ಕರ್ನಾಟಕದ 12 ದೇವಾಲಯಗಳ ಆದಾಯದಲ್ಲಿ ಭಾರಿ ಕುಸಿತ!
ಬೆಂಗಳೂರು, ಡಿಸೆಂಬರ್ 25: ಕೋವಿಡ್ ಪರಿಣಾಮ ದೇವಾಲಯಗಳ ಮೇಲೂ ಪ್ರಭಾವ ಬೀರಿದೆ. ಈ ವರ್ಷ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಆದಾಯದಲ್ಲಿ ಭಾರೀ ಕುರಿತವಾಗಿದೆ. ರಾಜ್ಯದ 12 ಪ್ರಮುಖ ದೇವಾಲಯಗಳಲ್ಲಿ ಕಳೆದ ವರ್ಷ 317 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಈ ವರ್ಷ ಇಲ್ಲಿಯ ತನಕ 18.6 ಕೋಟಿ ರೂ. ಆದಾಯ ಬಂದಿದೆ.
ಕರ್ನಾಟಕದಲ್ಲಿ ಶ್ರೀಮಂತ ದೇವಾಲಯಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ 90 ಕೋಟಿ ರೂ. ಆದಾಯ ಬಂದಿತ್ತು. ಈ ವರ್ಷ ಇದುವರೆಗೂ 4.2 ಕೋಟಿ ರೂ. ಸಂಗ್ರಹವಾಗಿದೆ.
ಕೊಲ್ಲೂರು ಮೂಕಾಂಬಿಕ ದೇವಾಲಯದ ಆದಾಯ ಕಳೆದ ವರ್ಷ 45-50 ಕೋಟಿ. ಈ ವರ್ಷ 4.5 ಕೋಟಿ ರೂ. ಸಂಗ್ರಹವಾಗಿದೆ. ಇದೇ ಮೊದಲ ಬಾರಿಗೆ ಕಡಿಮೆ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳಲ್ಲಿ ಕಡಿಮೆ ಆದಾಯ ಸಂಗ್ರಹ ದಾಖಲಾಗಿದೆ.

ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಕಳೆದ ವರ್ಷ 35.23 ಕೋಟಿ ರೂ. ಆದಾಯ ಬಂದಿತ್ತು. ಈ ವರ್ಷ 74 ಲಕ್ಷ ರೂ. ಸಂಗ್ರಹವಾಗಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಾಲಯದಲ್ಲಿ ಈ ವರ್ಷ 12.6 ಲಕ್ಷ ರೂ. ಸಂಗ್ರಹವಾಗಿದೆ. ಕಳೆದ ವರ್ಷ 20.8 ಕೋಟಿ ಆದಾಯ ಬಂದಿತ್ತು.
ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ 34,559 ದೇವಾಲಯಗಳು ಬರುತ್ತವೆ. ಆದಾಯದಲ್ಲಿ ಕುಸಿತವಾದರೂ ಇಲಾಖೆ ವ್ಯಾಪ್ತಿಯ ದೇವಾಲಯಗಳ ಸಿಬ್ಬಂದಿ ವೇತನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆ 175 ದೇವಾಲಯಗಳನ್ನು ಎ, ಬಿ ಮತ್ತು ಸಿ ಎಂದು ವಿಭಾಗ ಮಾಡಿದೆ. 'ಎ' ವಿಭಾಗದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಆದಾಯ ಬರುವ ದೇವಾಲಯಗಳಿವೆ. 'ಬಿ' ವ್ಯಾಪ್ತಿಯಲ್ಲಿ 5 ರಿಂದ 25 ಲಕ್ಷದ ತನಕ ಆದಾಯ ಬರುವ ದೇವಾಲಯಗಳು ಸೇರಿವೆ. 'ಸಿ' ವ್ಯಾಪ್ತಿಯಲ್ಲಿ 5 ಲಕ್ಷಕ್ಕಿಂತ ಕಡಿಮೆ ಆದಾಯ ಬರುವ ದೇವಾಲಯವಿದೆ.
ಮಾರ್ಚ್‌ನಲ್ಲಿ ಕೋವಿಡ್ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ದೇವಾಲಯಗಳನ್ನು ಮುಚ್ಚಲಾಯಿತು. ಸೆಪ್ಟೆಂಬರ್ ಬಳಿಕ ದೇವಾಲಯಗಳ ಬಾಗಿಲು ಪುನಃ ತೆರೆಯಲಾಯಿತು. ಬೇಸಿಗೆ ರಜೆ ಸಮಯದಲ್ಲಿ ದೇವಾಲಯಕ್ಕೆ ಹೆಚ್ಚಿನ ಜನರು ಬರುತ್ತಿದ್ದರು, ಆದಾಯವೂ ಬರುತ್ತಿತ್ತು.
ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಜಾತ್ರೆ, ಉತ್ಸವಗಳಲ್ಲಿ ಸಾವಿರಾರು ಜನರು ಸೇರುತ್ತಿದ್ದರು. ಆದರೆ, ಈ ಬಾರಿ ಕೋವಿಡ್ ಕಾರಣದಿಂದಾಗಿ ಜಾತ್ರೆ, ಉತ್ಸವಗಳನ್ನು ರದ್ದು ಮಾಡಲಾಯಿತು. ಇದರಿಂದಾಗಿ ಆದಾಯ ಸಂಗ್ರಹ ಕುಸಿತಗೊಂಡಿದೆ.
ಮುಜರಾಯಿ ಇಲಾಖೆ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ದೇವಾಲಯಗಳ ಆದಾಯ ಕುಸಿತವಾಗಿದೆ. ಆದರೆ, ನಾವು ಸಿಬ್ಬಂದಿಗೆ ವೇತನವನ್ನು ನೀಡಲು ಯಾವುದೇ ತೊಂದರೆ ಇಲ್ಲ. ಬ್ಯಾಂಕ್‌ನಲ್ಲಿ ಇರುವ ಠೇವಣಿಯಿಂದ ಬರುವ ಬಡ್ಡಿಯಲ್ಲಿ ವೇತನ ನೀಡಲಾಗುತ್ತದೆ" ಎಂದು ಹೇಳಿದ್ದಾರೆ.












Click it and Unblock the Notifications