"ನತದೃಷ್ಟ ಕನ್ನಡಿಗರು ಮಲಯಾಳಿಗಳಷ್ಟು ಅದೃಷ್ಟವಂತರಲ್ಲ ಬಿಡಿ"
ಕರ್ನಾಟಕ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇರಳದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಅವರನ್ನು ಮೆಚ್ಚಿಸುವ ಉದ್ದೇಶದಿಂದ ಮಾಡಿರುವ ಕೆಲಸಕ್ಕೆ ಕನ್ನಡಿಗರಿಂದ ಹಾಗೂ ವಿರೋಧ ಪಕ್ಷ ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ನತದೃಷ್ಟ ಕನ್ನಡಿಗರು ಮಲಯಾಳಿಗಷ್ಟು ಅದೃಷ್ಟವಂತರಲ್ಲ ಬಿಡಿ ಎನ್ನುವ ಮಾತು ಕೇಳಿ ಬರುತ್ತಿದೆ. ಇಷ್ಟಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವ ನಿರ್ಧಾರ ತೀವ್ರ ವಿರೋಧಕ್ಕೆ ಕಾರಣವಾಗಿದೆ ಎನ್ನುವ ವಿವರ ಇಲ್ಲಿದೆ.
ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿರುವ ಕೇರಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು. ಕೇರಳದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಗುತ್ತಿತ್ತು. ನತದೃಷ್ಟ ಕನ್ನಡಿಗರು ಮಲಯಾಳಿಗಷ್ಟು ಅದೃಷ್ಟವಂತರಲ್ಲ ಬಿಡಿ ಎಂದು ಹೇಳಿದ್ದಾರೆ.

ಕೇರಳದ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಗುವುದಿತ್ತು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ರಾಜ್ಯ ಸರ್ಕಾರದ 2024-25 ನೇ ಸಾಲಿನ ಪೂರಕ ಅಂದಾಜನ್ನು ಬುಧವಾರ ಕರ್ನಾಟಕ ವಿಧಾನಸಭೆಯಲ್ಲಿ ಮಂಡಿಸಿದೆ. ಕೇರಳದ ವಯನಾಡು ಜಿಲ್ಲೆಯಲ್ಲಿ ಕಳೆದ ವರ್ಷ ಭಾರೀ ಮಳೆಯಿಂದ ಸಂಭವಿಸಿದ್ದ ಭೂಕುಸಿತದ ಸಂತ್ರಸ್ತರಿಗೆ ಮನೆಗಳನ್ನು ಕಟ್ಟಿಕೊಡುವ ಉದ್ದೇಶದಿಂದ ಎಎಸ್ಡಿಆರ್ಎಫ್ ಮೂಲಕ 10 ಕೋಟಿ ರೂಪಾಯಿ ಹಣಕಾಸು ನೆರವು ನೀಡುವ ಬಗ್ಗೆ ಇದರಲ್ಲಿ ಉಲ್ಲೇಖಿಸಲಾಗಿತ್ತು. ಈ ವಿಷಯ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಅನುದಾನವನ್ನು ಬಿಜೆಪಿ ಪ್ರಶ್ನೆ ಮಾಡಿದೆ.
ಇನ್ನು ಈ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ದೆಹಲಿಯಲ್ಲಿ "ನನ್ನ ತೆರಿಗೆ, ನನ್ನ ಹಕ್ಕು" ಎಂದು ಘೋಷಣೆ ಕೂಗುತ್ತಾ ಪ್ರಚಾರ ಮಾಡಿದ್ದು ನೀವೇ ಅಲ್ಲವೇ? ಆದರೆ ಇಂದು, ನೀವು ಪ್ರಿಯಾಂಕಾ ಗಾಂಧಿ ಅವರ ಕ್ಷೇತ್ರ ಎಂಬ ಕಾರಣಕ್ಕಾಗಿ ಕನ್ನಡಿಗರ ತೆರಿಗೆ ಹಣವನ್ನು ₹10 ಕೋಟಿ ಕೇರಳದ ವಯನಾಡಿಗೆ ಕೊಟ್ಟಿದ್ದೀರಿ.
ನಮ್ಮ ರೈತರು ಬೆಳೆ ನಷ್ಟದಿಂದ ಬಳಲುತ್ತಿರುವಾಗ, ಶಾಸಕರು ಶಂಕುಸ್ಥಾಪನೆ ಮಾಡಲು ಮೂಲಭೂತ ಅನುದಾನವನ್ನು ಸಿಗದಿದ್ದಾಗ, ಶಾಲೆಗಳು ಮತ್ತು ಕಾಲೇಜುಗಳಿಗೆ ಮೂಲಸೌಕರ್ಯಗಳಿಲ್ಲದಿದ್ದಾಗ - ಹಣವಿಲ್ಲ ಎಂದು ನೀವು ಹೇಳುತ್ತೀರಿ. ಆದರೆ ನಿಮ್ಮ ಹೈಕಮಾಂಡ್ ಅನ್ನು ಮೆಚ್ಚಿಸಲು, ನೀವು ಕರ್ನಾಟಕದ ಹೊರಗೆ ಕೋಟಿಗಟ್ಟಲೆ ಉದಾರವಾಗಿ ಉಡುಗೊರೆ ನೀಡುತ್ತೀರಿ ಎಂದು ಟೀಕಿಸಿದ್ದಾರೆ.
ಮುಂದುವರಿದು ಇದು ಕರುಣೆಯಲ್ಲ, ಇದು ಜೀತಪದ್ಧತಿ. ಕೇರಳದಲ್ಲಿ ಆನೆ ದಾಳಿಗೆ ಒಳಗಾದವರಿಗೆ ₹15 ಲಕ್ಷ ಘೋಷಿಸಿ ಕರ್ನಾಟಕದ ಬಡವರಿಗೆ ಯಾವುದೇ ಹಣ ಸಿಗದ ಮುಖ್ಯಮಂತ್ರಿ ಈಗ ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ನಮ್ಮ ವಿಪತ್ತು ನಿಧಿಯನ್ನು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ನಿಮ್ಮ ಹೈಕಮಾಂಡ್ ಅನ್ನು ಮೆಚ್ಚಿಸಲು ನಮ್ಮ ವಿಪತ್ತು ನಿಧಿಯನ್ನು ಹಾಳು ಮಾಡುವುದನ್ನು ನಿಲ್ಲಿಸಿ. ಕರ್ನಾಟಕದ ಹಣ ಕನ್ನಡಿಗರಿಗೆ ಸೇರಿದ್ದು, ಗಾಂಧಿ ಕುಟುಂಬದ ರಾಜಕೀಯ ಸಂಪತ್ತಿಗೆ ಅಲ್ಲ ಎಂದು ತೀವ್ರವಾಗಿ ಖಂಡಿಸಿದ್ದಾರೆ.












Click it and Unblock the Notifications