ಮತದಾನದ ಅವಧಿ 1 ಗಂಟೆ ಹೆಚ್ಚಳ: ಸಂಜೀವ್ ಕುಮಾರ್
ಬೆಂಗಳೂರು, ಏಪ್ರಿಲ್ 19: ಮೇ 12 ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನದ ಅವಧಿಯನ್ನು 1 ಗಂಟೆಯಷ್ಟು ಹೆಚ್ಚಿಸಲಾಗಿದೆ. ಬೆಳಿಗ್ಗೆ 7-00 ಗಂಟೆಯಿಂದ ಸಂಜೆ 6-00 ಗಂಟೆಯವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಂದು ವಿಕಾಸ ಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಾರ್ವಜನಿಕರಿಂದ ಬೇಸಿಗೆ ಇರುವ ಕಾರಣ ಮತದಾನ ದಿನದ ಸಮಯವನ್ನು ಹೆಚ್ಚಿಸುವಂತೆ ಅಹವಾಲುಗಳು ಬಂದಿದ್ದವು. ಇದಕ್ಕೆ ಸ್ಪಂದಿಸಿರುವ ಚುನಾವಣಾ ಆಯೋಗವು ಈ ಹಿಂದೆ ನಿಗದಿಪಡಿಸಲಾಗಿದ್ದ ಸಂಜೆ 5-00 ಗಂಟೆವರೆಗಿನ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಿ ಸಂಜೆ 6-00 ರವರೆಗೆ ನಿಗದಿಪಡಿಸಿ ಆದೇಶ ಹೊರಡಿಸಿದೆ," ಎಂದರು.
ಇದಲ್ಲದೆ, ಏಪ್ರಿಲ್ 17 ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದ್ದು, ಏಪ್ರಿಲ್ 18 ಸಾರ್ವತ್ರಿಕ ರಜೆ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿರಲಿಲ್ಲ. ಇಂದಿನವರೆಗೆ ಒಟ್ಟು 155 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಅವರು ಮಾಹಿತಿ ನೀಡಿದರು.

"ರಾಜ್ಯದಲ್ಲಿ ಶೇಕಡವಾರು ಮತದಾನವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಚುನಾವಣಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಅವರು ನೀಡಿರುವ ಸಂದೇಶದ ಕಿರುಚಿತ್ರಗಳನ್ನು ನಿರ್ಮಾಣ ಮಾಡಲಾಗಿದೆ," ಎಂದು ಅವರು ತಿಳಿಸಿದರು.
ಕನ್ನಡ ಚಲನಚಿತ್ರ ಕ್ಷೇತ್ರದ ಪುನೀತ್ ರಾಜ್‍ಕುಮಾರ್ ಹಾಗೂ ನಟಿ ಪ್ರಣೀತಾ ಮತ್ತು ಜಾನಪದ ಸಾಹಿತ್ಯ ಕ್ಷೇತ್ರದ ದಿಗ್ಗಜ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ: ಚಂದ್ರಶೇಖರ ಕಂಬಾರ ಅವರು ಮತದಾನದ ಕುರಿತು ನೀಡಿರುವ ಸಂದೇಶಗಳ ಕಿರುಚಿತ್ರಗಳನ್ನು ಇದೇ ಸಂದರ್ಭದಲ್ಲಿ ಸಂಜೀವ್ ಕುಮಾರ್ ಬಿಡುಗಡೆ ಮಾಡಿದರು.
ಡಾ: ಚಂದ್ರಶೇಖರ ಕಂಬಾರ ಅವರು ಮಾತನಾಡಿ, "ನಾನು ನಮ್ಮ ಕರ್ತವ್ಯದ ಬಗ್ಗೆ ಹೇಳಿದ್ದೇನೆ. ಹಿರಿಯ ಬರಹಗಾರರೊಬ್ಬರು ಹೇಳಿದಂತೆ ಇಂದಿನ ಕಾಲಮಾನದಲ್ಲಿ ರಾಜಕಾರಣವಿಲ್ಲದೆ ದೈವಜ್ಞನಾಗಲು ಸಾಧ್ಯವಿಲ್ಲ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ," ಎಂದರು.
ಮತದಾನ ನಮ್ಮ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಯಾಗಿದ್ದು, ಅದು ಶ್ರೀ ಸಾಮಾನ್ಯನಿಗೆ ಸೌಭಾಗ್ಯವಿದ್ದಂತೆ. ಅದಕ್ಕಾಗಿ ಪ್ರತಿಯೊಬ್ಬರು ತಪ್ಪದೆ ಮತದಾನ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಚುನಾವಣಾ ರಾಯಭಾರಿಯಾಗಿ ಒಪ್ಪಿಕೊಂಡಿರುವ ಅವರಿಗೆ ಸನ್ಮಾನ ಮಾಡಲಾಯಿತು.
ಅಪರ ಮುಖ್ಯ ಚುನಾವಣಾಧಿಕಾರಿ ಸೂರ್ಯಸೇನ್, ಅಪರ ಮುಖ್ಯ ಕಾರ್ಯದರ್ಶಿ ಡಾ: ಬಿ.ಆರ್. ಮಮತ ಸೇರಿದಂತೆ ಚುನಾವಣಾ ಆಯೋಗದ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications