ಬಾಗಲಕೋಟೆ : ಬಾದಾಮಿ ಅಭಿವೃದ್ಧಿಗೆ 22 ಕೋಟಿ ಅನುದಾನ
ಬಾಗಲಕೋಟೆ, ಮೇ 15 : ಕೇಂದ್ರ ಸರ್ಕಾರದ ಪಾರಂಪರಿಕ ತಾಣಗಳ ಅಭಿವೃದ್ಧಿ ಪಟ್ಟಿಯಲ್ಲಿ ಬಾದಾಮಿಯೂ ಸೇರಿದ್ದು, ಬಾದಾಮಿಯನ್ನು ಪಾರಂಪರಿಕ ತಾಣವಾಗಿ ಅಭಿವೃದ್ಧಿ ಪಡಿಸಲು 22.26 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಹೇಳಿದ್ದಾರೆ.
ಗುರುವಾರ ಬಾದಾಮಿಯಲ್ಲಿ ಮಾತನಾಡಿದ ಐಟಿ-ಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, 'ಬಾದಾಮಿಯನ್ನು ಪಾರಂಪರಿಕ ತಾಣವನ್ನಾಗಿ ಮಾಡಲು ಜಿಲ್ಲಾಡಳಿತದ ವತಿಯಿಂದ 37 ಕೋಟಿ ರೂ.ಗಳ ಡಿಪಿಆರ್ ಅನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿತ್ತು, ಈ ಪೈಕಿ 22.26 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ' ಎಂದು ತಿಳಿಸಿದರು. [ಪಾರಂಪರಿಕ ತಾಣವಾಗಿ ಬಾದಾಮಿ ಅಭಿವೃದ್ಧಿ]

ಅಂತಿಮವಾಗಿ ಡಿಪಿಆರ್ ಅನ್ನು ತಯಾರಿಸುವ ಹಿನ್ನಲೆಯಲ್ಲಿ ಡಿಪಿಆರ್‌ನಲ್ಲಿರುವ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ಸಲಹೆ ಸೂಚನೆ ಅಗತ್ಯವಾಗಿದೆ. ಸಲಹೆ ಸೂಚನೆ ಪಡೆದ ನಂತರ ಅಂತಿಮವಾಗಿ ಡಿಪಿಆರ್ ಅನ್ನು ತಯಾರಿಸಿ ಇಂಟ್ಯಾಕ್‌ಗೆ ಹಸ್ತಾಂತರಿಸಲಾಗುತ್ತದೆ ಎಂದರು. [ಬಾಗಲಕೋಟೆ: 32 ಸಾವಿರ ಜನ ಕೆಲಸ ಕಳೆದುಕೊಳ್ಳುವ ಭೀತಿ]
ಮೂರು ದಿನಗಳ ಕಾರ್ಯಾಗಾರ : ಚಾರಿತ್ರಿಕ ಹಿನ್ನಲೆಯಿರುವ ಬಾದಾಮಿಯನ್ನು ಹೃದಯ ಯೋಜನೆಯಡಿ ಶತಮಾನಗಳ ಹಿಂದಿನ ಪರಂಪರೆ ಉಳಿಸುವ ಸಲುವಾಗಿ ಸ್ಥಳೀಯರೊಂದಿಗೆ ಚರ್ಚಿಸಿ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುತ್ತದೆ.
ಜಿಲ್ಲಾಡಳಿತದ ವತಿಯಿಂದ ಇಂಟ್ಯಾಕ್ ಸಂಸ್ಥೆಯನ್ನು ಸಂಪರ್ಕಿಸಿ ಯೋಜನೆಯ ಬಗ್ಗೆ ಸ್ಥಳೀಯವಾಗಿ ಚರ್ಚಿಸಿ ಯೋಜನೆಯನ್ನು ಅರ್ಥಪೂರ್ಣ ರೀತಿಯಲ್ಲಿ ತಯಾರಿಸಲು ಮೂರುದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಇಂಟ್ಯಾಕ್ ಸಂಸ್ಥೆ ಈಗಾಗಲೇ ಅಮೃತಸರ, ವಾರಣಾಸಿ, ಪುರಿ ನಗರಗಳಲ್ಲಿ ಕಾಮಗಾರಿಗಳ ಅನುಷ್ಠಾನದ ರೂಪು-ರೇಷೆಗಳನ್ನು ತಯಾರಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಬಾದಾಮಿಯನ್ನು ಮಾದರಿ ಪಾರಂಪರಿಕ ತಾಣವನ್ನಾಗಿಸುವ ನಿಟ್ಟಿನಲ್ಲಿ ಇಂಟ್ಯಾಕ್ ಸಂಸ್ಥೆಯ ಪ್ರಧಾನ ನಿರ್ದೇಶಕರ ತಂಡವನ್ನು ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದೆ ಎಂದರು.












Click it and Unblock the Notifications