ಹಲೋ.. 104.. ಕರ್ನಾಟಕದಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿತಾ ಹೆಂಗೆ?
ಬೆಂಗಳೂರು, ಫೆಬ್ರವರಿ.03: ಕೊರೊನಾ ವೈರಸ್.. ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ರೋಗ ಭಾರತಕ್ಕೆ ಕಾಲಿಟ್ಟು ಆಗಿದೆ. ಕೇರಳದಲ್ಲಿ ಶಂಕಿತ ಸೋಂಕು ಇಬ್ಬರಿಗೆ ತಗಲಿರುವ ಬಗ್ಗೆ ಈಗಾಗಲೇ ವರದಿಯಾಗಿದೆ. ಸಾವಿನ ಸರಣಿ ಶುರು ಮಾಡಿರುವ ಕೊರೊನಾ ವೈರಸ್ ಬಗ್ಗೆ ಕರ್ನಾಟಕದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಹ್ಯೂಬೈ ಆರೋಗ್ಯ ಪ್ರಾಧಿಕಾರದ ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ 361 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಭಾನುವಾರ 2,103 ಜನರಿಗೆ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದ್ದು, ಸೋಂಕಿತರ ಸಂಖ್ಯೆ ಚೀನಾ ಒಂದರಲ್ಲೇ 16,600ಕ್ಕೆ ಏರಿಕೆಯಾಗಿದೆ. ಇದು ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಜನರನ್ನು ಆತಂಕಕ್ಕೆ ದೂಡಿದೆ.|
Karnataka Health Dept - 080-46848600.
State Helpline - 104
National Helpline - 1075.
ಇದೀಗ ಕರ್ನಾಟಕದಲ್ಲಿ ಜನರು ಏನ್ರಿ ರಾಜ್ಯಕ್ಕೂ ಕೊರೊನಾ ವೈರಸ್ ಕಾಲಿಟ್ಟು ಬಿಟ್ಟಿತಾ ಎಂದು ಮೇಲಿಂದ ಮೇಲೆ ವಿಚಾರಣೆ ಮಾಡುತ್ತಿದ್ದಾರೆ. ಸರ್ಕಾರ ಆರಂಭಿಸಿದ ಸಹಾಯವಾಣಿಗೆ ಸಾಲು ಸಾಲು ದೂರವಾಣಿ ಕರೆಗಳು ಬರುತ್ತಿವೆ. ಕೊರೊನಾ ವೈರಸ್ ಪತ್ತೆ ಬಗ್ಗೆ ತಿಳಿದುಕೊಳ್ಳಲು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ ಆರಂಭಿಸಿದ 104 ಸಹಾಯವಾಣಿ ಸಂಖ್ಯೆಗೆ ಇದುವರೆಗೂ 312 ದೂರವಾಣಿ ಕರೆಗಳು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಕರ್ನಾಟಕದಲ್ಲಿ ಕೊರೊನಾ ವೈರಸ್ ಸಹಾಯವಾಣಿ ಶುರು
ಚೀನಾದಲ್ಲಿ ಪತ್ತೆಯಾದ ಕೊರೊನಾ ವೈರಸ್ ವಿಶ್ವದ 23 ದೇಶಗಳಲ್ಲಿ ಹರಡಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕರ್ನಾಟಕ ಸರ್ಕಾರವೂ ಎಚ್ಚೆತ್ತುಕೊಂಡಿತು. ರಾಜ್ಯದಲ್ಲಿ ಮಾರಕ ವೈರಸ್ ಬಗ್ಗೆ ಪತ್ತೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಪ್ರಾಥಮಿಕವಾಗಿ ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದ ಕೂಡಲೇ ಸಂಪರ್ಕಿಸಲು ಮತ್ತು ಅದರ ಬಗ್ಗೆ ಮಾಹಿತಿ ಪಡೆಯಲು ಜನರಿಗೆ ಅನುಕೂಲವಾಗುವಂತೆ ಸಹಾಯವಾಣಿ ಆರಂಭಿಸಲಾಯಿತು. ಆರೋಗ್ಯ ಇಲಾಖೆ ಆರಂಭಿಸಿದ 104 ಸಂಖ್ಯೆಗೆ ರಾಜ್ಯದ ಜನರು ಕರೆ ಮಾಡಿ ಕೊರೊನಾ ವೈರಸ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

ರಾಜ್ಯಕ್ಕೆ ಕೊರೊನಾ ಪೀಡಿತ ದೇಶಗಳಿಂದ 51 ಮಂದಿ ಆಗಮನ
ಚೀನಾ ಸೇರಿದಂತೆ ಕೊರೊನಾ ವೈರಸ್ ಕಾಣಿಸಿಕೊಂಡ ದೇಶಗಳಿಂದ ಇದುವರೆಗೂ 51 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ ಎಂದು ಗುರುತಿಸಲಾಗಿದೆ. ಈ ಪೈಕಿ ನಾಲ್ವರು ವಿದೇಶಕ್ಕೆ ವಾಪಸ್ ತೆರಳಿದ್ದು, 46 ಜನರನ್ನು ಮನೆಗಳಲ್ಲೇ ಪರೀಕ್ಷೆಗೊಳಪಡಿಸಲಾಗಿದೆ. ಒಬ್ಬನನ್ನು ಪ್ರತ್ಯೇಕ ಆಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಲಾಗಿದೆ.

44 ಜನರ ರಕ್ತದ ಮಾದರಿ ಪರೀಕ್ಷಿಸಲು ಪುಣೆಗೆ ರವಾನೆ
ಕರ್ನಾಟಕದಲ್ಲಿ ಇದುವರೆಗೂ ಶಂಕಿತ ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ 44 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಈ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಿ ಕೊಡಲಾಗಿತ್ತು. ಈ ವೇಳೆ 44 ಜನರ ಪೈಕಿ 29 ಮಂದಿಯಲ್ಲಿ ಕೊರೊನೊ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ. ಉಳಿದ 15 ಮಂದಿಯ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗಿದೆ.

ಕರ್ನಾಟಕ ಗಡಿ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷಣೆ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಪರೀಕ್ಷೆ ವೇಳೆ ವ್ಯಕ್ತಿಯೊಬ್ಬರಲ್ಲಿ ಶಂಕಿತ ಕೊರೊನಾ ವೈರಸ್ ರೋಗ ಪತ್ತೆಯಾಗಿರುವ ಬಗ್ಗೆ ಸುದ್ದಿಯಾಗಿತ್ತು. ನಂತರದಲ್ಲಿ ಅದು ಹುಸಿ ಎಂದು ಸ್ಪಷ್ಟವಾಗಿದೆ. ಇನ್ನು, ಕೊರೊನಾ ವೈರಸ್ ತಡೆಗಟ್ಟುವ ದೃಷ್ಟಿಯಿಂದ ರಾಜ್ಯದ ಗಡಿಜಿಲ್ಲೆಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೈಅಲರ್ಟ್ ಘೋಷಿಸಿದೆ. ಮಂಗಳೂರು, ಕೊಡಗು, ಚಾಮರಾಜನಗರ, ಮೈಸೂರಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.












Click it and Unblock the Notifications