Breaking: ಕರ್ನಾಟಕದಲ್ಲಿ ಒಂದೇ ದಿನ 1465 ಮಂದಿಗೆ ಕೊರೊನಾ ವೈರಸ್!
ಬೆಂಗಳೂರು, ಆಗಸ್ಟ್ 23: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಕಾಟವು ಹೋದ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ ಅನ್ನೋ ಹಾಗಾಗಿ ಬಿಟ್ಟಿದೆ. ಕರ್ನಾಟಕದಲ್ಲಿ ಇಳಿಕೆಯಾಗಿದ್ದ ಕೋವಿಡ್-19 ಸಂಖ್ಯೆ ಮತ್ತೊಮ್ಮೆ ಒಂದೂವರೆ ಸಾವಿರನ ಸನ್ನಿಹಿತಕ್ಕೆ ಬಂದು ನಿಂತಿದೆ.
ರಾಜ್ಯದಲ್ಲಿ ಒಂದೇ ದಿನ 1465 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಇದೇ ಅವಧಿಯಲ್ಲಿ ಇಬ್ಬರು ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿ 1295 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕರ್ನಾಟಕದಲ್ಲಿ ಕಡಿಮೆ ಆಯಿತು ಎಂದುಕೊಳ್ಳುವಷ್ಟರಲ್ಲೇ ಕೊರೊನಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 10709ಕ್ಕೆ ತಲುಪಿರುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಹೇಗಿದೆ ಕೋವಿಡ್-19 ಪಾಸಿಟಿವಿಟಿ ದರ?
ಕರ್ನಾಟಕದಲ್ಲಿ ಈಗಾಗಲೇ ಕೋವಿಡ್-19 ಸೋಂಕಿತರ ಸಂಖ್ಯೆಯು 1400 ಗಡಿ ದಾಟಿದ್ದು ಆಗಿದೆ. ಅಂದರೆ ಸೋಂಕಿತರ ತಪಾಸಣೆ ವೇಳೆ ಪಾಸಿಟಿವಿಟಿ ದರದಲ್ಲಿ ಏರಿಕೆ ಆಗಿರುವುದು ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೊರೊನಾ ವೈರಸ್ ಪಾಸಿಟಿವಿಟಿ ದರವು ಶೇ.5.96ರಷ್ಟಿದೆ. ಅದೇ ಒಂದು ವಾರದಲ್ಲಿ ವರದಿ ಆಗಿರುವ ಪ್ರಕರಣಗಳ ಆಧಾರದ ಮೇಲೆ ಪಾಸಿಟಿವಿಟಿ ದರವನ್ನು ನೋಡುವುದಾದರೆ ಅದು ಶೇ.5.35ರಷ್ಟಿದೆೆ.

ಸಿಲಿಕಾನ್ ಸಿಟಿಯಲ್ಲೇ ಅತಿಹೆಚ್ಚು ಕೇಸ್
ಕರ್ನಾಟಕದಲ್ಲಿ 1465 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ಖಾತ್ರಿಯಾಗಿದ್ದರೆ, ಅದರಲ್ಲಿ 987 ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 799 ಸೋಂಕಿತರು ಗುಣಮುಖರಾಗಿದ್ದು, ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲೇ 7651 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಒಟ್ಟು 4043564 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಇದುವರೆಗೂ 3992637 ಸೋಂಕಿತರು ಗುಣಮುಖರಾಗಿದ್ದಾರೆ. ಅದೇ ರೀತಿ ಸೋಂಕಿನಿಂದ 40176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿಯಲ್ಲಿ ಗೊತ್ತಾಗಿದೆ.

ಜಿಲ್ಲಾವಾರು ಕೋವಿಡ್-19 ಸೋಂಕಿತರ ಸಂಖ್ಯೆ?
ರಾಜ್ಯದಲ್ಲಿ ಒಟ್ಟು 1465 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 10, ಬಳ್ಳಾರಿ 26, ಬೆಳಗಾವಿ 5, ಬೆಂಗಳೂರು ಗ್ರಾಮಾಂತರ 18, ಬೆಂಗಳೂರು 987, ಬೀದರ್ 1, ಚಾಮರಾಜನಗರ 13, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 25, ಚಿತ್ರದುರ್ಗ 5, ದಕ್ಷಿಣ ಕನ್ನಡ 12, ದಾವಣಗೆರೆ 12, ಧಾರವಾಡ 12, ಗದಗ 0, ಹಾಸನ 73, ಹಾವೇರಿ 2, ಕಲಬುರಗಿ 7, ಕೊಡಗು 29, ಕೋಲಾರ 1, ಕೊಪ್ಪಳ 4, ಮಂಡ್ಯ 8, ಮೈಸೂರು 99, ರಾಯಚೂರು 10, ರಾಮನಗರ 27, ಶಿವಮೊಗ್ಗ 42, ತುಮಕೂರು 15, ಉಡುಪಿ 7, ಉತ್ತರ ಕನ್ನಡ 5, ವಿಜಯಪುರ 2, ಯಾದಗಿರಿ 1 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

ದೇಶದಲ್ಲಿ ಒಂದೇ ದಿನ 8,586 ಮಂದಿಗೆ ಕೊವಿಡ್
ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 8,586 ಜನರಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 48 ಮಂದಿ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, 9,680 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 44,357,546ಕ್ಕೆ ಏರಿಕೆಯಾಗಿದೆ. ಇದರ ಹೊರತಾಗಿ, ಇದುವರೆಗೂ 43,733,624 ಸೋಂಕಿತರು ಗುಣಮುಖರಾಗಿದ್ದು, 527,416 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 96,506ಕ್ಕೆ ಏರಿಕೆಯಾಗಿದೆ ಎಂದು ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.












Click it and Unblock the Notifications