ವಸತಿ ಯೋಜನೆಗಳಲ್ಲಿ ಶೇ15 ಮೀಸಲಾತಿ: ಸಚಿವ ಜಮೀರ್ ಅಹಮದ್ ಖಾನ್ ಫಸ್ಟ್ ರಿಯಾಕ್ಷನ್!, ಎಚ್‌ಡಿಕೆ ಅವಧಿ ನಿರ್ಧಾರ...
ಕರ್ನಾಟಕ ಸರ್ಕಾರದ ಪ್ರಮುಖ ನಿರ್ಧಾರವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಕರ್ನಾಟಕದಲ್ಲಿನ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ. 15 ರಷ್ಟು ಮೀಸಲಾತಿ ನೀಡುವ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ರೀತಿ ಇರುವಾಗಲೇ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈ ವಿಚಾರದಲ್ಲಿ ಅವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಜಮೀರ್ ಅವರು ಈ ಸಂಬಂಧ ನೀಡಿದ ಫಸ್ಟ್ ರಿಯಾಕ್ಷನ್ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ವಸತಿ ಯೋಜನೆಯಲ್ಲಿ ಮೀಸಲಾತಿಯ ಬಗ್ಗೆ ಇದೀಗ ಸಚಿವ ಜಮೀರ್ ಅವರು ಮಾತನಾಡಿದ್ದಾರೆ. ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.15 ರಷ್ಟು ಮೀಸಲು ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ. 2019ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿತ್ತು ಎಂದು ವಸತಿ ಹಾಗೂ ಅಲ್ಪಸಂಖ್ಯಾತ ರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸಾಚಾರ್ ಸಮಿತಿ ವರದಿ ಪ್ರಕಾರ ಕೇಂದ್ರ ಸರ್ಕಾರದಲ್ಲಿ ಈಗಾಗಲೇ ವಸತಿ ಯೋಜನೆಗಳಲ್ಲಿ ಶೇ.15 ರಷ್ಟು ಮೀಸಲಾತಿ ಅಲ್ಪಸಂಖ್ಯಾತ ಸಮುದಾಯಕ್ಕೆ ಇದೆ. ಅದೇ ರೀತಿ ರಾಜ್ಯದಲ್ಲೂ ನೀಡಬೇಕು ಎಂಬ ಬೇಡಿಕೆ ಇತ್ತು. ಹೀಗಾಗಿ ಕೇಂದ್ರದ ಮಾದರಿಯನ್ನೇ ಅನುಸರಿಸಲಾಗಿದೆ ಎಂದು ತಿಳಿಸಿದ್ದಾರೆ.
2019ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ರಚಿಸಿದ್ದ ಸಂಪುಟ ಉಪ ಸಮಿತಿ ಶಿಫಾರಸ್ಸು ಮಾಡಿತ್ತು.ಇದೀಗ ಸಂಪುಟದ ಮುಂದೆ ಬಂದು ಒಪ್ಪಿಗೆ ದೊರೆತಿದೆ. ಈಗಾಗಲೇ ಇದ್ದ ಶೇ. 10 ರಷ್ಟು ಮೀಸಲಾತಿ ಪ್ರಮಾಣ ಶೇ. 15 ಕ್ಕೆ ಹೆಚ್ಚಿಸಲಾಗಿದೆ.
ಅಲ್ಪಸಂಖ್ಯಾತ ಸಮುದಾಯದಲ್ಲಿ ಹೆಚ್ಚಿನ ಬಡ ಕುಟುಂಬಗಳಿದ್ದು ವಸತಿ ರಹಿತರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಬೇಡಿಕೆ ಇತ್ತು. 2021 ರಾಷ್ಟ್ರೀಯ ಅಲ್ಪಸಂಖ್ಯಾತ ರ ಆಯೋಗವು ಸಹ ಶೇ. 15 ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ತಿಳಿಸಿತ್ತು. ಇದೆಲ್ಲ ವಾಸ್ತವ ಅಂಶ ತಿಳಿಯದೆ ಪ್ರತಿಪಕ್ಷ ಗಳು ಅನಗತ್ಯ ಟೀಕೆ ಗಳು ಮಾಡುತ್ತಿರುವುದು ಶೋಭೆ ತರುವುದಿಲ್ಲ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
ಈ ವಿಚಾರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವಾಗ ಜಮೀರ್ ಅವರು ವಿರೋಧ ಪಕ್ಷಗಳ ಕಡೆಯೇ ಬೊಟ್ಟು ಮಾಡಿದ್ದಾರೆ.












Click it and Unblock the Notifications