ಎತ್ತಿನಹೊಳೆ ಯೋಜನೆ ನೀರಿನ ಲಭ್ಯತೆ ಬಗ್ಗೆ ಆತಂಕ ಬೇಡ
ಬೆಂಗಳೂರು, ಸೆಪ್ಟೆಂಬರ್ 28 : ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದ ಮೂಲಕ ಅನುಷ್ಟಾನಗೊಳಿಸುತ್ತಿದೆ.
ಈ ಯೋಜನೆಯಿಂದ 24.01 ಟಿಎಂಸಿ ನೀರು ದೊರೆಯಲಿದೆ. ನೀರಿನ ಲಭ್ಯತೆಯ ಬಗ್ಗೆ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ವಿವಿಧ ಮೂಲಗಳಿಂದ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಸಿ ಸರ್ಕಾರ ನೀರಿನ ಲಭ್ಯತೆಯ ಬಗ್ಗೆ ಖಚಿತಪಡಿಸಿಕೊಂಡಿದೆ. ನೀರಿನ ಲಭ್ಯತೆ ಬಗ್ಗೆ ಗೊಂದಲವೆದ್ದಿರುವ ಹಿನ್ನೆಲೆಯಲ್ಲಿ ಕರ್ನಾಟಕ ನೀರಾವರಿ ನಿಗಮ ಸ್ಪಷ್ಟನೆಗಳನ್ನು ನೀಡಿದೆ. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]

ರಾಷ್ಟ್ರೀಯ ಜಲ ವಿಜ್ಞಾನ ಸಂಸ್ಥೆ, ಜಲ ವಿಜ್ಞಾನ ತಜ್ಞರಾದ ಪ್ರೊ.ರಾಮ್ ಪ್ರಸಾದ್, ಕರ್ನಾಟಕ ಪವರ್ ಕಾರ್ಪೊರೇಷನ್ ಈ ಬಗ್ಗೆ ಏಕರೂಪವಾದ ಅಭಿಪ್ರಾಯ ವರದಿ ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಕೇಂದ್ರ ಜಲ ಆಯೋಗ ಪರಿಶೀಲಿಸಿ ವರದಿ ಕ್ರಮಬದ್ಧವಾಗಿದೆ ಎಂದು ಅನುಮೋದನೆ ನೀಡಿದೆ. [ಎತ್ತಿನಹೊಳೆ ಯೋಜನೆಗೆ ತಡೆಯಾಜ್ಞೆ]
ಟೆಂಡರ್ ಪಾರದರ್ಶಕವಾಗಿದೆ : ಎತ್ತಿನಹೊಳೆ ಯೋಜನೆಗಾಗಿ ಕರ್ನಾಟಕ ಸರ್ಕಾರ 12,912.36 ಕೋಟಿ ರೂ. ಮೊತ್ತದ ಪರಿಷ್ಕೃತ ವಿವರವಾದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆಯನ್ನೂ ನೀಡಿದೆ. ಪ್ರಸ್ತುತ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿವೆ.
ಕರ್ನಾಟಕ ನೀರಾವರಿ ನಿಗಮದಡಿಯಲ್ಲಿನ ಕಾಮಗಾರಿಗಳ ಟೆಂಡರ್‌ಗಳನ್ನು ಕೆಟಿಪಿಪಿ ಆಕ್ಟ್ ಪ್ರಕಾರ ಆಹ್ವಾನಿಸಲಾಗುತ್ತದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿಯ ಟೆಂಡರ್‌ಗಳನ್ನು ಕರ್ನಾಟಕ ಪಾರದರ್ಶಕ ನಿಯಾಮವಳಿಗಳ ಅಡಿ ಸೂಚಿಸಿರುವ ಮಾರ್ಗದರ್ಶಿ ಸೂತ್ರದ ಅನ್ವಯ ಕೈಗೆತ್ತಿಕೊಳ್ಳಲಾಗಿದೆ.
ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ಟೆಂಡರ್‌ನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಪಾರದರ್ಶಕವಾಗಿ ಟೆಂಡರ್ ಆಹ್ವಾನಿಸಿ ನಿಯಮಗಳ ಅನ್ವಯ ಗುತ್ತಿಗೆ ನೀಡಲಾಗಿದೆ ಎಂದು ನೀರಾವರಿ ನಿಗಮ ಸ್ಪಷ್ಟನೆ ನೀಡಿದೆ.












Click it and Unblock the Notifications