ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನಕ್ಕೆ 24 ಎಕರೆ ಸ್ಥಳ
ಹಾಸನ, ಡಿ. 6 : ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯಲಿರುವ 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆ ಕಾರ್ಯಕ್ರಮಗಳಿಗೆ ಸ್ಥಳ ನಿಗದಿಪಡಿಸಲಾಗಿದೆ. ಚಂದ್ರಗಿರಿ ಬೆಟ್ಟದ ಹಿಂಭಾಗದಲ್ಲಿನ 24 ಎಕರೆ ವಿಶಾಲ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ.
ಶ್ರವಣಬೆಳಗೊಳ ಮಠದಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಶುಕ್ರವಾರ, ಸಾಹಿತ್ಯ ಸಮ್ಮೇಳದ ಸಿದ್ಧತೆಗಳ ಕುರಿತು ಸಭೆ ನಡೆಯಿತು. ಶಾಸಕ ಸಿ.ಎನ್.ಬಾಲಕೃಷ್ಣ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಸಮ್ಮುಖದಲ್ಲಿ ಸಮ್ಮೇಳನದ ವೇದಿಕೆ, ಊಟೋಪಚಾರ, ಪಾರ್ಕಿಂಗ್ ವ್ಯವಸ್ಥೆ ಹಾಗೂ ವಸತಿಗಾಗಿ ಆಗಬೇಕಿರುವ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಿದ ನಂತರ ಸ್ಥಳ ಪರಿಶೀಲನೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಸ್ಥಳ ನಿಗದಿ ಮಾಡಲಾಯಿತು. [ಶ್ರವಣಬೆಳಗೊಳದಲ್ಲಿ 81ನೇ ಕನ್ನಡ ಸಾಹಿತ್ಯ ಸಮ್ಮೇಳನ]
ಎಪಿಎಂಸಿಗೆ ಸೇರಿದ ಮಾರುಕಟ್ಟೆ ಜಾಗ ಹಾಗೂ ಅದಕ್ಕೆ ಹೊಂದಿಕೊಂಡಿರುವ ಮಠದ ಜಾಗ ಮತ್ತು ಖಾಸಗಿ ಜಮೀನನ್ನು ಸೇರಿಸಿ ಲಭ್ಯವಿರುವ 24 ಎಕರೆ ವಿಶಾಲ ಪ್ರದೇಶವನ್ನು ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು. ಸ್ಥಳದಲ್ಲಿ ಹಾಜರಿದ್ದ ಮಠದ ಸ್ವಾಮೀಜಿ, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಈ ಜಾಗ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.

ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಕಲಾ ಜಾಥಾ ನಡೆದರೆ ಹೆಚ್ಚಿನ ಸಮಯಾವಕಾಶ ಬೇಕಾಗುತ್ತದೆ. ವೇದಿಕೆ ಕಾರ್ಯಕ್ರಮ ಪ್ರಾರಂಭ ತಡವಾಗುತ್ತದೆ. ಆದ್ದರಿಂದ ಸಮ್ಮೇಳನದ ಹಿಂದಿನ ದಿನವೇ ಸಮ್ಮೇಳನಾಧ್ಯಕ್ಷರು ಹಾಗೂ ಕಲಾ ತಂಡಗಳ ಮೆರವಣಿಗೆ ನಡೆಸುವುದು ಸೂಕ್ತ ಎಂದು ಹೇಳಿದರು. [ಕನ್ನಡದ ಮುಂದಿನ ರಾಷ್ಟ್ರಕವಿಗಾಗಿ ಹುಡುಕಾಟ]
ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಮಾತನಾಡಿ ಮೊದಲು ವೇದಿಕೆ, ಪಾರ್ಕಿಂಗ್ ವ್ಯವಸ್ಥೆ ವಾಸ್ತವ್ಯಕ್ಕೆ ಅಗತ್ಯವಿರುವ ಸ್ಥಳಾವಕಾಶ, ಲಭ್ಯವಿರುವ ಸಂಪನ್ಮೂಲಗಳನ್ನು ಪಟ್ಟಿ ಮಾಡಿ ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕಿದೆ. ಜಿಲ್ಲಾಡಳಿತ ಶಕ್ತಿ ಮೀರಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸಲಿದೆ ಎಂದರು.












Click it and Unblock the Notifications