ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ವಾಡಿಕೆಗಿಂತ ಶೇ.14ರಷ್ಟು ಹೆಚ್ಚು ಮಳೆ

|
Google Oneindia Kannada News

ಬೆಂಗಳೂರು, ಆಗಸ್ಟ್ 02: ಮುಂಗಾರು ಋತು ಆರಂಭವಾದಾಗಿನಿಂದ ಈವರೆಗೆ ಕರ್ನಾಟಕದ ಎಲ್ಲಾ ಭಾಗದಲ್ಲೂ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿನ ಮೊದಲ ಎರಡು ತಿಂಗಳು ಮುಗಿದಿದ್ದು, ಈ ವೇಳೆ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ. 14ರಷ್ಟು ಅಧಿಕ ಮಳೆ ದಾಖಲಾಗಿದೆ.

ಮುಂಗಾರು ಆರಂಭದ ಜೂನ್ 1ರಿಂದ ಜುಲೈ31ವರೆಗಿನ ಎರಡು ತಿಂಗಳ ಅಂಕಿಅಂಶ ಗಮನಿಸಿದರೆ, ಕರ್ನಾಟಕದಲ್ಲಿ ಆಗಬೇಕಿದ್ದ ವಾಡಿಕೆಯ 471 ಮಿ. ಮೀ. ಮಳೆಗಿಂತಲೂ 573 ಮಿ. ಮೀ. ಅತ್ಯಧಿಕ ಮಳೆ ಬೀಳುವ ಮೂಲಕ ಕರ್ನಾಟಕದಲ್ಲಿ ಶೇ. 14 ರಷ್ಟು ಅಧಿಕ ವರ್ಷಧಾರೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ವರದಿ ತಿಳಿಸಿದೆ.

ಮುಂಗಾರು ಆರಂಭದಲ್ಲಿ ಎರಡು ದಿನ ಅಬ್ಬರಿಸಿದ್ದ ವರುಣ ನಂತರ ರಾಜ್ಯಾದ್ಯಂತ ದರ್ಬಲಗೊಂಡಿದ್ದ. ಈ ವರ್ಷ ಮಳೆಯ ಅಷ್ಟಾಗಿ ಬಾರದು ಎಂದುಕೊಳ್ಳುವಷ್ಟರಲ್ಲಿ ಜೂನ್ ಎರಡನೇ ವಾರದ ನಂತರ ಮುಂಗಾರು ಅಬ್ಬರಿಸಲು ಶುರುವಾಗಿ ಬಹುತೇಕ ಜುಲೈ ಮೊದಲ ವಾರದವರೆಗೂ ಮುಂದುವರಿಯಿತು.

ಈ ವೇಳೆ ನಿರಂತರವಾಗಿ ಸುರಿದ ಮಳೆಗೆ ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಪಶ್ಚಿಮ ಜಿಲ್ಲೆಗಳ ಜನರು ಅಕ್ಷರಶಃ ತತ್ತರಿಸಿದ್ದರು. ರಾಜ್ಯದಲ್ಲಿ ಇದೀಗ ಮತ್ತೆ ಅದೇ ರೀತಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ.

ಕರಾವಳಿಗೆ ವಾಡಿಕೆಯಷ್ಟು ಮಳೆ

ಕರಾವಳಿಗೆ ವಾಡಿಕೆಯಷ್ಟು ಮಳೆ

ಮುಂಗಾರು ಋತುವಿನಲ್ಲಿ ಕರಾವಳಿಗೆ ವಾಡಿಕೆಯಷ್ಟು ಮಾತ್ರ ಮಳೆ ಆಗಿದೆ. ಜೂನ್‌ 1ರಿಂದ ಜುಲೈ 31ರ ಈವರೆಗೆ ಮೂರು ಜಿಲ್ಲೆ ಒಳಗೊಂಡ ಕರಾವಳಿಯಲ್ಲಿ 1,973 ಮಿ. ಮೀ. ವಾಡಿಕೆ ಮಳೆಗೆ ಹೋಲಿಸಿದರೆ ಇಲ್ಲಿ 1975 ಮಿ.ಮೀ.ನಷ್ಟೇ ಅಂದರೆ ವಾಡಿಕೆಯಷ್ಟೆ ಮಳೆ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಹವಾಮಾನ ವೈಪರಿತ್ಯಗಳು ಕಂಡು ಬಂದರೆ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ವಾಡಿಕೆಗಿಂತ ಅಧಿಕ ಮಳೆ ದಾಖಲಾಗಬಹುದು ಎಂದು ಅಂದಾಜಿಸಲಾಗಿದೆ.

ದಕ್ಷಿಣ ಒಳನಾಡಿಗೆ ಶೇ.80ರಷ್ಟು ಅಧಿಕ ಮಳೆ

ದಕ್ಷಿಣ ಒಳನಾಡಿಗೆ ಶೇ.80ರಷ್ಟು ಅಧಿಕ ಮಳೆ

ಮಲೆನಾಡಿನ ಜಿಲ್ಲೆಗಳನ್ನು ಸೇರಿ ಒಟ್ಟು 16 ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನಲ್ಲಿ ಈವರೆಗೆ ಅತ್ಯಧಿಕ ಮಳೆ ದಾಖಲಾಗಿದ್ದು, ಇಲ್ಲಿ ವಾಡಿಕೆಗಿಂತ (ಶೇ.80) ಅಧಿಕ ಮಳೆ ಬಿದ್ದಿದೆ. ಈ ಭಾಗದಲ್ಲಿ ಕಳೆದ ಎರಡು ತಿಂಗಳ ವಾಡಿಕೆ ಮಳೆ 145 ಮಿ.ಮೀ. ಆಗಬೇಕಿತ್ತು. ಆದರೆ ಒಟ್ಟು 260ಮಿ.ಮೀ. ಮಳೆ ಬಿದ್ದಿದ್ದು, ಇದು ವಾಡಿಕೆಗಿಂತ ಶೇ.80ರಷ್ಟು ಹೆಚ್ಚು ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಈ ದಕ್ಷಿಣ ಒಳನಾಡಿಗೂ ಉತ್ತಮ ಮಳೆ ನಿರೀಕ್ಷೆ ಇದೆ.

ಹನ್ನೊಂದು ಜಿಲ್ಲೆಗಳನ್ನು ಒಳಗೊಂಡ ಉತ್ತರ ಒಳನಾಡಿನ ಭಾಗದಲ್ಲಿ ಸಹ ಮುಂಗಾರು ಚುರುಕುಗೊಂಡಿತ್ತು. ಇದರಿಂದಾಗಿ ಈ ಭಾಗದಲ್ಲಿ ವಾಡಿಕೆಗಿಂತ (ಶೇ.26) ಮಳೆ ಹೆಚ್ಚಾಗಿ ಸುರಿದಿದೆ. ವಿವರವಾಗಿ ನೋಡುವುದಾದರೆ ಈ ಭಾಗದಲ್ಲಿ ವಾಡಿಕೆ 219 ಮಿ.ಮೀ. ಪ್ರಮಾಣದ ಮಳೆ ಆಗುವ ಬದಲಾಗಿ 277 ಮಿ.ಮೀ. ಬಿದ್ದಿದೆ. ಇದು ವಾಡಿಕೆಗಿಂತ ಶೇ.26ರಷ್ಟು ಅಧಿಕ ಮಳೆ ಎಂದು ಕೆಎಸ್‌ಎನ್‌ಡಿಎಂಸಿ ತಿಳಿಸಿದೆ.

ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲು

ಮಲೆನಾಡಿನ ಜಿಲ್ಲೆಗಳಲ್ಲಿ ಉತ್ತಮ ಮಳೆ ದಾಖಲು

ಚಿಕ್ಕಮಗಳೂರು, ಕೊಡಗು, ಮಡಿಕೇರಿ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಒಳಗೊಂಡ ಮಲೆನಾಡಿನ ಭಾಗವನ್ನು ಮಾತ್ರ ಗಮನಿಸುವುದಾದರೆ ಇಲ್ಲಿ ವಾಡಿಕೆಗಿಂತ ಕೇವಲ ಶೇ.4ರಷ್ಟು ಮಾತ್ರವೇ ಅಧಿಕ ಮಳೆ ಆಗಿದೆ. ಇಲ್ಲಿ 954 ಮಿ.ಮೀ. ವಾಡಿಕೆ ಮಳೆಗೆ ಬದಲಾಗಿ ಒಟ್ಟು 995 ಮಿ.ಮೀ. ಮಳೆ ದಾಖಲಾಗಿದೆ. ಈ ಭಾಗದಲ್ಲೂ ಸಹ ಜೂನ್ ಅಂತ್ಯದಿಂದ ಜುಲೈ ಮೊದಲವಾರದವರೆಗೆ ಭಾರಿ ಮಳೆ ಬಿದ್ದ ಪರಿಣಾಮ ನಿರೀಕ್ಷಿತ ಮಳೆ ದಾಖಲಾಗಿದೆ ಎನ್ನಬಹುದು.

ರಾಜ್ಯಕ್ಕೆ ಜುಲೈ ತಿಂಗಳಲ್ಲಿ ಶೇ.40ಹೆಚ್ಚು ಮಳೆ

ರಾಜ್ಯಕ್ಕೆ ಜುಲೈ ತಿಂಗಳಲ್ಲಿ ಶೇ.40ಹೆಚ್ಚು ಮಳೆ

ಇನ್ನು ಜುಲೈ ಒಂದು ತಿಂಗಳಲ್ಲಿ ರಾಜ್ಯಕ್ಕೆ ಉತ್ತಮ ಮಳೆ ದಾಖಲಾಗಿದೆ. ಜುಲೈ ತಿಂಗಳ ವಾಡಿಕೆ ಮಳೆಯಾದ 271 ಮಿ.ಮೀ. ಮಳೆಗಿಂತ ಅಧಿಕ ಅಂದರೆ 381 ಮಿ.ಮೀ. ವರ್ಷಧಾರೆ ದಾಖಲಾಗಿದೆ. ಇದರಿಂದ ಕಳೆದ ತಿಂಗಳಲ್ಲಿ ಒಟ್ಟು ಶೇ.40ರಷ್ಟು ಅಧಿಕ ಮಳೆ ಬಿದ್ದಂತಾಗಿದೆ. ಯಾವ ಭಾಗದ ಯಾವ ಜಿಲ್ಲೆಗಳಲ್ಲೂ ಮಳೆ ಕೊರತೆ ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.

ಇದರಲ್ಲಿ ಉತ್ತರ ಒಳನಾಡಿನಲ್ಲಿ ವಾಡಿಕೆ (79ಮಿ.ಮೀ.)ಗಿಂತ ಶೇ.77ರಷ್ಟು ಅಧಿಕ ಮಳೆ ಅಂದರೆ ಒಟ್ಟು 140ಮಿ.ಮೀ. ಮಳೆ ಸುರಿದಿದೆ. ದಕ್ಷಿಣ ಒಳನಾಡಿನಲ್ಲಿ ವಾಡಿಕೆ (116ಮಿ.ಮೀ.)ಗಿಂತಲೂ ಅಧಿಕ 187ಮಿ.ಮೀ. ಮಳೆ ದಾಖಲಾಗಿದ್ದು, ಇದರಿಂದ ಈ ಭಾಗದಲ್ಲಿ ಶೇ.61ರಷ್ಟು ಹೆಚ್ಚು ಮಳೆ ಬಂದಿದೆ. ಇನ್ನು ಕರಾವಳಿಯಲ್ಲಿ ವಾಡಿಕೆ ಮಳೆ (1,142ಮಿ.ಮೀ.)ಗಿಂತಲೂ 1,442ಮಿ.ಮೀ. ಮಳೆ ದಾಖಲಾಗುವ ಮೂಲಕ ಇಲ್ಲಿ ಶೇ.26ರಷ್ಟು ಹೆಚ್ಚು ಮಳೆಯಾಗಿದೆ. ಅದೇ ರೀತಿ ಮಲೆನಾಡಿನಲ್ಲಿ ನಿರೀಕ್ಷಿತ ಮಳೆ (ವಾಡಿಕೆ 591ಮಿ.ಮೀ.) ಗಿಂತ 805 ಮಿ.ಮೀ. ಮಳೆ ಬಿದ್ದಿದ್ದು, ಇದರಿಂದ ಈ ಪ್ರದೇಶದಲ್ಲಿ ಶೇ.36 ರಷ್ಟು ಹೆಚ್ಚು ಮಳೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್‌ಡಿಎಂಸಿ) ಯ ಮಾಹಿತಿ ನೀಡಿದೆ.

English summary
Karnataka received 14 per cent more rain than normal from June 1 to July 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X