ಕಲಬುರಗಿ : ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆ, ಸಂಸದರೆಲ್ಲಾ ಗೈರು
ಕಲಬುರಗಿ, ನವೆಂಬರ್ 28 : ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕರ್ನಾಟಕದ ಕಲಬುರಗಿಗೆ ಮೊದಲ ಬಾರಿಗೆ ಭೇಟಿ ನೀಡಿತ್ತು. ಸಮಿತಿಯಲ್ಲಿ 22 ಸದಸ್ಯರಿದ್ದು, ಅಧ್ಯಕ್ಷರು ಮತ್ತು ಒಬ್ಬರು ಸದಸ್ಯರು ಮಾತ್ರ ಹಾಜರಾಗಿದ್ದರು.
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಮೊದಲ ಬಾರಿಗೆ ಕಲಬುರಗಿಯಲ್ಲಿ ಸಭೆ ನಡೆಸಿತು. ಸಮಿತಿಯ ಅಧ್ಯಕ್ಷರು ಮಲ್ಲಿಕಾರ್ಜುನ ಖರ್ಗೆ, ಖರ್ಗೆ ಮತ್ತು ಬಿಹಾರದ ಬಿಜೆಪಿ ಸಂಸದ ಜನಾರ್ದನ್ ಸಿಂಗ್ ಹೊರತುಪಡಿಸಿ ಉಳಿದ ಎಲ್ಲಾ ಸದಸ್ಯರು ಗೈರಾಗಿದ್ದರು.
22 ಸದಸ್ಯರ ಸಮಿತಿಯಲ್ಲಿ ಲೋಕಸಭೆಯ 15, ರಾಜ್ಯಸಭೆಯ 7 ಸದಸ್ಯರು ಇದ್ದಾರೆ. ಹಾವೇರಿಯ ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಅವರು ಸಮಿತಿಯಲ್ಲಿದ್ದಾರೆ. ಆದರೆ, ಅವರು ಸಹ ಮೊದಲ ಸಭೆಗೆ ಗೈರು ಹಾಜರಾಗಿದ್ದರು.
ಹೈದರಾಬಾದ್‌ಗೆ ಭೇಟಿ ನೀಡಿದ್ದ ಸಮಿತಿ ಅಲ್ಲಿಂದ ಕಲಬರುಗಿ ಜಿಲ್ಲೆಗೆ ಆಗಮಿಸಿತು. ಕೆನರಾ ಬ್ಯಾಂಕ್ ಈ ಅಧ್ಯಯನ ಪ್ರವಾಸದ ನೋಡೆಲ್ ಆಫೀಸರ್ ಆಗಿತ್ತು. ಮೊದಲ ಬಾರಿಗೆ ಕಲಬುರಗಿಗೆ ಸಮಿತಿ ಆಗಮಿಸಿದರೂ ಸದಸ್ಯರು ಗೈರಾಗಿದ್ದು ವಿಶೇಷವಾಗಿತ್ತು.

ವಿಮಾನ ನಿಲ್ದಾಣಕ್ಕೆ ಭೇಟಿ
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯ, ವಿಮಾನ ನಿಲ್ದಾಣ, ಇಎಸ್‌ಐ ಆಸ್ಪತ್ರೆ ಮುಂತಾದ ಸ್ಥಳಗಳಿಗೆ ಸಮಿತಿ ಭೇಟಿ ನೀಡಿತು. ಕಲಬುರಗಿ ವಿಮಾನ ನಿಲ್ದಾಣಕ್ಕೆ ಸಮಿತಿ ಭೇಟಿ ನೀಡಿದಾಗ ಉಡಾನ್ ಯೋಜನೆಯಡಿ ವಿಮಾನಯಾನ ಆರಂಭಿಸಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಅವರು ವಿವರಿಸಿದರು.

ಇಎಸ್‌ಐ ಆಸ್ಪತ್ರೆಗೆ ಭೇಟಿ
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಕಲಬುರಗಿ ಇ.ಎಸ್.ಐ.ಸಿ. ಆಸ್ಪತ್ರೆಗೆ ಭೇಟಿ ನೀಡಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಪ್ರಗತಿ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ಅಧಿಕಾರಿಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿತು.

ಲೆಕ್ಕಪತ್ರ ಪರಿಶೀಲನೆ
ಹೈದರಾಬಾದ್-ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಸಮಿತಿಯು ಸಭೆಯನ್ನು ನಡೆಸಿತು. ಸಂಸತ್ ಅನುಮೋದಿಸಿದ ಅನುದಾನ, ಖರ್ಚು-ವೆಚ್ಚಗಳ ಲೆಕ್ಕಗಳ ಪರಿಶೀಲನೆ ಸಹ ನಡೆಯಿತು. ಸಮಿತಿಯು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ಅನೌಪಚಾರಿಕ ಚರ್ಚೆ ನಡೆಸಿತು.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ
ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು 'ಹಿಂದುಳಿದ ಭಾಗದ ಕೇಂದ್ರ ಸ್ಥಾನದಲ್ಲಿ ಮೊದಲ ಬಾರಿಗೆ ಸಭೆ ನಡೆದಿದೆ. ಆಂತರಿಕ ಚರ್ಚೆಗಳ ಬಗ್ಗೆ ವಿವರ ಬಹಿರಂಗ ಪಡಿಸುವುದು ಸಾಧ್ಯವಿಲ್ಲ' ಎಂದರು.
ಬುಧವಾರವೂ ಸಮಿತಿ ಕಲಬುರಗಿಯಲ್ಲಿ ಅಧ್ಯಯನ ಕೈಗೊಳ್ಳಲಿದೆ. ಇಂದು ರೈಲ್ವೆ ನಿಲ್ದಾಣಕ್ಕೆ ಸಮಿತಿ ಭೇಟಿ ನೀಡಲಿದ್ದು, ಕೆಲವು ಸದಸ್ಯರು ಹಾಜರಾಗಬಹುದು ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳು ಮಾತ್ರ ಇದ್ದರು
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಮಿತಿಯ ಸದಸ್ಯರಾದ ಬಿಹಾರ ಸಂಸದ ಜನಾರ್ಧನ ಸಿಂಗ್ ಸಿಗ್ರಿವಾಲ್ ಅವರು ಮಾತ್ರ ಸಮಿತಿ ಜೊತೆ ಇದ್ದರು. ಉಳಿದ ಸದಸ್ಯರು ಗೈರು ಹಾಜರಾಗಿದ್ದರು. ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶಕ ಟಿ.ಜಯಕುಮಾರ, ಹೆಚ್ಚುವರಿ ನಿರ್ದೇಶಕ ಎ.ಕೆ. ಸಿಂಗ್, ಕಾರ್ಯದರ್ಶಿ ಆರ್. ನಾರಾಯಣನ್, ಪ್ರಾದೇಶಿಕ ಆಯುಕ್ತ ಸುಬೋಧ ಯಾದವ್, ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಮುಂತಾದವರು ಸಮಿತಿ ಜೊತೆಗಿದ್ದರು.












Click it and Unblock the Notifications