ಮಂತ್ರಿಸ್ಥಾನಕ್ಕೆ ಕುತ್ತು ಆತಂಕ: ತ್ರಿಶಂಕು ಸ್ಥಿತಿಯಲ್ಲಿ ಸಚಿವ: ಆರ್.ಅಶೋಕ್ ತರಾಟೆ
ಬೆಂಗಳೂರು, ಜನವರಿ 08: ಕಾಂಗ್ರೆಸ್ ನಾಯಕರು, ಸಚಿವರು ಮಾಧ್ಯಮಗಳ ಮುಂದೆ ಬಾಯಿಗೆ ಬದಂತೆ ಬಡಬಡಾಯಿಸುವುದು ಬಿಟ್ಟು ತಮ್ಮ ಖಾತೆ ನಿರ್ವಹಣೆ ಬಗ್ಗೆ ಸ್ವಲ್ಪ ಗಮನ ಕೊಡಿ. ರಾಜ್ಯದಲ್ಲಿ ಸಾವಿರಾರು ರೈತರು ಸಾವನ್ನಪುತ್ತಿದ್ದಾರೆ. ಜನರು ಸಾಲಗಾರರ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ಆಡಳಿತ, ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ, ಸುಗ್ರಿವಾಜ್ಞೆ ಸೇರಿದಂತೆ ಕೆಲವು ವಿಚಾರ ಪ್ರಸ್ತಾಪಿಸಿ, ರಾಜ್ಯಪಾಲರು ಬಿಜೆಪಿ ವಕ್ತಾರರಂತೆ ಕಾರ್ಯ ಮಾಡುತ್ತಿದ್ದಾರೆ ಎಂದು ಕೃಷಿ ಸಚಿವರು ಆರೋಪಿಸಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮೂಲಕ ಉತ್ತರಿಸಿದ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಗುಡುಗಿದ್ದಾರೆ.

ನಿಮ್ಮ ಖಾತೆ ಯಾವುದು ಎಂದು ತಮಗೆ ನೆನಪಿದೆಯೇ ಚಲುವರಾಯಸ್ವಾಮಿ ಅವರೇ? ಸಿಎಂ ಸಿದ್ದರಾಮಯ್ಯ ಅವರ ಬಣದಲ್ಲಿ ಇರಬೇಕೋ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಣದಲ್ಲಿ ಗುರುತಿಸಿಕೊಳ್ಳಬೇಕೋ ಎಂಬ ತ್ರಿಶಂಕು ಸ್ಥಿತಿಯಲ್ಲಿರುವ ತಮಗೆ, ಸಂಪುಟ ಪುನಾರಚನೆ ಆದರೆ ಅಥವಾ ಮುಖ್ಯಮಂತ್ರಿ ಬದಲಾದರೆ ತಮ್ಮ ಕುರ್ಚಿ ಉಳಿಯುತ್ತದೆಯೋ ಇಲ್ಲವೋ ಎಂಬ ಗೊಂದಲದಲ್ಲಿ ಇರುವ ತಮಗೆ ಪಾಪ ತಮ್ಮ ಖಾತೆ, ತಮ್ಮ ಕರ್ತವ್ಯದ ಬಗ್ಗೆ ಹೇಗೆ ನೆನಪಿರಲು ಸಾಧ್ಯ.
ತಾವು ಜವಾಬ್ದಾರಿ ಹೊತ್ತಿರುವ ಖಾತೆ ಎಂತಹದ್ದು, ಅದರ ಪ್ರಾಮುಖ್ಯತೆ ಏನು, ಗಂಭೀರತೆ ಏನು, ಆ ಇಲಾಖೆಯನ್ನು ಈ ಹಿಂದೆ ಎಂತೆಂತಹ ಮುತ್ಸದ್ಧಿ ನಾಯಕರು ನಿರ್ವಹಿಸಿದ್ದರು ಎಂಬ ಕನಿಷ್ಠ ಅರಿವಾದರೂ ತಮಗಿದೆಯೇ? ಇಷ್ಟಕ್ಕೂ ಕಳೆದ 20 ತಿಂಗಳಲ್ಲಿ ಕೃಷಿ ಸಚಿವರಾಗಿ ತಮ್ಮ ಸಾಧನೆಯಾದರೂ ಏನು? ಎಂದು ಅವರು ಖಾರವಾಗಿ ಪ್ರಶ್ನೆ ಮಾಡಿದ್ದಾರೆ.

* ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಕಳೆದ 20 ತಿಂಗಳುಗಳಲ್ಲಿ ರಾಜ್ಯದ 3,000 ರೈತರು ಆತ್ಮಹತ್ಯೆಗೆ ಶರಣಾಗಿದ್ದರೂ ತಮಗೆ ಕಳಕಳಿ ಇಲ್ಲ.
* ಬರ, ನೆರೆ ಬಂದಾಗ ಸಮಯಕ್ಕೆ ಸರಿಯಾಗಿ ರೈತರಿಗೆ ಪರಿಹಾರ ಕೊಡಲು ನಿಮ್ಮ ಸರ್ಕಾರಕ್ಕೆ ಯೋಗ್ಯತೆ ಇಲ್ಲ.
* ಸಕಾಲಕ್ಕೆ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ನಿಮ್ಮ ಕೈಲಾಗಲಿಲ್ಲ. ನಾನು ಮಧ್ಯಪ್ರವೇಶ ಮಾಡಿ 24 ಗಂಟೆಯೊಳಗೆ ಖರೀದಿ ಕೇಂದ್ರ ತೆರೆಯದಿದ್ದರೆ ಬೀಗ ಜಡಿಯಬೇಕಾಗಿತ್ತದೆ ಎಂದು ಎಚ್ಚರಿಕೆ ಕೊಟ್ಟ ಮೇಲೆ ಎಚ್ಚೆತ್ತುಕೊಂಡಿದ್ದೀರಿ. ಇದು ನಿಮ್ಮ ಸರ್ಕಾರ ಯೋಗ್ಯತೆ ಎಂದು ವಾಗ್ದಾಳಿ ನಡೆಸಿದರು.
* ರಾಜ್ಯಾದ್ಯಂತ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ 4,482 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಕಬ್ಬು ಪೂರೈಸಿದ 14 ದಿನಗಳಲ್ಲಿ ಬಿಲ್ ಮೊತ್ತ ಪಾವತಿಸಬೇಕು ಎಂಬ ಕಾಯ್ದೆ ಇದ್ದರೂ ಸಹ, ನಿಯಮವನ್ನ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಇಚ್ಛಾಶಕ್ತಿ ಇಲ್ಲ.
* ತೊಗರಿ ಖರೀದಿ ಕೇಂದ್ರ ಆರಂಭಿಸಲು ವಿಳಂಬವಾದ ಕಾರಣ ಉತ್ತರ ಕರ್ನಾಟಕದ ರೈತರು ಸಿಕ್ಕಷ್ಟು ಬೆಲೆಗೆ ತೊಗರಿ ಮಾರಿ ನಷ್ಟ ಅನುಭವಿಸುತ್ತಿದ್ದರೂ ತಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇಲ್ಲ. ಇದು ನಿಮ್ಮ ಕಾರ್ಯ ವೈಖರಿ ಎಂದು ಲೇವಡಿ ಮಾಡಿದರು.
ಬಿಜೆಪಿ ನಾಯಕರ ಭೇಟಿ ನೀಡಿದ ಮೇಲೆ ಜ್ಞಾನೋದಯ
ಇನ್ನೂ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ದಿನಬೆಳಗಾದರೆ ರೈತರು ಆತಹತ್ಯಗೆ ಶರಣಾಗುತ್ತಿದ್ದರೂ, ಅವರ ಸಮಸ್ಯೆ ಬಗೆಹರಿಸುವುದು ಇರಲಿ, ಕನಿಷ್ಠ ಪಕ್ಷ ತಮ್ಮ ತವರು ಜಿಲ್ಲೆಯ ಸಂತ್ರಸ್ತರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುವ ಸೌಜನ್ಯವೂ ತಮಗಿಲ್ಲ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕೊನ್ನಾಪುರ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಪ್ರೇಮಾ ಹಾಗೂ ಅವರ ಮಗ ರಂಜಿತ್ ಅವರ ಮನೆಗೆ ಭೇಟಿ ನೀಡೆದೆವು. ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ಸಹಾಯಧನ ನೀಡಿದ ಮೇಲೆ ಪಾಪ ತಮಗೆ ಜ್ಞಾನೋದಯವಾಗಿದೆ.
ರಾಜ್ಯಪಾಲರದ್ದು ತಪ್ಪೇನಿದೆ?
ಈಗಿರುವ ಕಾನೂನಿನ ಚೌಕಟ್ಟಿನಲ್ಲಿಯೇ ಮೈಕ್ರೋ ಫೈನಾನ್ಸ್ ಕಂಪನಿಗಳ ಸಮಸ್ಯೆಗೆ ಕಡಿವಾಣ ಹಾಕಬಹುದು ಎಂದು ರಾಜ್ಯಪಾಲರು ಅಭಿಪ್ರಾಯ ಪಟ್ಟಿದ್ದಾರೆ. ಇದರಲ್ಲಿ ತಪ್ಪೇನಿದೆ? ರಾಜ್ಯಪಾಲರ ಅಭಿಪ್ರಾಯದ ಬಗ್ಗೆ ತಮ್ಮ ಸರ್ಕಾರಕ್ಕೆ ತಕರಾರಿದ್ದರೆ ಅವರಿಗೆ ಪತ್ರ ಬರೆದು, ಅವರನ್ನ ಭೇಟಿಯಾಗಿ ಮನವರಿಕೆ ಮಾಡಿಕೊಡಿ. ಅದು ಬಿಟ್ಟು ಸಾಂವಿಧಾನಿಕ ಹುದ್ದೆಯಲ್ಲಿರುವವರ ಮೇಲೆ ರಾಜಕೀಯ ಟೀಕೆ ಮಾಡುವುದು, ಬಿಜೆಪಿ ವಕ್ತಾರರು ಎಂದು ಆಪಾದನೆ ಮಾಡುವುದು ಎಷ್ಟು ಸರಿ? ಎಂದರು.
ಅನಗತ್ಯ ಹೇಳಿಕೆ ಬಿಡಿ, ಕೆಲಸ ಮಾಡಿ
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರಗಳು ಇದ್ದಾಗ ಯಾವ್ಯಾವ ರಾಜ್ಯದ ರಾಜ್ಯಪಾಲರು ಹೇಗೆ ನಡೆದುಕೊಂಡಿದ್ದಾರೆ ಎಂಬ ಇತಿಹಾಸ ಇಡೀ ದೇಶದ ಜನತೆಗೆ ಚೆನ್ನಾಗಿ ಗೊತ್ತಿದೆ. ಈ ರೀತಿ ಅನಾವಶ್ಯಕ ಹೇಳಿಕೆಗಳನ್ನು ಕೊಟ್ಟು ಟೈಂಪಾಸ್ ಮಾಡುವ ಬದಲು ತಮ್ಮ ಇಲಾಖೆಯ ಕೆಲಸ ನಿರ್ವಹಣೆ ಮಾಡುವ ಕಡೆ ಗಮನ ಕೊಡಿ. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ತಮ್ಮ ಕರ್ತವ್ಯ ಪಾಲಿಸಿ ಮತದಾರರ ಋಣ ತೀರಿಸಿ ಎಂದು ಅವರು ಸಲಹೆ ನೀಡಿದರು.












Click it and Unblock the Notifications