ಕಲಬುರಗಿ ಡಿಸಿ ಶರತ್ ವರ್ಗಾವಣೆಗೆ ಬಿಎಸ್ ವೈ ತಡೆಹಿಡಿದಿದ್ದೇಕೆ?
ಕಲಬುರಗಿ, ಏಪ್ರಿಲ್ 29: ಕಲಬುರಗಿ ಜಿಲ್ಲಾಧಿಕಾರಿ ಶರತ್ ಅವರ ವರ್ಗಾವಣೆ ಆದೇಶಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ನಿನ್ನೆ ತಡೆ ನೀಡಿದ್ದು, ವರ್ಗಾವಣೆ ರದ್ದುಗೊಳಿಸಿದ್ದಾರೆ. ಶರತ್ ಅವರ ವರ್ಗಾವಣೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವರ್ಗಾವಣೆ ಆದೇಶ ಹೊರಡಿಸಿದ ಎರಡು ಗಂಟೆಯೊಳಗೆ ಅದನ್ನು ಸಿಎಂ ಬಿಎಸ್ವೈ ತಡೆಹಿಡಿದಿದ್ದಾರೆ.
Recommended Video
ನಿನ್ನೆಯಷ್ಟೆ ಕಲಬುರಗಿ ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಇವರ ಜಾಗಕ್ಕೆ ಸುರಾಲ್ಕರ್ ವಿಕಾಸ್ ಕಿಶೋರ್ ಎಂಬುವರನ್ನು ನೇಮಿಸಲಾಗಿತ್ತು. ಆದರೆ ಶರತ್ ಅವರ ವರ್ಗಾವಣೆಗೆ ಅಧಿಕಾರಿ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಸಿಎಂ ಯಡಿಯೂರಪ್ಪನವರು ಜಿಲ್ಲಾಧಿಕಾರಿ ಶರತ್ ಜೊತೆ ದೂರವಾಣಿ ಮೂಲಕ ಸಂಪರ್ಕಿಸಿ, ಅವರ ಕಾರ್ಯವೈಖರಿಯನ್ನು ಪ್ರಶಂಸಿದ್ದಾರೆ. ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದೀರಿ, ಮುಂದುವರಿಸಿ. ಸದ್ಯ ನಿಮ್ಮನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಶರತ್ ವರ್ಗಾವಣೆಗೆ ಸಂಸದ ಉಮೇಶ್ ಜಾಧವ್ ಮತ್ತು ಶಾಸಕ ದತ್ತಾತ್ರೇಯ ಪಾಟೀಲ್ ಸಿಎಂ ಬಳಿ ಪಟ್ಟು ಹಿಡಿದಿದ್ದರು. ಹೀಗಾಗಿ ಶರತ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ವರ್ಗಾವಣೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಶರತ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆದಿದೆ.












Click it and Unblock the Notifications