2028ರ ಚುನಾವಣೆ ಟಾರ್ಗೆಟ್! ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಕೇಂದ್ರ ನಾಯಕರಿಂದ ಮಾರ್ಗದರ್ಶನ: ಡಿಕೆಶಿ
ಬೆಂಗಳೂರು: ಕರ್ನಾಟಕದಲ್ಲಿ 2028ರ ವಿಧಾನಸಭಾ ಚುನಾವಣೆಗೆ ಇನ್ನೂ ಸಮಯವಿದ್ದರೂ, ಕಾಂಗ್ರೆಸ್ ಈಗಿನಿಂದಲೇ ಚುನಾವಣಾ ಸಿದ್ಧತೆಯತ್ತ ಹೆಜ್ಜೆ ಇಡುತ್ತಿದೆ. ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪಕ್ಷ ಸಂಘಟನೆ, ಚುನಾವಣಾ ತಂತ್ರ ಹಾಗೂ ಮುಂದಿನ ಸವಾಲುಗಳ ಕುರಿತು ಮಾರ್ಗದರ್ಶನ ನೀಡಲು ಕೇಂದ್ರದ ನಾಯಕರು ಸಭೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯಕ್ಕೆ ರಣದೀಪ್ ಸಿಂಗ್ ಸುರ್ಜೇವಾಲ ಅವರು ಆಗಮಿಸಿರುವ ಕುರಿತು ಸದಾಶಿವನಗರದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ್ದು, ನೂತನವಾಗಿ ಜಿಲ್ಲಾ ಅಧ್ಯಕ್ಷರು ನೇಮಕಗೊಂಡಿದ್ದು, ಅವರಿಗೆ ಮಾರ್ಗದರ್ಶನ ನೀಡಲು ಹೈಕಮಾಂಡ್ ನಾಯಕರು ಸಭೆ ಕರೆದಿದ್ದಾರೆ ಎಂದು ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದರು.

ನಾಳೆಯಿಂದ (ಗುರುವಾರ) 3 ದಿನಗಳ ಕಾಲ ವಿವಿಧ ಜಿಲ್ಲೆಗಳ ಪ್ರವಾಸದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಇಂದಿನಿಂದ (ಬುಧವಾರ) ಕಲಬುರಗಿ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಪ್ರವಾಸ ಮಾಡಲಿದ್ದೇನೆ. ವಿಧಾನ ಮಂಡಲ ಅಧಿವೇಶನದಲ್ಲಿ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿಯ ಕುರಿತಂತೆ ಚರ್ಚೆ ನಡೆಯಲಿದೆ ಎಂದರು.
ಯುವ ಸಂಸತ್ತು ನಿರ್ಮಾಣ ಮಾಡುವ ಆಶಯ
ಯುವ ಸಂಸತ್ತು ನಿರ್ಮಾಣ ಮಾಡುವ ಆಶಯದಿಂದ ಶಾಲಾ, ಕಾಲೇಜುಗಳಲ್ಲಿ ಮಾದರಿ ಸಂಸತ್ ನಡೆಸಲಾಗುವುದು. ಇದು ಬಸವಣ್ಣನವರ ಕಾಲದ ಅನುಭವ ಮಂಟಪದ ಚಿಂತನೆಗಳನ್ನು ಒಳಗೊಂಡಿದೆ. ವಿಶ್ವಕ್ಕೆ ಮೊದಲ ಸಂಸತ್ತು ಎಂದು ಖ್ಯಾತಿ ಪಡೆದಿರುವ ಅನುಭವ ಮಂಟಪದ ತಿಳುವಳಿಕೆ ಈ ಮೂಲಕ ನೀಡಲಾಗುವುದು ಎಂದರು.
ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ
ಜನಸೇವಕ ಎಂದು ನನ್ನನ್ನು ಜನ ಗುರುತಿಸಿದರು. ಅದೇ ರೀತಿ ವ್ಯವಸ್ಥೆಯಲ್ಲಿ ಹೊಸ ನಾಯಕತ್ವ ಬೆಳೆಯಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆ ಯುವಕರಿಗೆ ತಿಳಿದಿರಬೇಕು. ಅದಕ್ಕಾಗಿಯೇ ಪ್ರತಿ ಕಾಲೇಜಿನಲ್ಲಿ ಶಿಸ್ತು ಬದ್ಧವಾಗಿ ಚುನಾವಣೆಗಳು ನಡೆಯಬೇಕೆಂದು ಘೋಷಿಸಲಾಗಿದೆ. ಯಾರಲ್ಲಿ ಯಾವ ಕಿಡಿ ಇರುತ್ತದೆಯೋ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ನಾಯಕತ್ವದ ಅವಕಾಶ ದೊರೆಯಬೇಕು. ದಿನೇ ದಿನೇ ಹೊಸ ಬೆಳವಣಿಗೆಗಳು ಯುವಪೀಳಿಗೆಯಲ್ಲಿ ಕಾಣುತ್ತಿದ್ದೇವೆ. ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕ ಎಂದು ತಿಳಿಸಿದರು.
ರಾಜೀವ್ ಗಾಂಧಿ ಅವರು 74-75 ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಜನರಿಗೆ ಅಧಿಕಾರ ದೊರಕಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಯಕತ್ವ ಬೆಳೆಸಿದರು. ನಮ್ಮ ಪಕ್ಷ ತ್ಯಾಗ ಮಾಡಿದವರ ಇತಿಹಾಸವನ್ನೇ ಹೊಂದಿದೆ. ನೆಹರೂ ಅವರ ಜೈಲುವಾಸ, ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಪ್ರಾಣತ್ಯಾಗ, ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಇತಿಹಾಸವಿದೆ ಎಂದರು.
2028 Karnataka Elections:ಪ್ರಜಾಪ್ರಭುತ್ವ ಭಾರತದ ಆತ್ಮ
ಪ್ರಜಾಪ್ರಭುತ್ವ ಭಾರತದ ಆತ್ಮ. ಪ್ರಜೆಗಳೇ ಇಲ್ಲಿ ಪ್ರಭುಗಳು. ಭಾರತ ವಿಶ್ವಕ್ಕೆ ಪ್ರಜಾಪ್ರಭುತ್ವದ ಮಾದರಿಯನ್ನು ಬಸವಣ್ಣನವರ ಅನುಭವ ಮಂಟಪದ ಇದಕ್ಕೆ ಮೂಲ. ನಾನು ಮುಖ್ಯಮಂತ್ರಿ ಆದ ಮೂರು ದಿನಗಳಲ್ಲೇ ಅನುಭವ ಮಂಟಪಕ್ಕೆ ಭೇಟಿ ಕೊಟ್ಟು ಅಲ್ಲಿಂದ ಸಿಎಂ ಪದವಿಯ ಪಯಣ ಆರಂಭಿಸಿದೆ. ಜಾತಿ, ಲಿಂಗ, ತಾರತಮ್ಯಗಳು ಇಲ್ಲದೆ ಎಲ್ಲರಿಗೂ ಅವಕಾಶ ನೀಡಿದ್ದನ್ನು ಇತಿಹಾಸದ ಪುಟಗಳ ಮೂಲಕ ನಾವು ಕಲಿತಿದ್ದೇವೆ. ಪ್ರಜಾಪ್ರಭುತ್ವದ ಆಶಯಗಳು ಶಾಶ್ವತವಾಗಿರಲಿ ಎಂದು ಹೇಳಿದರು.
ಪ್ರಜಾಪ್ರಭುತ್ವ ಕೇವಲ ಮತದಾನಕ್ಕೆ ಸೀಮಿತವಲ್ಲ. ಪ್ರಜಾಪ್ರಭುತ್ವ ಎಂದಾಗ ಚುನಾವಣೆ, ಮತದಾನ ಪಂಚಾಯಿತಿಯಿಂದ ಸಂಸತ್ತಿನವರೆಗೆ ನಾಯಕರ ಆಯ್ಕೆ ಮಾತ್ರ ಪ್ರಜಾಪ್ರಭುತ್ವವಲ್ಲ. ಘನತೆ, ಗೌರವ ಮತ್ತು ಬದುಕುವ ಹಕ್ಕನ್ನು ನೀಡುವುದು ನೈಜ ಪ್ರಜಾಪ್ರಭುತ್ವ ಎಂದರು.
ಜನರು ಸರ್ಕಾರಕ್ಕೆ ಹೆದರಿದರೆ ಅದು ಸರ್ವಾಧಿಕಾರ. ಸರ್ಕಾರ ಜನರನ್ನು ಗೌರವಿಸಿದಾಗ ಪ್ರಜಾಪ್ರಭುತ್ವವಾಗುತ್ತದೆ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂದು ಹಿರಿಯರು ನಮಗೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು.
ಪ್ರತಿ ತಾಲೂಕಿನಲ್ಲಿ ಮಾರ್ಗದರ್ಶನ ನೀಡಲು ಕಾನೂನು ತಂಡ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದರು. ಆದ ಕಾರಣಕ್ಕೆ ಪಕ್ಷದಿಂದ ಲೀಗಲ್ ಬ್ಯಾಂಕ್ ತೆರೆಯಲು ಮುಂದಾಗಿದ್ದೇವೆ. ಎಸ್ ಐಆರ್ ನಿಂದ ಒಂದು ಕೋಟಿ ಜನ ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. 47 ಲಕ್ಷ ಜನರಿಗೆ ಖಾಯಂ ನಿವಾಸ ಪತ್ರ ಹಾಗೂ ಆದಾಯ ಪತ್ರ ಒದಗಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಮತದಾನದ ಹಕ್ಕನ್ನು ಯಾರೂ ಕಳೆದುಕೊಳ್ಳಬಾರದು ಎಂದರು
"ಡಬಲ್ ಇಂಜಿನ್ ಸರ್ಕಾರ ಇದ್ದರೂ ಜನ 2023ರಲ್ಲಿ 136 ಸೀಟುಗಳ ಮೂಲಕ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಜನರ ಮನಸ್ಸನ್ನು ಅರಿಯುವುದು ಕಷ್ಟ. ಭಾರತ್ ಜೋಡೋ ಸಂದರ್ಭದಲ್ಲಿ ಜನರ, ನೋವು ಕಷ್ಟಗಳನ್ನು ಅರಿತುಕೊಂಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಯಿತು ಎಂದು ಹೇಳಿದರು.


Click it and Unblock the Notifications
