ಖಮರುಲ್ ಇಚ್ಛೆಯಂತೆ ಖಲಂದರ್ ಖಾನ್ ಖಬರಿಸ್ಥಾನದಲ್ಲಿ ಅಂತ್ಯಕ್ರಿಯೆ
ಕಲಬುರಗಿ, ಸೆಪ್ಟೆಂಬರ್ 18: ಇಂದು ನಿಧನರಾದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಅಂತ್ಯ ಸಂಸ್ಕಾರ ಮಂಗಳವಾರ ಸಂಜೆ 8 ಗಂಟೆ ನಂತರ ಕಲಬುರಗಿಯಲ್ಲಿ ನಡೆಯಲಿದೆ.
ಖಮರುಲ್ ಇಸ್ಲಾಂ ಅವರ ತಂದೆ, ತಾಯಿ, ಅಣ್ಣ ಸೇರಿದಂತೆ ಕುಟುಂಬದ ಮೃತ ಸದಸ್ಯರ ಅಂತ್ಯಸಂಸ್ಕಾರ ನಡೆದಿದ್ದ ಖಲಂದರ್ ಖಾನ್ ಖಬರಿಸ್ಥಾನದಲ್ಲಿಯೇ ಅವರ ಅಂತ್ಯ ಸಂಸ್ಕಾರವನ್ನೂ ನೆರವೇರಿಸಲಾಗುತ್ತದೆ. ಸಂಜೆ 8 ಗಂಟೆಗೆ ನಮಾಜ್ ಮುಗಿದ ನಂತರ ಖಮರುಲ್ ಇಸ್ಲಾಂರನ್ನು ಧಪನ್ ಮಾಡಲಾಗುತ್ತದೆ.

ಕಲಬುರಗಿಯತ್ತ ಮೃತ ದೇಹ
ಇಂದು ಬೆಳಿಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಮೃತಪಟ್ಟ ಖಮರುಲ್ ಇಸ್ಲಾಂರ ಮೃತ ದೇಹವನ್ನು ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಮನೆಗೆ ತರಲಾಗಿತ್ತು. ನಂತರ ಕೆಪಿಸಿಸಿ ಕಚೇರಿಗೆ ಕೊಂಡೊಯ್ದು 6 ಗಂಟೆ ಸುಮಾರಿಗೆ ಕಲಬುರಗಿಗೆ ಆ್ಯಂಬುಲೆನ್ಸ್ ನಲ್ಲಿ ಮೃತದೇಹ ರವಾನಿಸಲಾಗಿದೆ.
ಕೆಲವು ಕಾಂಗ್ರೆಸ್ ಕಾರ್ಯಕರ್ತರೂ ಮೃತದೇಹದ ಜತೆ ಕಲಬುರಗಿಗೆ ತೆರಳಿದ್ದಾರೆ.
ಶಾಲೆ-ಕಾಲೇಜಿಗೆ ರಜೆ
ಕಲಬುರಗಿ ಹಾಲಿ ಶಾಸಕ ಖಮರುಲ್ ಇಸ್ಲಾಂ ನಿಧನ ಹಿನ್ನಲೆಯಲ್ಲಿ ಇಂದು ಕಲಬುರಗಿ ಜಿಲ್ಲೆಯಾದ್ಯಂತ ಶಾಲೆ ಮತ್ತು ಕಾಲೇಜಿಗೆ ರಜೆ ನೀಡಲಾಗಿತ್ತು. ಇನ್ನು ನಾಳೆಯೂ ಕಲಬುರಗಿ ಪಟ್ಟಣದಲ್ಲಿ ಅಘೋಷಿತ ಬಂದ್ ಜಾರಿಯಲ್ಲಿರುವ ಸಾಧ್ಯತೆ ಇದೆ.












Click it and Unblock the Notifications