ಕಲಬುರಗಿ; ಅಕ್ರಮ ಮರಳು ಮಾಫಿಯಾ, ಹೆಡ್ ಕಾನ್ಸ್‌ಟೇಬಲ್ ಹತ್ಯೆ
ಕಲಬುರಗಿ, ಜೂನ್ 16: ಅಕ್ರಮ ಮರಳು ಸಾಗಾಟ ತಡೆಯಲು ಹೋದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಟ್ರಾಕ್ಟರ್ ಹತ್ತಿಸಿ ಕೊಲೆ ಮಾಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತಪಟ್ಟ ಸಿಬ್ಬಂದಿ ನೆಲೋಗಿ ಠಾಣೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.
ಕೊಲೆಯಾದ ಹೆಡ್ ಕಾನ್ಸ್‌ಟೇಬಲ್ 51 ವರ್ಷದ ಎಂ. ಚೌವ್ಹಾಣ್. ಜೇವರ್ಗಿಯ ನಾರಾಯಣಪುರದ ಸಮೀಪ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ರಾತ್ರಿ ಅಕ್ರಮ ಮರಳು ಸಾಗಾಟದ ಮಾಹಿತಿ ಪಡೆದ ಎಂ. ಚೌವ್ಹಾಣ್ ಸ್ಥಳಕ್ಕೆ ಪರಿಶೀಲನೆಗೆ ಹೋಗಿದ್ದರು.

ಬೈಕ್‌ನಲ್ಲಿ ಹೋಗುತ್ತಿದ್ದ ಎಂ. ಚೌವ್ಹಾಣ್ ಮೇಲೆ ಟ್ರಾಕ್ಟರ್ ಹತ್ತಿಸಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಟ್ರಾಕ್ಟರ್ ಚಕ್ರಕ್ಕೆ ಸಿಲುಕಿದ ಮುಖ್ಯ ಪೇದೆ ಎಂ. ಚೌವ್ಹಾಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎಂ. ಚೌವ್ಹಾಣ್ ಅಫಜಲಪುರ ತಾಲೂಕಿನ ಚೌಡಾಪೂರ್ ತಾಂಡಾ ನಿವಾಸಿಯಾಗಿದ್ದರು.
ಕಲಬುರಗಿ ಎಸ್ಪಿ ಇಶಾ ಪಂತ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. "ಎಂ. ಚೌವ್ಹಾಣ್ ಅವರು ಗಸ್ತಿನಲ್ಲಿದ್ದರು, ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ಸಿದ್ದಣ್ಣರನ್ನು ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.

ಟ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ. ಟ್ರಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಅಕ್ರಮ ಮರಳು ಸಾಗಾಟ ಸೇರಿದಂತೆ ಇತರ ಚಟುವಟಿಕೆ ತಡೆಯಲು ಎಂ. ಚೌವ್ಹಾಣ್ ಅವರನ್ನು ಗಸ್ತಿಗೆ ನಿಯೋಜನೆ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗೃಹ ಸಚಿವರಿಗೆ ಪ್ರಶ್ನೆ; ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಘಟನೆ ಕುರಿತು ಟ್ವೀಟ್ ಮಾಡಿ ಗೃಹ ಸಚಿವ ಡಾ. ಜಿ. ಪರಮೇಶ್ವರ ಪ್ರಶ್ನೆ ಮಾಡಿದ್ದಾರೆ. 'ಮರಳು ದಂಧೆ ತಡೆಯಲು ಹೋದ ಪೊಲೀಸ್ ಪೇದೆ ಹತ್ಯೆ ಮಾಡಲಾಗಿದೆ. ಟ್ರ್ಯಾಕ್ಟರ್ ಹರಿಸಿ ಪೊಲೀಸ್ ಪೇದೆ ಕೊಂದ ದಂಧೆಕೋರರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಈ "ಮಾಫಿಯಾ"ಗಳು ತಲೆಯೆತ್ತುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಯಾರೇ ಆದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ. ಸಮಾಜವನ್ನು ಕಾಯುವ ಪೊಲೀಸರಿಗೆ ಈ ಸ್ಥಿತಿ ಬಂದರೆ ಜನಸಾಮಾನ್ಯರನ್ನು ಕಾಪಾಡುವವರು ಯಾರು?' ಎಂದು ಕೇಳಿದ್ದಾರೆ.
ಹತ್ಯೆ ಯತ್ನ ನಡೆದಿತ್ತು; ಅಕ್ರಮ ಮರಳು ಮಾಫಿಯಾಕ್ಕೆ ರಾಜ್ಯದಲ್ಲಿ ಕಡಿವಾಣ ಬೇಕಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹುಲಿಗೊಪ್ಪ ಗ್ರಾಮದಲ್ಲಿ ಸೋಮವಾರ ರಾತ್ರಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಟ್ರಾಕ್ಟರ್ ಚಾಲಕ ರಾಮದುರ್ಗ ತಹಶೀಲ್ದಾರ್ ಹತ್ಯೆ ಮಾಡಲು ಪ್ರಯತ್ನ ನಡೆಸಿದ್ದ, ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಕ್ರಮ ಮರಳು ಗಣಿಗಾರಿಕೆ ಸ್ಥಳಕ್ಕೆ ತೆರಳುತ್ತಿದ್ದ ವೇಳೆ ಮರಳು ತುಂಬಿದ ಟ್ರ್ಯಾಕ್ಟರ್ ಅನ್ನು ತಹಶೀಲ್ದಾರ್ ಜೀಪಿಗೆ ಡಿಕ್ಕಿ ಹೊಡೆಸಲಾಗಿತ್ತು. ಆಗ ಟ್ರಾಕ್ಟರ್ ಮಗುಚಿ ಬಿದ್ದಿದ್ದು ಚಾಲಕ ಸ್ಥಳದಿಂದ ಪರಾರಿಯಾಗಿದ್ದ.
ಈ ವರ್ಷ ಜೂನ್ 15 ಕಳೆದರೂ ಸರಿಯಾಗಿ ನೈಋತ್ಯ ಮುಂಗಾರು ಮಳೆ ಸುರಿದಿಲ್ಲ. ಆದ್ದರಿಂದ ನದಿಗಳು ನೀರಿಲ್ಲದೇ ಬರಿದಾಗಿವೆ. ಅಕ್ರಮ ಮರಳು ಸಾಗಾಟ, ಸಂಗ್ರಹ ಮಾಡುವವರಿಗೆ ಇದು ವರದಾನವಾಗಿದೆ. ಇದನ್ನು ತಡೆಯಲು ಹೋದ ಅಧಿಕಾರಿಗಳನ್ನು ಹತ್ಯೆ ಮಾಡುವ ಮಟ್ಟಕ್ಕೆ ಮಾಫಿಯಾದ ಜಾಲ ಪ್ರಬಲವಾಗಿರುವುದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications