ಕಲಬುರಗಿ ಜನರಿಗೆ ಸಿಹಿಸುದ್ದಿ ಕೊಟ್ಟ ಜಯದೇವ ಹೃದ್ರೋಗ ಸಂಸ್ಥೆ
ಕಲಬುರಗಿ, ಜೂನ್ 18; "ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖಾ ಆಸ್ಪತ್ರೆಯನ್ನು 2024ರ ಜನವರಿಯಲ್ಲಿ ಲೋಕಾರ್ಪಣೆಗೊಳಿಸಲಾಗುವುದು" ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.
ಸಚಿವರು ಆಸ್ಪತ್ರೆಯ ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ, ಕಲಬುರಗಿ ಆಸ್ಪತ್ರೆಯ ಸಮನ್ವಯಾಧಿಕಾರಿ ಡಾ. ಬಾಬುರಾವ ಹುಡಗಿಕರ್ ಜೊತೆ ಸಚಿವರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿ, "ಬರೀ ಕಟ್ಟಡ ಉದ್ಘಾಟನೆ ಅಷ್ಟೆ ಅಲ್ಲ. ಸುಮಾರು 56 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳೊಂದಿಗೆ ಆಸ್ಪತ್ರೆ ತನ್ನ ಸೇವೆ ಆರಂಭಿಸಲಿದೆ" ಎಂದರು. ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
6.8 ಎಕರೆ ಪ್ರದೇಶದಲ್ಲಿ ನಿರ್ಮಾಣ; ಕಲಬುರಗಿ ನಗರದ ಹೃದಯ ಭಾಗದಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖಾ ಆಸ್ಪತ್ರೆಯನ್ನು ಸುಮಾರು 6.8 ಎಕರೆ ಪ್ರದೇಶದಲ್ಲಿ 183 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ನೂತನ ಆಸ್ಪತ್ರೆಗೆ ಅಗತ್ಯಕ್ಕೆ ತಕ್ಕಂತೆ ರೋಗಿಗಳಿಗೆ ಸೇವೆ ನೀಡಲು ಸಿಬ್ಬಂದಿಗಳ ನೇಮಕಾತಿಗೂ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಹಣಕಾಸು ಇಲಾಖೆಯೂ ಸಹಮತಿ ನೀಡಿದೆ. ಲೋಕಾರ್ಪಣೆ ಮುನ್ನವೇ ನೇಮಕಾತಿ ಪ್ರಕ್ರಿಯೆ ಸಹ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
2016ರಲ್ಲಿ ಕಲಬುರಗಿಯಲ್ಲಿ ಜಯದೇವ ಆಸ್ಪತ್ರೆ ಆರಂಭಕ್ಕೂ ಮುನ್ನ ಹೃದ್ರೋಗಿಗಳು ಚಿಕಿತ್ಸೆಗೆ ನೆರೆಯ ಸೊಲ್ಹಾಪುರ, ಹೈದರಾಬಾದ್ ಅಥವಾ ಬೆಂಗಳೂರಿಗೆ ಹೋಗಬೇಕಿತ್ತು. ಜಯದೇವ ಆಸ್ಪತ್ರೆ ಸ್ಥಾಪನೆ ಪರಿಣಾಮ ಇದೀಗ ಇಲ್ಲಿಯೇ ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯದೇವ ಸಂಸ್ಥೆ ಕಲ್ಯಾಣ ಕರ್ನಾಟಕ ಭಾಗದ ಹೃದ್ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ಹೇಳಿದರು.
ಅಕ್ಕ ಸೊಲ್ಹಾಪುರದ ರೋಗಿಗಳು ಇಲ್ಲಿನ ಜಯದೇವ ಸಂಸ್ಥೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಈ ಸಂಸ್ಥೆಯ ಸೇವಾ ಮನೋಭಾವನೆ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ತೋರಿಸುತ್ತದೆ. ಜಯದೇವ ಎಂಬ ಪ್ರತಿಷ್ಠಿತ ಸಂಸ್ಥೆ ಬರೀ ದೇಶದಲ್ಲಿಯೇ ಅಷ್ಟೆ ಅಲ್ಲ ವಿದೇಶದಲ್ಲಿಯೂ ತನ್ನ ಸೇವೆಯಿಂದ ಮನೆ ಮಾತಾಗಿದೆ ಎಂದು ಸಚಿವರು ಬಣ್ಣಿಸಿದರು.
ಟ್ರಾಮಾ ಸೆಂಟರ್ ಆರಂಭ; ಸಚಿವ ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿ, "ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದೆ ಕಲಬುರಗಿಯಲ್ಲಿ ನಿರ್ಮಿಸಲಾದ ಟ್ರಾಮಾ ಸೆಂಟರ್ ಮುಂದಿನ 2-3 ತಿಂಗಳಲ್ಲಿ ರೋಗಿಗಳಿಗೆ ಸೇವೆ ನೀಡಲು ಕಾರ್ಯರಂಭಗೊಳಿಸಲು ಚರ್ಚೆ ನಡೆದಿದ್ದು, ಇದಕ್ಕಾಗಿ ಬೆಂಗಳೂರಿನ ಟ್ರಾಮಾ ಸೆಂಟರ್ ಮುಖ್ಯಸ್ಥ ಡಾ. ಬಾಲಾಜಿ ಪೈ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಆಸ್ಪತ್ರೆ ಆರಂಭಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ" ಎಂದರು.
"ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ಸೂಪರ್ ಸ್ಪೆಷ್ಪಾಲಿಟಿ ಆಸ್ಪತ್ರೆ ಸ್ಥಾಪಿಸಲು ಕಲಬುರಗಿ, ಬೆಳಗಾವಿ ಹಾಗೂ ಮೈಸೂರಲ್ಲಿ ಆಸ್ಪತ್ರೆ ನಿರ್ಮಿಸಲು ಹಿಂದೇ ನಮ್ಮ ಸರ್ಕಾರದ ಅವಧಿಯಲ್ಲಿಯೇ ಮಂಜೂರಾತಿ ನೀಡಲಾಗಿತ್ತು. ಮುಂದಿನ 6 ತಿಂಗಳಲ್ಲಿ ಜಿಮ್ಸ್ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಕಲಬುರಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು. ತಾಯಿ ಮತ್ತು ಮಕ್ಕಳ ಆಸ್ಪತ್ರೆಗೂ ಜೀವ ತುಂಬಲಾಗುವುದು" ಎಂದು ಹೇಳಿದರು.
"ಸಂವಿಧಾನಕ್ಕೆ ತಿದ್ದುಪಡಿ ತಂದು ಕಲಬುರಗಿ ವಿಭಾಗಕ್ಕೆ 371ಜೆ ವಿಶೇಷ ಮೀಸಲಾತಿ ದೊರಕಿದೆ. ಈ ನಿಟ್ಟಿನಲ್ಲಿ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ ಜಯದೇವ ಸಂಸ್ಥೆಯ ನೂತನ ಆಸ್ಪತ್ರೆಯ ಹಾಸಿಗೆಗಳ ಸಂಖ್ಯೆಯೂ 371 ಇರಲಿದೆ. ಈ ಹಿಂದೆ 350 ಹಾಸಿಗೆಯ ಆಸ್ಪತ್ರೆ ಎಂದು ಹೇಳಲಾಗಿತ್ತು. ವಿಶೇಷ ಸ್ಥಾನಮಾನ ಹೊಂದಿರುವ ಪ್ರದೇಶ ಇದಾಗಿರುವುದರಿಂದ ಹಾಸಿಗೆ ಸಂಖ್ಯೆ 371ಕ್ಕೆ ಏರಿಸಲು ನಿರ್ಧರಿಸಿದೆ" ಎಂದು ಸಚಿವರು ವಿವರಿಸಿದರು.
"ಜಿ+3 ಮಹಡಿಯ ಈ ಆಸ್ಪತ್ರೆ 100 ಐಸಿಯು ಬೆಡ್, 3 ಓಟಿ ಥಿಯೇಟರ್, 3 ಕ್ಯಾಥಲ್ಯಾಬ್ ಹೊಂದಿರಲಿದೆ. ಬೆಂಗಳೂರು ಆಸ್ಪತ್ರೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಕಲಬುರಗಿಯ ಈ ನೂತನ ಆಸ್ಪತ್ರೆಯಲ್ಲಿ ಸಿಗಲಿದ್ದು, ಒಟ್ಟಾರೆಯಾಗಿ ಇದೊಂದು ಸುಸಜ್ಜಿತ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ" ಎಂದು ತಿಳಿಸಿದರು.












Click it and Unblock the Notifications