Congress Guarantee: ಇಂದು ಗ್ಯಾರಂಟಿ ಜಾರಿ; ಐದರ ಪೈಕಿ 3 ಗ್ಯಾರಂಟಿ ಆರಂಭದಲ್ಲಿ ಜಾರಿ!? ಷರತ್ತುಗಳು ಏನಿರಬಹುದು?
ಬೆಂಗಳೂರು, ಜೂನ್ 02: ರಾಜ್ಯ ರಾಜಕೀಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಶುರುವಾಗಿದೆ. ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಕೊಟ್ಟ ಮಾತಿನಂತೆ ಗ್ಯಾರಂಟಿಗಳ ಜಾರಿಗೆ ಇಂದು(ಶುಕ್ರವಾರ) ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಸಂಪೂರ್ಣ ಉತ್ತರ ಸಿಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರದ ಬಹುನಿರೀಕ್ಷಿತ, ಹೈವೋಲ್ಟೇಜ್ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಿದ್ದರಾಮಯ್ಯ ಸಂಪುಟ ಸಭೆಯ ಮೇಲೆ ರಾಜ್ಯದ ಜನರ ಚಿತ್ತವಲ್ಲದೇ ವಿಪಕ್ಷಗಳು ಸಹ ಹೆಚ್ಚಿನ ಆಸಕ್ತಿಯನ್ನೇ ಹುಟ್ಟುಹಾಕಿದೆ.

ಕಾಂಗ್ರೆಸ್ ಕೊಟ್ಟಿರುವ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ, ಗೃಹ ಲಕ್ಷಿಯೋಜನೆಯಡಿ ಪ್ರತಿ ಗೃಹಿಣಿಗೆ ತಿಂಗಳಿಗೆ 2000 ರೂ. ಸಹಾಯಧನ ಹಾಗೂ ಅನ್ನಭಾಗ್ಯ ಯೊಜನೆಯಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ, ಯುವನಿಧಿ ಯೋಜನೆಯಡಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ. ಡಿಪ್ಲೊಮಾ ಮುಗಿಸಿದ ನಿರುದ್ಯೋಗಿಗಳಿಗೆ 1500 ರೂ. ನೆರವು. ಅಲ್ಲದೇ 5 ನೇ ಗ್ಯಾರಂಟಿಯಾಗಿ ಶಕ್ತಿ ಯೋಜನೆಯಡಿ ರಾಜ್ಯದ ಬಸ್ಸುಗಳಲ್ಲಿ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಭರವಸೆಯನ್ನ ನೀಡಿದೆ.
ಇತ್ತ ಸರ್ಕಾರ ರಚನೆಯ ಬಳಿಕ ಮೊದಲ ಕ್ಯಾಬಿನೆಟ್ ನಲ್ಲೇ ಐದು ಗ್ಯಾರಂಟಿಗಳನ್ನ ಜಾರಿಗೊಳಿಸುವುದಾಗಿ ಕಾಂಗ್ರೆಸ್ ನ ಹೈಕಮಾಂಡ್ ನಾಯಕರು ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರು ಮಾತು ಕೊಟ್ಟಿದ್ದು, ಮೊದಲ ಕ್ಯಾಬಿನೆಟ್ ನಲ್ಲಿ ತಾತ್ವಿಕ ಒಪ್ಪಿಗೆಯನ್ನ ಮಾತ್ರ ಸರ್ಕಾರ ನೀಡಿದ್ದು, ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಗ್ಯಾರಂಟಿ ಘೋಷಣೆ ಜಾರಿ ಭವಿಷ್ಯ ನಿರ್ಧಾರವಾಗಲಿದೆ.
ಈಗಾಗಲೇ ಆರ್ಥಿಕ ಇಲಾಖೆಯ ಜೊತೆಗೆ ಚರ್ಚೆ ನಡೆಸಿರುವ ಸರ್ಕಾರ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿ ಗ್ಯಾರಂಟಿಗಳು ಏಕಕಾಲಕ್ಕೇ ಅನುಷ್ಠಾನಕ್ಕೆ ಬರುತ್ತಾ? ಅಥವಾ ಆರ್ಥಿಕತೆ ಲಭ್ಯತೆಗೆ ಅನುಸಾರ ಜಾರಿಯಾಗುತ್ತಾ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಈಗಾಗಲೇ ಆಡಳಿತ ಅನುಭವವನ್ನ ಹೊಂದಿರುವ ಸಿದ್ದರಾಮಯ್ಯ ಅವರಿಗೆ ಈ ಪಂಚ ಗ್ಯಾರಂಟಿ ಘೋಷಣೆಯೇ ದೊಡ್ಡ ಸವಾಲಾಗಿದ್ದು, ಐದು ಗ್ಯಾರಂಟಿಗಳಲ್ಲಿ ಮೊದಲ ಹಂತದಲ್ಲಿ ಮೂರು ಗ್ಯಾರಂಟಿಗಳು ಮಾತ್ರ ಜಾರಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.
ಮಹಿಳೆಯರಿಗೆ ಉಚಿತ ಸಾರಿಗೆ
ಶಕ್ತಿ ಯೋಜನೆಯಡಿ ರಾಜ್ಯದ ಬಸ್ಸುಗಳಲ್ಲಿ ಕರ್ನಾಟಕದಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಭರವಸೆಯನ್ನ ಕಾಂಗ್ರೆಸ್ ನೀಡಿದ್ದು, ಉಚಿತ ಪ್ರಯಾಣಕ್ಕೆ ಅವಕಾಶವನ್ನ ಕಲ್ಪಿಸಿ ಇಂತಿಷ್ಟು ಕಿ.ಮೀ. ಮಿತಿ ಹೇರಬಹುದು. ನಿಗದಿತ ಗುರುತಿನ ಚೀಟಿ ಮೂಲಕ ರಾಜ್ಯದ ಮಹಿಳಾ ಪ್ರಯಾಣಿಕರನ್ನ ಗುರುತಿಸಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಇನ್ನೂ ಶಕ್ತಿ ಯೋಜನೆಯಿಂದ 3.5 ಕೋಟಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಭಾಗ್ಯ ಸಿಗಲಿದ್ದು ವಾರ್ಷಿಕ 3,600 ಕೋಟಿ ರೂ. ಒಟ್ಟು ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.
10 ಕೆಜಿ ಉಚಿತ ಅಕ್ಕಿ
ಅನ್ನಭಾಗ್ಯ ಯೊಜನೆಯಡಿ ಬಿಪಿಎಲ್ ಕುಟುಂಬದ ಪ್ರತಿಯೊಬ್ಬರಿಗೂ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತದೆ. ಹಳೆಯ ಮಾನದಂಡಗಳನ್ನೇ ಪರಿಷ್ಕರಿಸಿ ಜೂನ್‌ನಿಂದಲೇ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ.
ಉಚಿತ ವಿದ್ಯುತ್ ಗ್ಯಾರಂಟಿ
ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ನೀಡುವ ಭರವಸೆಯನ್ನ ನೀಡಿದ್ದು, 200 ಯೂನಿಟ್ ಒಳಗೆ ಮಾಸಿಕ ವಿದ್ಯುತ್ ಬಳಕೆ ಉಚಿತವಾಗಿದ್ದರೂ ಬಿಲ್ ಮೊತ್ತ ಪಾವತಿಸುವುದು ಕಡ್ಡಾಯ. ಯೋಜನೆಯ ಫಲಾನುಭವಿಯಾಗಲು ನೋಂದಣಿ ಕಡ್ಡಾಯವಾಗಲಿದ್ದು ಫಲಾನುಭವಿಗಳ ಖಾತೆಗೆ ಹಣ ನೇರ ವರ್ಗಾವಣೆಯಾಗುವ (DBT) ಸಾಧ್ಯತೆಯಿದೆ.












Click it and Unblock the Notifications