ಬೀದರ್: ₹100 ಕೋಟಿಯಲ್ಲಿ ಪ್ರತಿ ಕ್ಷೇತ್ರ ಅಭಿವೃದ್ಧಿ: ಸಿಎಂ
ಕಲ್ಯಾಣ ಕರ್ನಾಟಕದ ಜಿಲ್ಲೆಯಾದ ಬೀದರ್ ನಲ್ಲಿರುವ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕನಿಷ್ಠ 100 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೀದರ್, ಮಾರ್ಚ್ 03: ಕಲ್ಯಾಣ ಕರ್ನಾಟಕದ ಜಿಲ್ಲೆಯಾದ ಬೀದರ್ ನಲ್ಲಿರುವ ಪ್ರತಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಕನಿಷ್ಠ 100 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುವುದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ವಿಜಯ ಸಂಕಲ್ಪ ಯಾತ್ರೆಯ ಚಾಲನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ವೇಳೆ ವೇದಿಕೆಯಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಹಾಗೂ ರಾಜ್ಯದ ಇತರ ಮುಖಂಡರು ಉಪಸ್ಥಿತರಿದ್ದರು.

ಬೀದರ್‌ನಲ್ಲಿ ಅನುಭವ ಮಂಟಪದ ನಿರ್ಮಾಣ ಸಲುವಾಗಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 500 ಕೋಟಿ ರೂಪಾಯಿ ಹಣ ಮಂಜೂರು ಮಾಡಿದ್ದರು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಅನುದಾನ ಸಹ 3000 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಈ ವರ್ಷ 5000 ಕೋಟಿ. ರೂ.ಗಳನ್ನು ಮೀಸಲಿಡಲಾಗಿದೆ. 650 ಕೋಟಿ ರೂಪಾಯಿ ವೆಚ್ಚದಲ್ಲಿ ಔರಾದ್ ಕೆರೆ ತುಂಬಿಸುವ ಯೋಜನೆಗೆ, 750 ಕೋಟಿ ರೂ ವೆಚ್ಚದ ಮೆಹಕರ್ ಏತ ನೀರಾವರಿ ಯೋಜನೆಗೆ ಅನುಮೋದನೆ, ಬೀದರ್ ಸೀಮೆಂಟ್ ಸಂಸ್ಥೆ ಸ್ಥಾಪಿಸಲಾಗುತ್ತಿದೆ. ಬೀದರ್ ಜಿಲ್ಲೆಗೆ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದೆ ಎಂದು ಅವರು ಜಿಲ್ಲೆ ವ್ಯಾಪ್ತಿಯ ಅಭಿವೃದ್ಧಿ ಬಗ್ಗೆ ವಿವರಿಸಿದರು.
ತೊಗರಿ ರೈತರಿಗೆ ₹250 ಕೋಟಿ ಪರಿಹಾರ
ಬೀದರ್ ಜಿಲ್ಲೆಯಲ್ಲಿ ತೊಗರಿ ಬೆಳೆ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ. ತೊಗರಿ ಬೆಳೆ ರೋಗದ ಹಾನಿಗೆ ಹೆಕ್ಟೇರ್ ಗೆ 10 ಸಾವಿರ ರಂತೆ 250 ಕೋಟಿ ರೂ.ಗಳನ್ನು ತೊಗರಿ ಬೆಳೆಯುವ ರೈತರಿಗೆ ವಿತರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಅಭಿವೃದ್ಧಿಯ ಆಧಾರದ ಮೇಲೆ ಮತ ಕೇಳುವ ನೈತಿಕತೆ ಇರುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇಧನಾಶೀಲ ಬಿಜೆಪಿ ಸರ್ಕಾರಕ್ಕೆ ನಮ್ಮದು ಎಂದು ಹೇಳಿದರು.

ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವಂತಹ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದುಡಿಯುವ ಮಹಿಳೆಯರಿಗೆ ಪ್ರತಿ ತಿಂಗಳು 1000 ರೂಪಾಯಿ ನೀಡುವ ಗೃಹಿಣಿ ಶಕ್ತಿ ಯೋಜನೆ ಈ ಆಯವ್ಯಯದಲ್ಲಿದೆ. ನವ ಕರ್ನಾಟಕವನ್ನು ನವಭಾರತದ ನಿರ್ಮಾಣಕ್ಕಾಗಿ ಮಾಡಬೇಕಿದೆ. ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಕಮಲ ರಾಜ್ಯದೆಲ್ಲೆಡೆ ಅರಳಿಸುವುದು ನಮ್ಮ ಸಂಕಲ್ಪ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಬಿ. ಶ್ರೀರಾಮುಲು, ಪ್ರಭು ಚೌಹ್ವಾಣ್ ಹಾಗೂ ಮತ್ತಿತರರು ಹಾಜರಿದ್ದರು.












Click it and Unblock the Notifications