Kadur JDS Ticket For YSV Datta: ಇರೋ ಒಬ್ಬ ಬ್ರಾಹ್ಮಣ, ಟಿಕೆಟ್ ಕೊಡದೇ ಇರೋಕಾಗುತ್ತಾ ಎಂದಿದ್ರು ಗೌಡ್ರು
ರಾಜ್ಯ ವಿಧಾನಸಭೆ ಚುನಾವಣಾ ಅಖಾಡಕ್ಕೆ ಇಳಿಯಲು ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೇ 10ರಂದು ನಡೆಯುವ ಚುನಾವಣೆಗೆ ತಯಾರಿಯಲ್ಲಿರುವ ಜೆಡಿಎಸ್ ಇಂದು 49 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜೆಡಿಎಸ್ ತನ್ನ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ.
ತೆನೆ ಹೊತ್ತ ಮಹಿಳೆ ಚಿಹ್ನೆಯ ಪಕ್ಷ ತನ್ನ ಎರಡನೇ ಪಟ್ಟಿಯಲ್ಲಿ ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ ಅವರಿಗೆ ಕಡೂರು ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಸೇರ್ಪಡೆಯಾಗಿ ಕಾಂಗ್ರೆಸ್ ನಲ್ಲಿ ಟಿಕೆಟ್ ವಂಚಿತರಾಗಿ ಮತ್ತೆ ಜೆಡಿಎಸ್ ಗೆ ಮರಳಿರುವ ಮಾಜಿ ಶಾಸಕರಾದ ವೈ.ಎಸ್.ವಿ. ದತ್ತ ಅವರಿಗೆ ಕಡೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ.

ನಗರದ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು 49 ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಪಟ್ಟಿಯಲ್ಲಿ ದತ್ತಾ ಅವರ ಹೆಸರೂ ಘೋಷಣೆ ಮಾಡಿದ ಅವರು, ದತ್ತಾ ನಾಮಪತ್ರ ಸಲ್ಲಿಕೆಗೆ ಸ್ವತಃ ಎಚ್.ಡಿ.ದೇವೇಗೌಡ್ರೇ ಬರುತ್ತಾರೆ ಎಂದಿದ್ದಾರೆ.
ಜೊತೆಗೆ ಜೆಡಿಎಸ್ ಪಕ್ಷ ಕಟ್ಟುವಲ್ಲಿ ದತ್ತ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಕಳೆದ ದಿನವಷ್ಟೇ ವೈಎಸ್‌ವಿ ದತ್ತಾ ಅವರ ಮನೆಗೆ ಹೋಗಿದ್ದ ಎಚ್.ಡಿ.ರೇವಣ್ಣ, ಮತ್ತೆ ಪಕ್ಷಕ್ಕೆ ಆಹ್ವಾನಿಸುವ ಜೊತೆಗೆ ಟಿಕೆಟ್ ನೀಡುವ ಭರವಸೆ ಕೊಟ್ಟಿದ್ದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ಹಿಂದಿನ ದಿನ ದತ್ತಾ ಹಾಗೂ ದಳಪತಿಗಳು ಸಭೆ ನಡೆಸಿದ್ದರು. ಸಭೆಯ ಬಳಿಕ ಮಾತನಾಡಿದ ಎಚ್. ಡಿ. ರೇವಣ್ಣ, "ದತ್ತ ಜೆಡಿಎಸ್ ಸೇರ್ಪಡೆ ಏನಿಲ್ಲ, ಇದು ಅವರ ಕಳೆದ 50 ವರ್ಷದ ಮನೆ, ಅವರಿಗೆ ಅವರ ಮನೆಗೆ ಬರೋದಕ್ಕೆ ಏನು?. ದತ್ತ ಅವರಿಗೆ ಜೆಡಿಎಸ್ ತಂದೆ-ತಾಯಿ ಮನೆ ಥರ. ಪಕ್ಷಕ್ಕೆ ಸೇರುವ ಕಾರ್ಯಕ್ರಮ ಏನೂ ಇರುವುದಿಲ್ಲ. ಅವರ ಮನೆಗೆ ಅವರು ಬಂದಿದ್ದಾರೆ. ದೇವೇಗೌಡರು ಹೇಳಿದ ಮೇಲೆ ಎಲ್ಲಾ ಮುಗಿಯಿತು" ಎಂದಿದ್ದರು.

ಅಚ್ಚರಿಯ ವಿಚಾರ ಎಂದರೆ ಜೆಡಿಎಸ್ ಪಕ್ಷ ಸಿ. ಎಂ. ಧಜಂಜಯ ಈ ಬಾರಿ ಚುನಾವಣೆಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ವೈ. ಎಸ್. ವಿ. ದತ್ತಾ ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಲೆಕ್ಕಾಚಾರವಿತ್ತು.
ಕಾಂಗ್ರೆಸ್ ಟಿಕೆಟ್ ಸಿಗುವ ಭರವಸೆ ಮೇಲೆಯೇ ವೈ. ಎಸ್. ವಿ. ದತ್ತಾ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಆದರೆ ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಕೆ. ಎಸ್. ಆನಂದ್ ಕಡೂರು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದಾಗಿ ವೈ. ಎಸ್. ವಿ. ದತ್ತಾ ಅಸಮಾಧಾನಗೊಂಡಿದ್ದರು. ಅಭಿಮಾನಿಗಳ ಒತ್ತಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದ್ದರು.
ಕರ್ನಾಟಕ ಕೈಗಾರಿಕೆ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು, ವೃತ್ತಿಯಲ್ಲಿ ವಕೀಲರಾಗಿರುವ ಸಿ. ಎಂ. ಧಜಂಜಯ ವೈ. ಎಸ್. ವಿ. ದತ್ತಾ ಪರವಾಗಿ ಜೆಡಿಎಸ್ ಪಕ್ಷದಿಂದ ನಿಂತಿದ್ದರು. ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ದತ್ತಾ ಕಡೂರು ಜೆಡಿಎಸ್ ಅಭ್ಯರ್ಥಿ ಆಗುವುದಾದರೆ ನಾನೇ ಕ್ಷೇತ್ರ ಬಿಟ್ಟು ಕೊಡುವೆ ಎಂದು ಧಜಂಜಯ ಹೇಳಿದ್ದರು.
ವೈ. ಎಸ್. ವಿ. ದತ್ತಾ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಡೂರಿನಲ್ಲಿ ಗೆದ್ದು ಶಾಸಕರಾಗಿದ್ದರು. ಆದರೆ 2018ರ ಚುನಾವಣೆಯಲ್ಲಿ 46,860 ಮತಗಳನ್ನು ಪಡೆದು ಬಿಜೆಪಿಯ ಕೆ. ಎಸ್. ಪ್ರಕಾಶ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿ ಜೆಡಿಎಸ್ ಬಿಟ್ಟಿದ್ದರು.












Click it and Unblock the Notifications