2018ರಲ್ಲಿ ಬಿಜೆಪಿಯನ್ನು ಕಾಪಾಡಿದ್ದವರು ಶಾಮನೂರು ಶಿವಶಂಕರಪ್ಪ: ಪತ್ರಕರ್ತ ರಮೇಶ ದೊಡ್ಡಪುರ
ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ (94) ನಿಧನರಾಗಿದ್ದಾರೆ. ಕರ್ನಾಟಕದ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಅಜಾತ ಶತ್ರು ಎಂದೇ ಖ್ಯಾತಿ ಗಳಿಸಿದ್ದರು. ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿರುವುದು ಇದೆ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪರ - ವಿರೋಧ ಚರ್ಚೆಗೆ ನಾಂದಿ ಹಾಡಿದ್ದ ವಿಚಾರವಿದು. "2018ರಲ್ಲಿ ಬಿಜೆಪಿಯನ್ನು ಕಾಪಾಡಿದ್ದವರು ಶಾಮನೂರು ಶಿವಶಂಕರಪ್ಪ" ಎನ್ನುವ ಶೀರ್ಷಿಕೆಯೊಂದಿಗೆ ಪತ್ರಕರ್ತ ರಮೇಶ ದೊಡ್ಡಪುರ ಅವರು ಬರೆದಿರುವ ವಿಶೇಷ ಬರಹ ಇಲ್ಲಿದೆ.
ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ (94) ನಿಧನರಾಗಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಶಾಮನೂರು ಅವರಿಂದ ದೊರೆತ ಪರೋಕ್ಷ ಬಲವೂ ಕಾರಣ ಎನ್ನಲು ಯಾವುದೇ ಅನುಮಾನವಿಲ್ಲ. ಆ ಚುನಾವಣೆಯಲ್ಲಿ ಮುಖ್ಯ ವಿಷಯಗಳಲ್ಲೊಂದು ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರತಿಬಾರಿ ಆಡಳಿತವಿರೋಧಿ ಅಲೆ ಕೆಲಸ ಮಾಡುತ್ತಲೇ ಇದೆ. ಒಮ್ಮೊಮ್ಮೆ ಹೆಚ್ಚು, ಒಮ್ಮೊಮ್ಮೆ ಕಡಿಮೆ ಪ್ರಮಾಣದಲ್ಲಿ ಆಡಳಿತಾರೂಢ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ ಅಥವಾ ಪಾಠ ಕಲಿಸಿದ್ದಾರೆ. ವಿವಿಧ ಭ್ರಷ್ಟಾಚಾರ ಆರೋಪಗಳು, ಟಿಪ್ಪು ಜಯಂತಿ, ಹಿಂದೂ ಕಾರ್ಯಕರ್ತರ ಹತ್ಯೆ, ರೈತರ ಆತ್ಮಹತ್ಯೆ... ಹೀಗೆ ಸಾಲುಸಾಲು ನಕಾರಾತ್ಮಕ ಅಂಶಗಳಿಂದ ವಿರೋಧಿ ಅಲೆಯನ್ನು ಎದುರಿಸುತ್ತಿದ್ದ ಸರ್ಕಾರವು ಹೊರಬರಬೇಕಿತ್ತು. ಅದಕ್ಕೆ ಒಂದು ದೊಡ್ಡ ಸಮುದಾಯದ ಮತಬ್ಯಾಂಕ್ ಅನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನ ಮಾಡಲಾಯಿತು.

ಬಿಜೆಪಿ ಜೊತೆಗೆ, ಮುಖ್ಯವಾಗಿ ಬಿ.ಎಸ್. ಯಡಿಯೂರಪ್ಪ ಅವರ ಬೆನ್ನಿಗೆ ಇರುವ ವೀರಶೈವ ಲಿಂಗಾಯತ ಸಮುದಾಯ ಒಟ್ಟಾಗಿ ಮತ ನೀಡಿದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ತಿಳಿಯಿತು. ಅದಾಗಲೇ ಇದ್ದ ಪ್ರತ್ಯೇಕ ಧರ್ಮದ ವಿಚಾರಕ್ಕೆ ಒತ್ತಾಸೆ ನೀಡಿ, ಸಮುದಾಯದ ಮತಗಳನ್ನು ವಿಭಜಿಸುವ ಯೋಜನೆ ಮಾಡಲಾಯಿತು.
ಒಂದು ಕಡೆ ಶೀಘ್ರಗತಿಯಲ್ಲಿ ನ್ಯಾ. ನಾಗಮೋಹನ ದಾಸ್ ಸಮಿತಿಯಿಂದ ವರದಿಯನ್ನು ಪಡೆಯಲಾಯಿತು. ಇನ್ನೊಂದೆಡೆ ಸರ್ಕಾರದಿಂದ ನಾಲ್ವರು ಸಚಿವರನ್ನೇ (ಬಸವರಾಜ ರಾಯರಡ್ಡಿ, ಡಾ. ಶರಣಪ್ರಕಾಶ ಪಾಟೀಲ, ಎಂ.ಬಿ. ಪಾಟೀಲ್ ಹಾಗೂ ವಿನಯ ಕಕುಲಕರ್ಣಿ) ಅನೌಪಚಾರಿಕವಾಗಿ ನಿಯೋಜಿಸಲಾಯಿತು. ಹೀಗೆ ನಿಯೋಜಿಸಿದ್ದನ್ನು ಅವರುಗಳು ನಿರಾಕರಿಸಿದ್ದಾರಾದರೂ ಅಂತಹ ಚಟುವಟಿಕೆ ಕಾಣುತ್ತಲೇ ಇತ್ತು.
ಹೇಗಿದ್ದರೂ ವೀರಶೈವ ಲಿಂಗಾಯತ ಮುದಾಯದಲ್ಲಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವುದು ವಿರಕ್ತ ಮಠಗಳು (ಮೇಲ್ನೋಟಕ್ಕೆ ಕಾಣುವಂತೆ). ಹಾಗಾಗಿ ದೊಡ್ಡ ಸಮುದಾಯವು ಪ್ರತ್ಯೇಕ ಧರ್ಮದಿಂದ ಅನುಕೂಲವಾಗುತ್ತದೆ ಎಂದು ಭಾವಿಸಿ ಕಾಂಗ್ರೆಸ್ ಕಡೆಗೆ ಒಲವು ತೋರುವ, ಕೊನೆ ಪಕ್ಷ ಸಮುದಾಯದ ಮತಗಳು ಸಾಕಷ್ಟು ಕಡೆ ಒಡೆದುಹೋಗುವ ಸಾಧ್ಯತೆಯೂ ಇತ್ತು. ಬಿ.ಎಸ್. ಯಡಿಯೂರಪ್ಪ ಅವರು ಎಂತಹ ಚಾಣಾಕ್ಷ ರಾಜಕಾರಣಿ ಎನ್ನುವುದನ್ನು ಇದೊಂದು ಸನ್ನಿವೇಶವನ್ನು ನಿಭಾಯಿಸಿದ್ದರ ಆಧಾರದಲ್ಲೇ ಹೇಳಬಹುದು. ಪ್ರತ್ಯೇಕ ಧರ್ಮದ ಕುರಿತು ಎಷ್ಟೇ ಪ್ರಶ್ನೆಗಳನ್ನು ಕೇಳಿದರೂ ಬಿ.ಎಸ್. ಯಡಿಯೂರಪ್ಪ ಅವರು ಹೇಳುತ್ತಿದ್ದದ್ದು ಒಂದೇ ಮಾತು. "ಪ್ರತ್ಯೇಕ ಧರ್ಮದ ವಿಚಾರದಲ್ಲಿ ತುಮಕೂರಿನ ಸಿದ್ಧಗಂಗೆ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಭಿಪ್ರಾಯವೇ ನಮ್ಮ ಅಭಿಪ್ರಾಯ". ಎಷ್ಟೇ ಪ್ರಶ್ನೆ ಕೇಳಲಿ, ತಿರುಗಿಸಿ ಮುರುಗಿಸಿ ಕೇಳಲಿ ಈ ಮಾತನ್ನು ಬಿಟ್ಟು ಬೇರೆ ಆಡುತ್ತಿರಲಿಲ್ಲ.
ಆಗ ವೀರಶೈವ ಮಹಾಸಭಾ ಅಧ್ಯಕ್ಷರಾಗಿದ್ದವರು ಶಾಮನೂರು ಶಿವಶಂಕರಪ್ಪ ಅವರು. ಯಡಿಯೂರಪ್ಪ ಅವರು ಹಿಡಿದುಕೊಂಡಿದ್ದು ಅತ್ಯಂತ ಸದೃಢವಾದ ಎರಡು ಆಧಾರಸ್ತಂಭಗಳು. ಸಿದ್ಧಗಂಗೆ ಸ್ವಾಮೀಜಿಯವರಂತೂ ಬಹಿರಂಗವಾಗಿ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಒಮ್ಮೆ ಎಂ.ಬಿ. ಪಾಟೀಲರು ಅಂತಹ ಸಾಹಸಕ್ಕೂ ಕೈಹಾಕಿದರು. ಸಿದ್ಧಗಂಗಾ ಶ್ರೀಗಳನ್ನು ಭೇಟಿಯಾಗಿ ಹೊರಬಂದವರೆ, ಶ್ರೀಗಳು ಪ್ರತ್ಯೇಕ ಧರ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದು ಪತ್ರಿಕಾ ಹೇಳಿಕೆ ನೀಡಿಬಿಟ್ಟರು. ಕೂಡಲೇ ಮಾಧ್ಯಮಗಳಲ್ಲೆಲ್ಲ ಸಂಚಲನ ಸೃಷ್ಟಿಯಾಯಿತು. ಕೆಲವೇ ಸಮಯದಲ್ಲಿ ಮಠದಿಂದ ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ, ಸ್ವಾಮೀಜಿಯವರು ಅಂತಹ ಯಾವುದೇ ಮಾತನ್ನು ಆಡಿಲ್ಲ ಎಂದು ಹೇಳಲಾಯಿತು. ಅಲ್ಲಿಗೆ ಸರ್ಕಾರಕ್ಕೆ ಭಾರೀ ಹಿನ್ನಡೆಯಾಯಿತು.
ಇತ್ತ ಕಡೆ ಶಾಮನೂರು ಶಿವಶಂಕರಪ್ಪ ಅವರೂ ಅಷ್ಟೆ. ಅವರೇನೂ ಪ್ರತ್ಯೇಕ ಧರ್ಮದ ವಿರುದ್ಧ ಇದ್ದವರಲ್ಲ. ಆದರೆ ವೀರಶೈವ ಲಿಂಗಾಯತ ಸಮುದಾಯ ಒಡೆಯುವುದು ಬೇಡ ಎನ್ನುವುದು ಅವರ ಕಾಳಜಿ. ವೀರಶೈವವನ್ನು ಬಿಟ್ಟು ಕೇವಲ ಲಿಂಗಾಯತ ಎಂಬ ಹೆಸರಿನಲ್ಲಿ ಪ್ರತ್ಯೇಕ ಧರ್ಮ ಬೇಡ ಎನ್ನುವುದು ಅವರ ವಾದವಾಗಿತ್ತು. ಅವರೂ ಅಷ್ಟೆ, ಆ ನಿಲುವಿನಿಂದ ಕದಲಲಿಲ್ಲ. ಸ್ವತಃ ತಮ್ಮದೇ ಪಕ್ಷದ ಸರ್ಕಾರ ಮಾಡುತ್ತಿರುವ ಪ್ರಯತ್ನಕ್ಕೆ ಕೈಜೋಡಿಸುವುದಕ್ಕಿಂತಲೂ ಸಮುದಾಯವನ್ನು ಒಡೆಯುವುದರಿಂದ ತಡೆಯುವುದು ಪ್ರಮುಖವೆನಿಸಿ ಗಟ್ಟಿ ನಿಲುವು ತಳೆದರು.
ಯಡಿಯೂರಪ್ಪ ಅವರು ಹಿಡಿದುಕೊಂಡ ಈ ಎರಡು ಆಧಾರಸ್ತಂಭಗಳ (ಶ್ರೀ ಸಿದ್ಧಗಂಗಾ ಶ್ರೀಗಳು ಹಾಗೂ ಶಾಮನೂರು ಶಿವಶಂಕರಪ್ಪ ಅವರು) ಪರಿಣಾಮವಾಗಿ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವು ಸರ್ಕಾರಕ್ಕೆ ಲಾಭವನ್ನಂತೂ ತರಲಿಲ್ಲ. ಲಾಭಕ್ಕಿಂತಲೂ ಹೆಚ್ಚಾಗಿ, ಸಮುದಾಯವನ್ನು ಒಡೆಯುವ ಹುನ್ನಾರ ನಡೆಸಿದರು ಎಂಬ ಆರೋಪಕ್ಕೂ ಒಳಗಾದರು, ಸರ್ಕಾರಕ್ಕೆ ಮಾರಕವೇ ಆಯಿತು.
ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಸರಳ ಬಹುಮತದಿಂದ 80ಕ್ಕೆ ಕುಸಿಯಿತು, ಬಿಜೆಪಿ 64ರಿಂದ 104ಕ್ಕೆ ಜಿಗಿಯಿತು. ಉತ್ತರ ಕರ್ನಾಟಕ ಭಾಗದಲ್ಲಿಯೂ ಕಾಂಗ್ರೆಸ್ ಸೋಲು ಕಂಡಿತು. ಪ್ರಮುಖವಾಗಿ, ಇಡೀ ಹೋರಾಟದ ನೇತೃತ್ವ ವಹಿಸಿದ್ದೇವೆ ಎನ್ನುತ್ತಿದ್ದ ನಾಲ್ಕು ಸಚಿವರ ಪೈಕಿ ಬಸವರಾಜ ರಾಯರಡ್ಡಿ(ಯಲಬುರ್ಗದಲ್ಲಿ ಬಿಜೆಪಿಯ ಹಾಲಪ್ಪ ಬಸಪ್ಪ ಆಚಾರ್ ವಿರುದ್ಧ 13,318 ಮತದ ಅಂತರದಲ್ಲಿ), ಡಾ.ಶರಣಪ್ರಕಾಶ ಪಾಟೀಲ್(ಸೇಡಂನಲ್ಲಿ ಬಿಜೆಪಿಯ ರಾಜಕುಮಾರ್ ಪಾಟೀಲ್ ವಿರುದ್ಧ 7,200 ಮತಗಳ ಅಂತರದಲ್ಲಿ) ಹಾಗೂ ವಿನಯ್ ಕುಲಕರ್ಣಿ(ಧಾರವಾಡದಲ್ಲಿ ಬಿಜೆಪಿಯ ಅಮೃತ್ ದೇಸಾಯಿ ವಿರುದ್ಧ 20,340 ಮತದ ಅತರದಲ್ಲಿ) ಸೋಲುಂಡರು.
ಬಬಲೇಶ್ವರ ಕ್ಷೇತ್ರದಲ್ಲಿ ಎಂ. ಬಿ. ಪಾಟೀಲ್ 29,715 ಮತಗಳ ಅಂತರದಲ್ಲಿ ಬಿಜೆಪಿಯ ವಿಜಯಕುಮಾರ್ ಪಾಟೀಲ್ ವಿರುದ್ಧ ಜಯಿಸಿ ನಿಟ್ಟುಸಿರು ಬಿಟ್ಟರು. ಪ್ರತ್ಯೇಕ ಧರ್ಮದ ವಿಚಾರಕ್ಕೆ ಸರ್ಕಾರ ಕೈ ಹಾಕಬಾರದಿತ್ತು ಎಂದು ಸ್ವತಃ ಡಿ.ಕೆ. ಶಿವಕುಮಾರ್ ಅವರು ಹಲವು ಬಾರಿ ಬಹಿರಂಗವಾಗಿ ಕ್ಷಮೆ ಯಾಚಿಸಿದರು. ಈ ಮಾತಿಗೆ ಎಂ.ಬಿ. ಪಾಟೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಒಮ್ಮೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸುತ್ತಲೇ ಎಂ.ಬಿ. ಪಾಟೀಲರಿಗೆ ಫೋನ್ ಮಾಡಿದಾಗ, ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. "ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಕ್ಷಮೆ ಕೇಳಲು ಆತ ಯಾರು? ಆತನೇನು ಕೆಪಿಸಿಸಿ ಅಧ್ಯಕ್ಷನಾ? ಮೂರನೇ ಸಲ ಈತ ಕ್ಷಮೆ ಕೇಳಿದ್ದಾನೆ. ಆತ ಎಷ್ಟು ಸಲ ಈ ವಿಷಯ ಪ್ರಸ್ತಾಪಿಸುತ್ತಾನೆ ಅಷ್ಟು ಸಲ ನಾನು ಪ್ರತಿಕ್ರಿಯೆ ನೀಡುತ್ತೇನೆ" ಎಂದಿದ್ದರು.
ಬಿಜೆಪಿಯನ್ನು ಬಚಾವು ಮಾಡಬೇಕೆನ್ನುವುದು ಶಾಮನೂರು ಶಿವಶಂಕರಪ್ಪ ಅವರ ಉದ್ದೇಶವಾಗಿರಲಿಕ್ಕಿಲ್ಲ. ಏಕೆಂದರೆ ಅವರೊಬ್ಬ ಪಕ್ಷನಿಷ್ಠ ಕಾಂಗ್ರೆಸಿಗ. ಯಾವುದೇ ಬಣಕ್ಕೂ ಸೇರದೆ ಪಕ್ಷದ ಬಣದಲ್ಲಿ ಗುರುತಿಸಿಕೊಂಡವರು. ಎಂದಿಗೂ ಯಾರ ವಿರುದ್ಧವೂ ಮಾತನಾಡಲು ಹಿಂಜರಿಯದವರು. ಸಿದ್ಧಗಂಗಾ ಶ್ರೀಗಳಿಗೂ ಯಾವುದೋ ಒಂದು ಪಕ್ಷವನ್ನು ಬೆಂಬಲಿಸುವ ಇರಾದೆ ಇರಲಾರದು. ಆದರೆ ಅವರುಗಳ ನೈಜ ನಿಲುವು ಪರೋಕ್ಷವಾಗಿ ಬಿಜೆಪಿಗೆ ಲಾಭವಾಗಿದ್ದಂತೂ ನಿಜ. ಶಾಮನೂರು ಅವರು ನಿಧನರಾದ ಸುದ್ದಿ ಕೇಳಿ ಇಷ್ಟೆಲ್ಲ ನೆನಪಾಯಿತು. (ಇದರಲ್ಲಿರುವ ಮತ್ತು ಇಲ್ಲಿ ಬರೆಯದ ಅನೇಕ ಅಂಶಗಳನ್ನು ನನ್ನ ʼಬಿಜೆಪಿ 25+1ʼ ಪುಸ್ತಕದಲ್ಲಿ ದಾಖಲಿಸಿದ್ದೇನೆ). ಶಾಮನೂರು ಅವರು ಶಿವನ ಸಾಯುಜ್ಯವನ್ನು ಸೇರಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಸಿಗಲಿ.
-
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಕಾಂಗ್ರೆಸ್ ಆಡಳಿತ ವೈಫಲ್ಯಕ್ಕೆ ಎ-ಖಾತೆ ಕೈಗನ್ನಡಿ? ಸರ್ಕಾರದ ವಿರುದ್ದ ಆರ್. ಅಶೋಕ್ ವಾಗ್ದಾಳಿ -
Bihar: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ, ನೂತನ ಸಿಎಂ ಆಗಿ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಆಯ್ಕೆ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications