'ಜೆಡಿಎಸ್‌ನಲ್ಲಿ 20 ಬಂಡಾಯ ಶಾಸಕರಿದ್ದಾರೆ'
ಬೆಂಗಳೂರು, ಫೆ.4 : ಜೆಡಿಎಸ್ ಪಕ್ಷದ 20 ಶಾಸಕರು ಬಂಡಾಯದ ಬಾವುಟ ಹಾರಿಸಿದ್ದಾರೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೊಸ ಬಾಂಬ್ ಸಿಡಿಸಿದ್ದಾರೆ. ಪಕ್ಷದಲ್ಲಿ ಉಳಿಯುವ ಇಚ್ಛೆ ಅವರಿಗೆ ಇದ್ದರೂ ದೇವೇಗೌಡರೇ ಪಕ್ಷ ಬಿಡಿ ಎಂದು ಪದೇ-ಪದೇ ಹೇಳುತ್ತಿದ್ದಾರೆ ಎಂದು ಜಮೀರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜಮೀರ್ ಅಹಮದ್ ಖಾನ್ ಅವರು, ಮಾಧ್ಯಮದವರು ಜಮೀರ್, ಚೆಲುವರಾಯ ಸ್ವಾಮಿ, ಬಾಲಕೃಷ್ಣ ಸೇರಿದಂತೆ ನಾಲ್ವರು ಪಕ್ಷದ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ಹೇಳುತ್ತಿದ್ದೀರಿ. [ಗೌಡರ ವಿರುದ್ಧ ಗುಡುಗಿದ ಜಮೀರ್, ಚೆಲುವರಾಯಸ್ವಾಮಿ]

'ಆದರೆ, 20 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಕೊನೆಯ ಉಸಿರು ಇರುವವರೆಗೆ ದೇವೇಗೌಡರೇ ನಮ್ಮ ನಾಯಕರು. ನಾವು ಪಕ್ಷದಲ್ಲಿ ಮುಂದುವರಿಯುವ ಇಚ್ಛೆ ಹೊಂದಿದ್ದೇವೆ. ಆದರೆ, ದೇವೇಗೌಡರೇ ಪದೇ-ಪದೇ ಪಕ್ಷ ಬಿಡುವಂತೆ ಹೇಳುತ್ತಿದ್ದಾರೆ' ಎಂದು ಜಮೀರ್ ಅಹಮದ್ ಖಾನ್ ಹೇಳಿದರು. [ಜೆಡಿಎಸ್ ಪಕ್ಷ ಬಿಡೋಲ್ಲ ಅಂದ್ರು ಜಮೀರ್ ಅಹಮದ್]
ಎಚ್ಡಿಕೆ ಜೊತೆ ಭಿನ್ನಾಭಿಪ್ರಾಯ : 'ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಭಿನ್ನಾಭಿಪ್ರಾಯವಿರುವುದು ನಿಜ. ಮಾಜಿ ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿ ಬದಲಾಗಿದ್ದಾರೆ. ಅವರು ದೊಡ್ಡ ನಾಯಕರಾಗಿ ಬದಲಾಗಿದ್ದಾರೆ' ಎಂದು ಜಮೀರ್ ಕುಟುಕಿದ್ದಾರೆ.
'ಜೆಡಿಎಸ್ ಪಕ್ಷವನ್ನು ಕುಮಾರಸ್ವಾಮಿ ಅವರು ಏಕಾಂಗಿಯಾಗಿ ಕಟ್ಟಿಲ್ಲ. ಲಕ್ಷಾಂತರ ಕಾರ್ಯಕರ್ತರು ಪಕ್ಷವನ್ನು ಕಟ್ಟಲು ಶ್ರಮಿಸಿದ್ದಾರೆ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಲು ಕಾರಣವೇನು? ಎಂಬ ಪ್ರಶ್ನೆಯನ್ನು ಕುಮಾರಸ್ವಾಮಿ ಅವರಿಗೆ ಕೇಳಿ' ಎಂದು ಜಮೀರ್ ತಿಳಿಸಿದರು.
ದೇವೇಗೌಡ ಬಳಿ ಹೋಗಲೇ : 'ನನ್ನ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ಮಾತನಾಡಲು ಸಿಎಂ ಸಿದ್ದರಾಮಯ್ಯ ಮತ್ತು ವಿವಿಧ ಸಚಿವರನ್ನು ಭೇಟಿಯಾಗಿದ್ದೇನೆ. ಕಾಂಗ್ರೆಸ್ ಸೇರಲು ಅವರ ಬಳಿ ಹೋಗಿಲ್ಲ. ಕ್ಷೇತ್ರದ ಕೆಲಸಕ್ಕೆ ನಾನು ದೇವೇಗೌಡರ ಬಳಿ ಹೋಗಲೇ'. ಎಂದು ಜಮೀರ್ ಅಹಮದ್ ಪ್ರಶ್ನಿಸಿದರು.












Click it and Unblock the Notifications