Prashanth Madal : 14 ದಿನ ಪ್ರಶಾಂತ್ ಮಾಡಾಳ್ ನ್ಯಾಯಾಂಗ ಬಂಧನಕ್ಕೆ
40 ಲಕ್ಷ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದ ಪ್ರಶಾಂತ್ ಮಾಡಾಳ್‌ರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಲೋಕಾಯುಕ್ತ ಕೋರ್ಟ್ ಆದೇಶಿಸಿದೆ.
ಬೆಂಗಳೂರು, ಮಾರ್ಚ್ 03; ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರಿ ಕ್ರೆಸೆಂಟ್ ರಸ್ತೆಯ ಖಾಸಗಿ ಕಚೇರಿಯಲ್ಲಿ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳ್ ಬಂಧಿಸಿದ್ದರು. ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ಸಹ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ದಾಖಲೆ ಇಲ್ಲದ 6 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದರು.
ಗುರುವಾರ ಲೋಕಾಯುಕ್ತರು ಪೊಲೀಸರು ಬಂಧಿಸಿದ್ದ ಪ್ರಶಾಂತ್ ಮಾಡಾಳ್ ಮತ್ತು ಇತರ ನಾಲ್ವರನ್ನು ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಎಲ್ಲಾ ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಹಿನ್ನಲೆಯಲ್ಲಿ ಎಲ್ಲರೂ ಜೈಲಿಗೆ ತೆರಳಬೇಕಾಗಿದೆ.

ಪ್ರಶಾಂತ್ ಮಾಡಾಳ್ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಟೆಂಡರ್‌ಗೆ 80 ಲಕ್ಷ ರೂ. ಲಂಚ ಕೇಳಿದ್ದರು ಎಂಬುದು ಆರೋಪ. ಗುರುವಾರ 40 ಲಕ್ಷ ರೂ. ಹಣ ನೀಡಲು ನಿಕಲೋಸ್, ಗಂಗಾಧರ್ ಬಂದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, 40 ಲಕ್ಷ ವಶಕ್ಕೆ ಪಡೆದಿದ್ದರು. ಬಳಿಕ ಪ್ರಶಾಂತ್ ಮಾಡಾಳ್ ನಿವಾಸದ ಮೇಲೆ ದಾಳಿ ಮಾಡಿದಾಗ ಬಾಂಡ್, ದಾಖಲೆ ಇಲ್ಲದ 6 ಕೋಟಿ ಹಣ, ಚಿನ್ನಾಭರಣ ಪತ್ತೆಯಾಗಿತ್ತು.
ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷರು. ಇವರ ಎರಡನೇ ಪುತ್ರ ಪ್ರಶಾಂತ್ ಮಾಡಾಳ್ ಕೆಎಸ್‌ಡಿಎಲ್ ರಾಸಾಯನಿಕ ಪೂರೈಕೆ ಮಾಡುವ ಟೆಂಡರ್ ಕಾರ್ಯಾದೇಶ ನೀಡಲು ಗುತ್ತಿಗೆದಾರನಿಂದ 80 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಗುರುವಾರ ಸಂಜೆ 40 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಶಾಸಕರ ವಿಚಾರಣೆಯನ್ನು ಸಹ ನಡೆಸುವ ಸಾಧ್ಯತೆ ಇದೆ.
ಪ್ರಶಾಂತ್ ಮಾಡಾಳ್ ರಾಜ್ಯ ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕರು, ಬೆಂಗಳೂರು ಜಲಮಂಡಳಿ ಮುಖ್ಯ ಲೆಕ್ಕಾಧಿಕಾರಿಯೂ ಆಗಿದ್ದಾರೆ. ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‌ಡಿಎಲ್ ಅಧ್ಯಕ್ಷರು. ಅಧಿಕಾರ ದುರುಪಯೋಗ ಮಾಡಿಕೊಂಡು ಪ್ರಶಾಂತ್ ಕೆಎಸ್‌ಡಿಎಲ್‌ನಲ್ಲಿಯೂ ಹಸ್ತಕ್ಷೇಪ ಮಾಡಿದ್ದಾರೆ ಎಂಬುದು ಆರೋಪ. ಪುತ್ರ ಲೋಕಾಯುಕ್ತರಿಗೆ ಸಿಕ್ಕಿ ಬೀಳುತ್ತಿದ್ದಂತೆಯೇ ವಿಕಾಸಸೌಧದಲ್ಲಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕಚೇರಿಗೆ ಬೀಗ ಹಾಕಲಾಗಿದೆ. ಶಾಸಕರು ಅಜ್ಞಾತ ಸ್ಥಳಕ್ಕೆ ತೆರಳಿದ್ದು, ಚನ್ನಗಿರಿಯ ನಿವಾಸದಲ್ಲಿ ಸಹ ಇಲ್ಲ.












Click it and Unblock the Notifications