15 ನಗರಗಳಲ್ಲಿ ನಗರ ಸಾರಿಗೆ ಸೇವೆ ಆರಂಭ
ಬೆಂಗಳೂರು, ಅ.6: ರಾಮನಗರ, ಕೆಜಿಎಫ್, ಚಿತ್ರದುರ್ಗ, ಶಿವಮೊಗ್ಗ, ಭದ್ರಾವತಿ ಸೇರಿದಂತೆ ಸುಮಾರು 15 ನಗರಗಳಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ನಗರ ಸಾರಿಗೆ ಸೇವೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನರ್ಮ್ ಯೋಜನೆ(Jawaharlal Nehru National Urban Renewal Mission (JNNURM)) ಯಡಿ ರಾಜ್ಯದ 30 ನಗರಗಳಿಗೆ 2104 ಬಸ್ ಗಳು ಮಂಜೂರಾಗಿದ್ದು, ಇದುವರೆಗೂ ನಗರ ಸಾರಿಗೆ ಸೇವೆ ಇಲ್ಲದ 15 ನಗರ ಪ್ರದೇಶಗಳಲ್ಲಿ ಬಸ್ ಸೇವೆ ಪ್ರಾರಂಭವಾಗಲಿದೆ.
ಇದಲ್ಲದೆ ಮೈಸೂರು, ದಾವಣಗೆರೆ, ಕೋಲಾರ, ಹಾಸನ, ಮಂಗಳೂರು, ಮಂಡ್ಯ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಾರವಾರ, ಗುಲ್ಬರ್ಗ, ಬೀದರ್, ಬಿಜಾಪುರ, ಬಳ್ಳಾರಿ, ಯಾದಗಿರಿ, ಹೊಸಪೇಟೆ ಹಾಗೂ ಬೆಂಗಳೂರಿನಲ್ಲಿ ನಗರ ಸಂಚಾರ ಸಾರಿಗೆಗೆ ಹೆಚ್ಚು ಬಸ್ ಒದಗಿಸಲಾಗಿದೆ. ಬೆಂಗಳೂರಿಗೆ 810 ಹೊಸ ಬಸ್ ಹಾಗೂ ಮೈಸೂರಿಗೆ 125 ಹೊಸ ಬಸ್ ಮಂಜೂರಾಗಿದೆ. ಹುಬ್ಬಳ್ಳಿ -ಧಾರವಾಡ ವಲಯಕ್ಕೆ 250 ಹೊಸ ಬಸ್ ಸೇರ್ಪಡೆಗೊಳ್ಳಲಿದೆ.

ನರ್ಮ್ ಯೋಜನೆಯಡಿ ಮೊದಲ ಬಾರಿಗೆ ಬಸ್ ಘಟಕ ಹಾಗೂ ಕಾರ್ಯಾಗಾರ ಮತ್ತು ಮೂಲ ಸೌಲಭ್ಯಕ್ಕಾಗಿ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಪ್ರತಿ ಘಟಕಕ್ಕೆ 6 ಕೋಟಿ ರೂ. ನಿಗದಿ ಪಡಿಸಿದ್ದು, 1 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನಗರಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಹಾಗೂ ದೊಡ್ಡ ನಗರಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಅನುಮೋದನೆ ನೀಡಿದೆ.
ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗದ ಶಿರಸಿ, ಬಾಗಲಕೋಟೆ, ಚಿಕ್ಕೋಡಿ, ಹಾವೇರಿ ಹಾಗೂ ರಾಣೇಬೆನ್ನೂರಿನಲ್ಲಿ ಹೆಚ್ಚುವರಿ ಬಸ್ ಸೇವೆ ನಿರೀಕ್ಷಿಸಬಹುದಾಗಿದೆ. ಈಶಾನ್ಯ ಕೆಎಸ್ಸಾರ್ಟಿಸಿ ವಿಭಾಗದ ರಾಯಚೂರು, ಕೊಪ್ಪಳ, ಸಿಂಗಂದೂರು ಹಾಗೂ ಗಂಗಾವತಿ ಕೂಡಾ ಹೆಚ್ಚೆಚ್ಚು ಬಸ್ ಸೇವೆ ಪಡೆಯಲಿದೆ.
ಕಾಲ್ ಸೆಂಟರ್: ಬಿಎಂಟಿಸಿ ವ್ಯಾಪ್ತಿಯಲ್ಲಿ ಪ್ರಯಾಣಿಕರ ಕುಂದುಕೊರತೆಯನ್ನು ಆಲಿಸಿ ಪರಿಹಾರ ಒದಗಿಸಲು ಪೂರ್ಣ ಪ್ರಮಾಣದ ಕಾಲ್‌ಸೆಂಟರ್ ಆರಂಭಿಸಲಾಗುವುದು. 30 ಮಂದಿ ಕಾಲ್ ಸೆಂಟರ್ ನಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಕೆಂಪೇಗೌಡ ಬಸ್ ನಿಲ್ದಾಣದಲ್ಲಿ 400 ಕೋಟಿ ರೂ. ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಮಾಡುವ ಚಿಂತನೆ ಇದೆ. ಮೆಟ್ರೋ ಕಾಮಗಾರಿ ಮುಗಿಯುವ ವೇಳೆಗೆ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು ಎಂದರು.
ಡೀಸೆಲ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿಯ 16 ಘಟಕಗಳು ಹಾಗೂ ಬಿಎಂಟಿಸಿಯ 13 ಘಟಕಗಳಲ್ಲಿ ತೈಲ ಕಂಪೆನಿಯ ಪೆಟ್ರೋಲ್ ಬಂಕ್ ತೆರೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.












Click it and Unblock the Notifications