರು ರಾಜೀನಾಮೆ ನೀಡಿದರೆ, ಹಗರಿಬೊಮ್ಮನಹಳ್ಳಿಯ ಭೀಮಾ ನಾಯ್ಕ್, ಮಸ್ಕಿಯ ಪ್ರತಾಪ್ ಗೌಡ ಪಾಟೀಲ್, ಬಳ್ಳಾರಿ ಗ್ರಾಮಾಂತರದ ನಾಗೇಂದ್ರ, ಮಳಬಾಗಿಲು ಕ್ಷೇತ್ರದ ಎಚ್.ನಾಗೇಶ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರವಿದೆ.

ನಾಲ್ವರು ಸಚಿವರು ಸಿದ್ಧ
ಸೋಮವಾರ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಲ್ವರು ಸಚಿವರು ರಾಜೀನಾಮೆ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಅತೃಪ್ತ ಶಾಸಕರಿಗೆ ಸ್ಥಾನವನ್ನು ನೀಡಿ ಸರ್ಕಾರವನ್ನು ಉಳಿಸಿಕೊಳ್ಳಲು ಸಲಹೆ ನೀಡಲಾಗಿತ್ತು.

ಯಾವ-ಯಾವ ಸಚಿವರು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿಯೇ ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಹೇಳಿದ್ದರು.

ನಾಯಕರಿಂದ ಪಟ್ಟಿ ಸಿದ್ಧ
ಸಚಿವರ ರಾಜೀನಾಮೆ ಪಡೆಯುವುದು ಅನಿವಾರ್ಯವಾದರೆ ಹಿರಿಯ ನಾಯಕರು ಸಭೆ ನಡೆಸಿ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಬಳಿಕ ಯಾವ-ಯಾವ ಶಾಸಕರನ್ನು ಸೇರಿಸಿಕೊಳ್ಳಬೇಕು? ಎಂದು ತೀರ್ಮಾನ ಕೈಗೊಳ್ಳಲಿದ್ದಾರೆ.

ಶಾಸಕರು ಎಲ್ಲಿದ್ದಾರೆ?
ಕರ್ನಾಟಕದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, 'ಕಾಂಗ್ರೆಸ್ ಶಾಸಕರು ನಿನ್ನೆ ಎಲ್ಲಿದ್ದರು ಎಂಬುದು ಬೇಡ, ಇಂದು ಎಲ್ಲಿದ್ದಾರೆ ಎಂದು ಹೇಳಿ' ಎಂದು ಹೇಳುವ ಮೂಲಕ ಅತೃಪ್ತ ಶಾಸಕರು ಪಕ್ಷದ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.












Click it and Unblock the Notifications