ಚಿಕನ್ ಬಿರಿಯಾನಿಗೆ ವರ್ಷಕ್ಕೆ 2.80 ಕೋಟಿ ಖರ್ಚು: "ಬಿರಿಯಾನಿ ಬೆಂಗಳೂರು ಮಾಡಹೊರಟ ಸರ್ಕಾರ"
ಬೆಂಗಳೂರು, ಜುಲೈ 12: ಕಾಂಗ್ರೆಸ್ ಸರಕಾರವು ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಬದಲಾಗಿ 'ಬಿರಿಯಾನಿ ಬೆಂಗಳೂರು' ಮಾಡಲು ಹೊರಟಿದೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಅವರು ಕಿಡಿಕಾರಿದ್ದಾರೆ. ರಾಜ್ಯ ಸರಕಾರವು ಬೆಂಗಳೂರಿನ ಬೀದಿನಾಯಿಗಳಿಗೆ ವರ್ಷಕ್ಕೆ 2.80 ಕೋಟಿ ಖರ್ಚು ಮಾಡಿ, ಚಿಕನ್ ಬಿರಿಯಾನಿ ಕೊಡುವ ಔಚಿತ್ಯ ಏನು? ಇದಕ್ಕೆ ಯಾರು ಯೋಜನೆ ನಿರೂಪಿಸಿದ್ದಾರೆ? ಎಂದ ಅವರು, ದಯಮಾಡಿ ಬಿಬಿಎಂಪಿ ಕಮೀಷನರ್ ಮತ್ತು ಬೆಂಗಳೂರು ಉಸ್ತುವಾರಿ ಸಚಿವರು ಸ್ಪಷ್ಟನೆ ಕೊಡಬೇಕೆಂದು ಮನವಿ ಮಾಡಿದರು.
ನಾಯಿಗಳಿಗೆ ಆಹಾರ ಹಾಕುವುದಕ್ಕೆ ನಮ್ಮ ತಕರಾರಿಲ್ಲ. ಬೆಂಗಳೂರಿನ ಬೀದಿನಾಯಿಗಳಿಗೆ ಹಲವಾರು ವರ್ಷಗಳಿಂದ ಎನ್‍ಜಿಒಗಳು, ದಾನಿಗಳು, ಯಾರೋ ಮನೆಯವರು, ಹೋಟೆಲ್ ಮಾಲೀಕರು ಆಹಾರ ನೀಡುತ್ತಿದ್ದರು. ಆದರೆ, ದುಡ್ಡು ಹೊಡೆಯಲು ಹಾಗೂ ಜನರ ತೆರಿಗೆ ಹಣವನ್ನು ಪೋಲು ಮಾಡುವ ರೀತಿಯಲ್ಲಿ ಯೋಜನೆ ಇದ್ದು, ಇದರ ಹಿಂದಿನ ಮರ್ಮ ಏನು? ಇದಕ್ಕೆ ಯಾರು ಸಹಕಾರ ಕೊಟ್ಟಿದ್ದಾರೆ ಎಂದು ಕೇಳಿದರು.

2023ರ ಸರ್ವೇ ಪ್ರಕಾರ ಮೂರುವರೆಯಿಂದ 4 ಲಕ್ಷ ಬೀದಿನಾಯಿಗಳಿವೆ ಎಂದು ತಿಳಿಸಲಾಗಿತ್ತು. ನಾಯಿಗಳಿಗೆ ಲಸಿಕೆ ಕೊಡುವುದು, ಸಂತಾನಹರಣ ಆಪರೇಷನ್ ಮಾಡುವುದು ಬಿಬಿಎಂಪಿಯ ಕೆಲಸ. ಅದಕ್ಕಾಗಿಯೇ ಒಂದು ಇಲಾಖೆ ಇದ್ದು, ಅವರು ಅದನ್ನು ನಿರ್ವಹಿಸುತ್ತಾರೆ. ಬೀದಿನಾಯಿಗಳ ಕಾಟದಿಂದ ಗ್ರಾಮೀಣ ಪ್ರದೇಶ, ಸ್ಲಂಗಳಲ್ಲಿ ಸಾರ್ವಜನಿಕರು ಮತ್ತು ಮಕ್ಕಳು ಹೊರಕ್ಕೆ ಬರಲು ಭಯ ಪಡುವಂತಾಗಿದೆ. ಹಿರಿಯ ನಾಗರಿಕರು ಉದ್ಯಾನಗಳಲ್ಲಿ ವಾಕಿಂಗ್ ತೆರಳಲು ಭಯಪಡುತ್ತಿದ್ದಾರೆ. ಬಡ ಮಕ್ಕಳ ಬಿಸಿ ಊಟಕ್ಕೆ 12.45 ರೂ. ಖರ್ಚು ಮಾಡುತ್ತಿದ್ದಾರೆ. ಆದರೆ, ನಾಯಿಗಳಿಗೆ 22 ರೂ. ಖರ್ಚು ಮಾಡುತ್ತಾರೆ. ಬಡಮಕ್ಕಳಿಗಿಂತ ಪೌಷ್ಟಿಕ ಆಹಾರವನ್ನು ನಾಯಿಗೆ ಕೊಡುವುದಾದರೆ, ಬಡ ಮಕ್ಕಳ ಗತಿ ಏನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಪ್ರಶ್ನಿಸಿದರು.
ಒಂದು ವಲಯದಲ್ಲಿ 500 ನಾಯಿಗೆ ಆಹಾರ ಹಾಕುವುದಾಗಿ ಹೇಳುತ್ತಾರೆ. 8 ವಲಯಗಳಲ್ಲಿ 4 ಸಾವಿರ ನಾಯಿಗಳಿಗೆ ಆಹಾರ ನೀಡುವ ಹೇಳಿಕೆ ಕೊಟ್ಟಿದ್ದಾರೆ. ಉಳಿದ ಲಕ್ಷಾಂತರ ನಾಯಿಗಳೇನು ಪಾಪ ಮಾಡಿವೆ. ಆಹಾರ ಪಡೆಯುವ ನಾಯಿಗಳು ಮಾಡಿದ ಪುಣ್ಯವೇನು ಎಂದರು. ಆ ನಾಯಿಗೆ ತಂಗಳನ್ನ, ಈ ನಾಯಿಗೆ ಬಿರಿಯಾನಿ ಹಾಕುತ್ತೀರಿ. ನಾಯಿ ನಾಯಿಯಲ್ಲೇ ಭೇದ ಮಾಡುವುದೇಕೆ ಎಂದು ಕೇಳಿದರು. ಬ್ರ್ಯಾಂಡ್ ಬೆಂಗಳೂರಿನ ಮೊದಲನೇ ಮೆಟ್ಟಿಲಾಗಿ ನಾಯಿಗಳಿಗೆ ಬಿರಿಯಾನಿ ಕೊಡಲಿದ್ದು, ಮುಖ್ಯಮಂತ್ರಿಗಳಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದರು.
ಈ ಯೋಜನೆ ರೂಪಿಸಿದ ಮಹಾತ್ಮನಿಗೆ ಪ್ರಶಸ್ತಿ ಕೊಡಬೇಕು. ಇಲ್ಲಿನವರೆಗೆ ನಾಯಿಪ್ರಿಯರು, ಎನ್.ಜಿ.ಒ.ಗಳು ಆಹಾರ ಹಾಕಿದ್ದಾರೆ. ಇದೀಗ ತೆರಿಗೆ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಸರಕಾರಿ ಶಾಲೆ ಮಕ್ಕಳಿಗೆ ಶೂ ಕೊಡಲು ದುಡ್ಡಿಲ್ಲದೇ ದಾನಿಗಳನ್ನು ನೋಡುತ್ತಿರುವುದಾಗಿ ಶಿಕ್ಷಣ ಸಚಿವರೇ ಹೇಳಿದ್ದಾರೆ. ಇನ್ನೊಂದೆಡೆ ನಾಯಿಗೆ ಬಿರಿಯಾನಿ ಹಾಕುವುದು ಎಷ್ಟರಮಟ್ಟಿಗೆ ಸಮಂಜಸ ಎಂದು ಕೇಳಿದರು. ಈ ಯೋಜನೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಸಿಎಂ ಕುರ್ಚಿಗಾಗಿ ಕಿತ್ತಾಟ, ದೆಹಲಿ ಯಾತ್ರೆ ನಡೆದಿದೆ ಎಂದು ಟೀಕಿಸಿದ ಅವರು, ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡುತ್ತಿದ್ದಾರೆ. ನಾವು ಅಭಿವೃದ್ಧಿ ಸಂಬಂಧ ಪ್ರತಿ ಶಾಸಕರಿಗೆ 50 ಕೋಟಿ ಕೇಳಿದ್ದು, ಕೊಡುತ್ತಿಲ್ಲ ಎಂದು ದೂರಿದರು. ಬೀದಿ ಹಸುಗಳ ಸಂಬಂಧ ಕ್ರಮ ಕೈಗೊಳ್ಳುತ್ತಿಲ್ಲ. ಬೀದಿನಾಯಿ ನಿಯಂತ್ರಣ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದರು. ಅಗತ್ಯವಿದ್ದರೆ ಡಾಗ್ ಪಾರ್ಕ್ ಮಾಡಿ ಎಂದು ಅವರು ತಿಳಿಸಿದರು. ತೆರಿಗೆ ಹಣವನ್ನು ಅಭಿವೃದ್ಧಿಗೆ ಬಳಸಿ ಎಂದು ಆಗ್ರಹಿಸಿದರು.












Click it and Unblock the Notifications