15th Finance Commission: ರಾಜ್ಯಕ್ಕೆ ಅನುದಾನ ಹಂಚಿಕೆ, ಶಿಫಾರಸಿನ ಅಂಕಿ-ಅಂಶ ಬಿಚ್ಚಿಟ್ಟ ಆರ್.ಅಶೋಕ್
ಬೆಂಗಳೂರು, ಡಿಸೆಂಬರ್ 26: ಸಾಲ ಮನ್ನಾ ಆಸೆಗಾಗಿ ಬರಗಾಲ ಬರಲಿ ಎಂದು ರೈತರು ಆಸೆ ಪಡುತ್ತಾರೆ ಎಂದು ಉಡಾಫೆ ಮಾತಾಡುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ರೈತರಿಗೆ ಬರ ಪರಿಹಾರದ ವಿಷಯದ ಬಗ್ಗೆ ಮಾತನಾಡುವ ನೈತಿಕತೆಯೇ ಉಳಿದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಜರಿದಿದ್ದಾರೆ. ಅಲ್ಲದೇ ಕೇಂದ್ರದಿಂದ ರಾಜ್ಯಕ್ಕೆ ಯಾವ ಯಾವ ಅವಧಿಯಲ್ಲಿ ಎಷ್ಟು ಪಟ್ಟು ಅನುದಾನ ಬಂದಿದೆ, ಶಿಫಾರಸು, ವಿಶೇಷ ಅನುದಾನ ಕುರಿತು ಅಂಕಿ ಅಂಶಗಳನ್ನು ಅವರು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಮಂಗಳವಾರ ಟ್ವೀಟ್ ಮಾಡಿರುವ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕನ್ನಡಿಗರ ತಲೆ ಮೇಲೆ ಬರೀ ಕಲ್ಲಲ್ಲ, ಚಪ್ಪಡಿ ಕಲ್ಲು ಹಾಕುತ್ತಿರುವುದು ಕಟು ಸತ್ಯ.

15ನೇ ಹಣಕಾಸು ಆಯೋಗ ತನ್ನ 2020-21ರ ಮಧ್ಯಂತರ ವರದಿಯಲ್ಲಿ ಕರ್ನಾಟಕಕ್ಕೆ 5495 ಕೋಟಿ ರೂ. ಶಿಫಾರಸು ಮಾಡಿದ್ದುದು ನಿಜ. ಆದರೆ 2021-22 ರಿಂದ 2025-26ರವರೆಗಿನ ತನ್ನ ಅಂತಿಮ ವರದಿಯಲ್ಲಿ ಕರ್ನಾಟಕ ಸೇರಿದಂತೆ ಯಾವುದೇ ರಾಜ್ಯಕ್ಕೆ ವಿಶೇಷ ಅನುದಾನವನ್ನು ಶಿಫಾರಸು ಮಾಡಿಲ್ಲ. ಇದು ಸತ್ಯಾಂಶ. ತಾವು ಹೇಳಿರುವುದು ಅರ್ಧ ಸತ್ಯವೆಂದು ತಮಗೂ ಗೊತ್ತು. ಅಲ್ಲವೇ?
ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಮಾಡುವ ಕಲೆ ತಮಗೆ ಚೆನ್ನಾಗಿ ಕರಗತವಾಗಿದೆ. ಎಷ್ಟಾದರೂ ಸುಳ್ಳೇ ಕಾಂಗ್ರೆಸ್ ಪಕ್ಷದ ಮನೆ ದೇವರಲ್ಲವೇ? ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ರಾಜ್ಯಕ್ಕೆ 6561.91 ಕೋಟಿ ರೂ. ವಿತರಣೆ
ಕೋವಿಡ್-19 ಸಾಂಕ್ರಾಮಿಕದ ನಂತರದ ಪರಿಸ್ಥಿತಿಯಲ್ಲಿ ಆರ್ಥಿಕ ಪುನಶ್ಚೇತನತನಕ್ಕಾಗಿ 2020-21ನೇ ಹಣಕಾಸು ವರ್ಷದಿಂದ ಈವರೆಗೆ ಕರ್ನಾಟಕಕ್ಕೆ 6561.91 ಕೋಟಿ ರೂ. ಮೊತ್ತವನ್ನು 50 ವರ್ಷಗಳ ಬಡ್ಡಿ ರಹಿತ ಸಾಲವಾಗಿ ಕರ್ನಾಟಕಕ್ಕೆ ನೀಡಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಬಡ್ಡಿ ಭರಿಸುತ್ತದೆ. ಇದು ಸತ್ಯವಲ್ಲವೇ? ಎಂದು ಪ್ರಶ್ನಿಸಿದರು.
ಯುಪಿಎ ಅವಧಿಗಿಂತ ಹೆಚ್ಚು ಹಣ ಹಂಚಿಕೆ
ಇನ್ನು ತೆರಿಗೆ ಹಂಚಿಕೆ ವಿಷಯಕ್ಕೆ ಬಂದರೆ, 2004-14ರ ನಡುವಿನ UPA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ
81,795 ಕೋಟಿ ರೂ. ತೆರಿಗೆ ಹಂಚಿಕೆಯಾಗಿತ್ತು. NDA ಸರ್ಕಾರದ ಅವಧಿಯಲ್ಲಿ 2014-24 (2023, ನವೆಂಬರ್ 17 ರವರೆಗೆ) 2.77 ಲಕ್ಷ ಕೋಟಿ ರೂ.ಗೂ ಹೆಚ್ಚು ಬಿಡುಗಡೆಯಾಗಿದೆ. ಅಂದರೆ UPA ಅವಧಿಗೆ ಹೋಲಿಸಿದರೆ 239% ಅಥವಾ 3.4 ಪಟ್ಟು ಹೆಚ್ಚಳವಾಗಿದೆ ಎಂದು ವಿವರಿಸಿದರು.
ಈಗ ಅನುದಾನ ಬಿಡುಗಡೆ ನೋಡುವುದಾದರೆ 2004-14 ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕವು 60,779 ಕೋಟಿ ರೂ. ಅನುದಾನವನ್ನು ಪಡೆದಿದೆ. ಎನ್‌ಡಿಎ ಸರ್ಕಾರದ ಅವಧಿಯಲ್ಲಿ 2014-24ರ ನಡುವೆ (ಆರ್ಥಿಕ ವರ್ಷ 2022-23 ರವರೆಗೆ) 2.08 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಅನುದಾನ ಪಡೆದಿದೆ. ಅಂದರೆ ಹಿಂದಿನ ಯುಪಿಎ ಅವಧಿಗೆ ಹೋಲಿಸಿದರೆ ಕರ್ನಾಟಕಕ್ಕೆ ಸಿಕ್ಕ ಕೇಂದ್ರ ಅನುದಾನ 243% ಅಥವಾ 3.4 ಪಟ್ಟು ಹೆಚ್ಚಳ ಎಂಬದು ತಿಳಿಯುತ್ತದೆ ಎಂದು ಮಾಹಿತಿ ನೀಡಿದರು.

ರೈಲ್ವೆ ಯೋಜನೆಗೆ ಸಿಕ್ಕ ಅನುದಾನ ಮಾಹಿತಿ
ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕ ಅನುದಾನ ಪೈಕಿ 2009 ರಿಂದ 2014ರ ಅವಧಿಯಲ್ಲಿ ಕರ್ನಾಟಕದವರೇ ಇಬ್ಬರು ರೈಲ್ವೆ ಖಾತೆ ಸಚಿವರಾಗಿದ್ದರೂ ಸಹ ಕರ್ನಾಟಕಕ್ಕೆ ಕೇವಲ 835 ಕೋಟಿ ದೊರೆತಿತ್ತು. ಅದೇ ಎನ್‌ಎಡಿ ಸರ್ಕಾರ ಬಂದ ಮೇಲೆ 2014-22ರ ಅವಧಿಯಲ್ಲಿ ಒಟ್ಟು 3,424 ಕೋಟಿ ಹಾಗೂ 2023-24 ಒಂದೇ ವರ್ಷದಲ್ಲಿ 7,561 ಕೋಟಿ ಅನುದಾನ ದೊರೆತಿದೆ ಎಂದು ಲೆಕ್ಕ ಬಿಚ್ಚಿಟ್ಟರು.
ರಾಜ್ಯ ಪಾಲು ಏಕೆ ಜನರಿಗೆ ತಲುಪಿಲ್ಲ
ಸಾಲಮನ್ನಾ ಆಸೆಗಾಗಿ ಬರ ಬರಲಿ ಎನ್ನುತ್ತಾರೆಂದು ಸರ್ಕಾರ ಸಕ್ಕರೆ ಮತ್ತು ಜವಳಿ ಖಾತೆ ಸಚಿವರು ಹೇಳಿದ್ದಾರೆ. ನಿಮಗೆ ರೈತರಿಗೆ ಬರ ಪರಿಹಾರದ ವಿಷಯದ ಬಗ್ಗೆ ಮಾತನಾಡುವ ನೈತಿಕತೆಯೇ ಉಳಿದಿಲ್ಲ. ಕೇಂದ್ರ ಸರ್ಕಾರದ ಪ್ರಕ್ರಿಯೆ ಮುಗಿದ ಕೂಡಲೇ ರಾಜ್ಯ ಪಾಲಿನ ಪರಿಹಾರ ತಾನಾಗಿಯೇ ಬಂದೇ ಬರುತ್ತದೆ. ಆದರೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ₹2000 ರೂಪಾಯಿ ಇನ್ನು ಯಾಕೆ ರೈತರನ್ನು ತಲುಪಿಲ್ಲ? ಇದಕ್ಕೆ ಉತ್ತರ ಕೊಡಿ ಎಂದು ಸಿದ್ದರಾಮಯ್ಯರನ್ನು ಅಶೋಕ್ ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಮುಖ್ಯಮಂತ್ರಿಗಳಾಗಿ 12 ವರ್ಷಗಳ ಕಾಲ ಒಂದು ರಾಜ್ಯವನ್ನ ಯಶಸ್ವಿಯಾಗಿ ಮುನ್ನಡೆಸಿರುವ ಅನುಭವ ಇದೆ. ರಾಜ್ಯ ಸರ್ಕಾರಗಳ ಹಣಕಾಸಿನ ಇತಿಮಿತಿ, ಅಗತ್ಯತೆಗಳ ಬಗ್ಗೆ ಸಂಪೂರ್ಣ ಅರಿವಿದೆ, ಸಂವೇದನೆಯೂ ಇದೆ. ಸಹಕಾರಿ ಫೆಡರಲಿಸಂ (Cooperative Federalism) ನಲ್ಲಿ ನಂಬಿಕೆ ಇಟ್ಟಿರುವ ಪ್ರಧಾನಿ ಮೋದಿ ಅವರಿಂದ ಕರ್ನಾಟಕ ಸೇರಿದಂತೆ ಯಾವ ರಾಜ್ಯಕ್ಕೂ ಎಂದಿಗೂ ಅನ್ಯಾಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಸಲಹೆ
ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು, 14 ಬಾರಿ ಬಜೆಟ್ ಮಂಡಿಸಿರುವ ಅನುಭವ ಇರುವ ಸಿದ್ದರಾಮಯ್ಯನವರು ಆಂಕಿ-ಅಂಶಗಳನ್ನು ಅಧ್ಯಯನ ಮಾಡಿ, ವಾಸ್ತವಾಂಶ ಕುರಿತು ಮಾತನಾಡಬೇಕು. ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡಿ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ತಮಗೆ ಶೋಭೆ ತರುವುದಿಲ್ಲ ಎಂದು ಹೇಳಿದರು.












Click it and Unblock the Notifications