3 ಮಹಾನಗರ ಪಾಲಿಕೆಗೆ ಚುನಾವಣೆ; ಪ್ರಚಾರಕ್ಕೆ ಮಾರ್ಗಸೂಚಿ
ಬೆಂಗಳೂರು, ಆಗಸ್ಟ್ 20; ಕೋವಿಡ್ ಪರಿಸ್ಥಿತಿಯ ನಡುವೆಯೇ ರಾಜ್ಯ ಚುನಾವಣಾ ಆಯೋಗ ರಾಜ್ಯದ 3 ಮಹಾನಗರ ಪಾಲಿಕೆಗಳ ಚುನಾವಣೆ ಘೋಷಣೆ ಮಾಡಿದೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 6ರಂದು ಮತ ಎಣಿಕೆ ನಡೆಯಲಿದೆ.
ಮಹಾನಗರ ಪಾಲಿಕೆಗೆ ಚುನಾವಣೆಗೆ ಆಯಾ ಜಿಲ್ಲೆಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗಿದೆ. ತಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಆಗಸ್ಟ್ 23ರ ತನಕ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ.
ಬೆಳಗಾವಿ ಮಹಾನಗರ ಪಾಲಿಕೆಯ (58 ವಾರ್ಡ್), ಹುಬ್ಬಳ್ಳಿ-ಮಹಾನಗರ ಪಾಲಿಕೆಯ (82 ವಾರ್ಡ್) ಮತ್ತು ಕಲಬುರಗಿ ಮಹಾನಗರ ಪಾಲಿಕೆಯ (55 ವಾರ್ಡ್)ಗಳಿಗೆ ಚುನಾವಣೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಸಹ ಚುನಾವಣೆ ತಯಾರಿಯಲ್ಲಿ ತೊಡಗಿವೆ, ಸರಣಿ ಸಭೆಗಳನ್ನು ನಡೆಸುತ್ತಿವೆ.

ಕೋವಿಡ್ ಪರಿಸ್ಥಿತಿಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ರಾಜ್ಯ ಚುನಾವಣಾ ಆಯೋಗ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನೆ ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸ್ಥಳೀಯ ಆಡಳಿತ ಮಾರ್ಗಸೂಚಿಗಳ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನವನ್ನು ನೀಡಿದೆ.
ಚುನಾವಣಾ ಆಯೋಗವು ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್ ಸಮಯದಲ್ಲಿ ಚುನಾವಣೆ ನಡೆಯಲು ಆಯೋಗದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.
ರಾಜ್ಯ ಚುನಾವಣಾ ಆಯೋಗವು ಅಭ್ಯರ್ಥಿಗಳು ಪ್ರಚಾರ ಕೈಗೊಳ್ಳುವ ಕುರಿತು ಭಾರತ ಸಂವಿಧಾನದ ಪರಿಚ್ಛೇದ 243 ಜೆಡ್‍ಎ ರನ್ವಯ ಕೆಲವು ನಿರ್ದೇಶನಗಳನ್ನು ನೀಡಿದೆ. ಅದನ್ನು ಪಾಲಿಕಬೇಕು ಎಂದು ಸೂಚನೆ ನೀಡಿದೆ.
ಮಾರ್ಗಸೂಚಿ ಅಂಶಗಳು; ಅಭ್ಯರ್ಥಿಯೂ ಸೇರಿ ಗರಿಷ್ಟ 5 ಜನ ಬೆಂಬಲಿಗರೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು.
ಪ್ರಚಾರಕ್ಕೆ ವಾಹನ ಬಳಸುವುದನ್ನು ಮತ್ತು ಗುಂಪು ಗುಂಪು ಸೇರಿ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಮುದ್ರಣ ಹಾಗೂ ವಿದ್ಯುನ್ಮಾನ (ಎಲೆಕ್ಟ್ರಾನಿಕ ಮಾಧ್ಯಮ) ಮಾಧ್ಯಮದಲ್ಲಿ ಪ್ರಚಾರ ಕೈಗೊಳ್ಳಬಹುದು ಮತ್ತು ಅವುಗಳ ವೆಚ್ಚದ ವಿವರವನ್ನು ಸಲ್ಲಿಸಬೇಕು.
ಪ್ರಚಾರಕ್ಕಾಗಿ ನಿಯಮಾನುಸಾರ ಮುದ್ರಿಸಿದ ಕರಪತ್ರವನ್ನು ಹಂಚಬಹುದು. ಈ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಎಂದು ರಾಜ್ಯ ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
ವೆಚ್ಚದ ಮಿತಿ; ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಗೆ 3 ಲಕ್ಷ ಗರಿಷ್ಠ ವೆಚ್ಚವನ್ನು ನಿಗದಿ ಮಾಡಲಾಗಿದೆ. ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯು ಹಣವನ್ನು ಠೇವಣಿ ಇಡಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿ 5 ಸಾವಿರ ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗದವರು ಮತ್ತು ಮಹಿಳಾ ಅಭ್ಯರ್ಥಿಗಳು 2500 ರೂ. ಠೇವಣಿಯನ್ನು ಇಡಬೇಕಿದೆ.
ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ವಾರ್ಡ್‌ನಲ್ಲಿ ನಾಮಪತ್ರಗಳನ್ನು ಸಲ್ಲಿಸಿದರೆ ಹೆಚ್ಚಿನ ಠೇವಣಿಯನ್ನು ಇಡುವ ಅಗತ್ಯವಿಲ್ಲ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ನಿಗದಿತ ಠೇವಣಿಯನ್ನು ಚುನಾವಣಾ ಅಧಿಕಾರಿಗೆ ನೇರವಾಗಿ ನೀಡಬಹುದು ಅಥವ ಸರ್ಕಾರಿ ಖಜಾನೆಯಲ್ಲಿ ಪಾವತಿಸಿದ ಬಗ್ಗೆ ರಶೀದಿಯನ್ನು ಲಗತ್ತಿಸಬೇಕು.
ಮಾನ್ಯತೆ ಪಡೆದ ಅಭ್ಯರ್ಥಿಯಾಗಿದ್ದಲ್ಲಿ ನಾಮಪತ್ರದ ಜೊತೆ ಒಬ್ಬ ಸೂಚಕರು, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ 6 ಜನ ಸೂಚಕರ ಸಹಿ ಕಡ್ಡಾಯವಾಗಿದೆ. ನಾಮಪತ್ರ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು.
ನಾಮಪತ್ರಗಳನ್ನು ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯ ತನಕ ಸಲ್ಲಿಕೆ ಮಾಡಬಹುದು. ಚುನಾವಣಾ/ ಸಹಾಯಕ ಚುನಾವಣಾ ಅಧಿಕಾರಿಗೆ ನಾಮಪತ್ರವನ್ನು ಸಲ್ಲಿಸಬೇಕು. ಅಭ್ಯರ್ಥಿ ಸೇರಿದಂತೆ 5 ಜನರು ಮಾತ್ರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕಚೇರಿಗೆ ಭೇಟಿ ನೀಡಲು ಅವಕಾಶವಿದೆ.












Click it and Unblock the Notifications