2 ವರ್ಷದ ಬಾಲಕಿಯ ತಬಲಾ ಸಾಧನೆ: 12 ತಾಳ ನುಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಉತ್ತರ ಕನ್ನಡದ ಸ್ವರಶ್ರೀ ಹೆಗಡೆ
ಮಕ್ಕಳು ಸರಿಯಾಗಿ ಮಾತನಾಡಲು, ಸರಿಯಾಗಿ ನಡೆದಾಡಲು ಕಲಿಯುವ ವಯಸ್ಸಿನಲ್ಲೇ ಕರ್ನಾಟಕದ ಪುಟ್ಟ ಬಾಲಕಿಯೊಬ್ಬಳು ತನ್ನ ಅದ್ಭುತ ಪ್ರತಿಭೆಯಿಂದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾಳೆ. ಕೇವಲ 2 ವರ್ಷ 10 ತಿಂಗಳ ಸ್ವರಶ್ರೀ ಹೆಗಡೆ ಎಂಬ ಪೋರಿ ತಬಲಾ ವಾದನದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾಳೆ.
ಈ ಎಳೆ ವಯಸ್ಸಿನಲ್ಲೇ ಬರೋಬ್ಬರಿ 12 ತಾಳಗಳನ್ನ ಲಯಬದ್ಧವಾಗಿ ಹೇಳುತ್ತಾ, ಅಷ್ಟೇ ನಿಖರವಾಗಿ ತಬಲಾದಲ್ಲಿ ನುಡಿಸುವ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್' ಪುಟ ಸೇರಿದ್ದಾಳೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈಕೆಯ ತಬಲಾ ನುಡಿಸುವ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಾಲಕಿಯ ಸಾಧನೆ
ಈ ಪುಟ್ಟ ಬಾಲಕಿ ಸ್ವರಶ್ರೀ ಹೆಗಡೆ ಮೂಲತಃ ಕರ್ನಾಟಕದ ಕರಾವಳಿ ಭಾಗವಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವಳು. ಸಾಮಾನ್ಯವಾಗಿ ಸಂಗೀತಗಾರರು ಹಾಗೂ ತಬಲಾ ವಾದಕರು ವರ್ಷಗಳ ಕಾಲ ಕಠಿಣ ಅಭ್ಯಾಸ ಮಾಡಿ ಕಲಿಯುವಂತಹ 12 ತಾಳಗಳನ್ನ ಈಕೆ ಅತ್ಯಂತ ಸುಲಭವಾಗಿ ಕರಗತ ಮಾಡಿಕೊಂಡಿದ್ದಾಳೆ.
ಕೇವಲ ತಬಲಾ ನುಡಿಸುವುದು ಮಾತ್ರವಲ್ಲದೆ, ಆ ತಾಳದ ಬೋಲ್‌ಗಳನ್ನ(Bols) ಬಾಯಲ್ಲಿ ಸ್ಪಷ್ಟವಾಗಿ ಉಚ್ಚರಿಸುತ್ತಾ, ಕೈಗಳ ಮೂಲಕ ಲಯಬದ್ಧವಾಗಿ ನುಡಿಸುವುದು ಈಕೆಯ ಅದ್ಭುತ ಸಾಧನೆಯಾಗಿದೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗರಿ
ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ತಾಳ ಎಂಬುದು ಲಯದ ಒಂದು ಆವರ್ತವಾಗಿದ್ದು, ಇದು ಸಂಗೀತದ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ತಾಳವು ತನ್ನದೇ ಆದ ನಿರ್ದಿಷ್ಟ ಸಂಖ್ಯೆಯ ಬಡಿತಗಳನ್ನ (Beats) ಹೊಂದಿರುತ್ತದೆ.
'ಅಪ್ಪ ತಬಲಾ ದಿಗ್ಗಜ, ಅಮ್ಮ ಗಾಯಕಿ... ಮಗಳು 3ನೇ ವಯಸ್ಸಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡರ್!': ತಾಳಗಳ ಬೋಲ್ಗಳನ್ನು ಹೇಳುತ್ತಲೇ ತಬಲಾ ನುಡಿಸುವ ಹೊನ್ನಾವರದ ಸ್ವರಶ್ರೀ ಹೆಗಡೆ..#SwarashreeHegde #IndiaBookOfRecords #ViralWatch #OIKannada #OIReels #TablaProdigy #YoungAchiever https://t.co/DAH0wHH71k
— oneindiakannada (@OneindiaKannada) October 25, 2026
ಕೇವಲ ಒಂದು ತಾಳವನ್ನ ಕಲಿಯಲು ವಿದ್ಯಾರ್ಥಿಗಳಿಗೆ ಉತ್ತಮ ಏಕಾಗ್ರತೆ, ನೆನಪಿನ ಶಕ್ತಿ ಹಾಗೂ ಸಮಯದ ಅವಶ್ಯಕತೆ ಇರುತ್ತದೆ. ಇಂತಹದರಲ್ಲಿ ಇನ್ನು 3 ವರ್ಷವೂ ತುಂಬದ ಎಳೆಯ ಮಗುವೊಂದು 12 ವಿಭಿನ್ನ ತಾಳಗಳನ್ನ ಬಾಯಲ್ಲಿ ಹೇಳುತ್ತಾ, ನಿಖರವಾಗಿ ತಬಲಾ ವಾದನ ಮಾಡುವುದು ಅಸಾಮಾನ್ಯ ಸಾಧನೆಯಾಗಿದೆ.
ಈಕೆಯ ಅಪಾರ ನೆನಪಿನ ಶಕ್ತಿ ಮತ್ತು ಕೌಶಲವನ್ನ ಗುರುತಿಸಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಈಕೆಗೆ ಗೌರವ ನೀಡಿದೆ.
ವೈರಲ್ ವಿಡಿಯೋಗೆ ನೆಟ್ಟಿಗರ ಮೆಚ್ಚುಗೆ
ಸ್ವರಶ್ರೀ ಅದ್ಭುತವಾಗಿ ತಬಲಾ ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕರಾವಳಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, "ಇದು ಉತ್ತರ ಕನ್ನಡಕ್ಕೆ ಹಾಗೂ ಇಡೀ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣ, 2 ವರ್ಷದ ಬಾಲಕಿಯ ಪ್ರತಿಭೆ ನಂಬಲಸಾಧ್ಯ" ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಕಮೆಂಟ್ ಮಾಡಿ, "ಈ ಪುಟ್ಟ ದೇವತೆಗೆ ಸಾಕ್ಷಾತ್ ಸರಸ್ವತಿ ದೇವಿಯೇ ಒಲಿದಿದ್ದಾಳೆ" ಎಂದು ಹಾರೈಸಿದ್ದಾರೆ.
ಇನ್ನು ಕೆಲವರು ಬಾಲಕಿಯ ಹೆಸರನ್ನ ಉಲ್ಲೇಖಿಸಿ, "ಈ ಮಗುವಿಗೆ ಭವಿಷ್ಯದಲ್ಲಿ ಸಂಗೀತದ ಒಲವು ಮೂಡುತ್ತದೆ ಎಂದು ಪೋಷಕರಿಗೆ ಮೊದಲೇ ತಿಳಿದಿತ್ತೇನೋ, ಅದಕ್ಕಾಗಿಯೇ 'ಸ್ವರಶ್ರೀ' ಎಂದು ಇಷ್ಟು ಸುಂದರವಾದ ಹೆಸರಿಟ್ಟಿದ್ದಾರೆ" ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಉಜ್ವಲ ಭವಿಷ್ಯ
ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಸಂಗೀತ ಅಥವಾ ಕಲೆಯ ಬಗ್ಗೆ ಒಲವು ಮೂಡುವಂತೆ ಮಾಡಿದರೆ, ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ನೀಡಿದರೆ ಅವರು ಎಂತಹ ಅದ್ಭುತ ಸಾಧನೆ ಮಾಡಬಲ್ಲರು ಎಂಬುದಕ್ಕೆ ಸ್ವರಶ್ರೀ ಹೆಗಡೆಯೇ ಒಂದು ಒಳ್ಳೆಯ ಉದಾಹರಣೆಯಾಗಿದ್ದಾಳೆ.
ಸಂಗೀತ ಶಿಕ್ಷಕರು ಹೇಳುವಂತೆ, ಪ್ರತಿಭೆಯ ಜೊತೆಗೆ ಮನೆಯಲ್ಲಿ ಸಿಗುವ ಬೆಂಬಲ ಕೂಡ ಮಗುವಿನ ಬೆಳವಣಿಗೆಗೆ ಅತ್ಯಂತ ಮುಖ್ಯ. ತನ್ನ ಪುಟ್ಟ ಕೈಗಳಿಂದ ದೊಡ್ಡ ಮಟ್ಟದ ನಾದವನ್ನ ಹೊರಡಿಸುತ್ತಿರುವ ಸ್ವರಶ್ರೀ, ಭವಿಷ್ಯದಲ್ಲಿ ಸಂಗೀತ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಕನ್ನಡಿಗರ ಹಾರೈಕೆಯಾಗಿದೆ.


Click it and Unblock the Notifications
