Rudragowda Patil : ಪಿಎಸ್‌ಐ ಹಗರಣ; ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಪರಾರಿ!
ಕಲಬುರಗಿ, ಜನವರಿ 20; ಕರ್ನಾಟಕದಲ್ಲಿ ನಡೆದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಸಿಐಡಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ, ಆರೋಪಿ ಬಂಧಿಸಲು ಸಿಐಡಿ ತಂಡ ಆಗಮಿಸಿತ್ತು.
ಗುರುವಾರ ರಾತ್ರಿ ಹಗರಣದ ಆರೋಪಿ ರುದ್ರಗೌಡ ಪಾಟೀಲ್ ಕಲಬುರಗಿ ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ನಿವಾಸದಲ್ಲಿ ಸಿಐಡಿ ಪೊಲೀಸರನ್ನು ತಳ್ಳಿ ಪರಾರಿಯಾಗಿದ್ದಾನೆ. ಗುರುವಾರ ಬೆಳಗ್ಗೆ ಆರೋಪಿ ಮನೆ ಮೇಲೆ ಇಡಿ ಅಧಿಕಾರಿಗಳು ಸಹ ದಾಳಿ ಮಾಡಿದ್ದರು.

ಆರೋಪಿ ರುದ್ರಗೌಡ ಪಾಟೀಲ್ ವಿರುದ್ಧ ತುಮಕೂರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರಿನ ವಿಚಾರಣೆ ನಡೆಸಲು ಪೊಲೀಸರು ಆತನನ್ನು ಬಂಧಿಸಲು ಕಲಬುರಗಿಗೆ ಆಗಮಿಸಿದ್ದರು. ಈ ಸಮಯದಲ್ಲಿ ಆತ ಪರಾರಿಯಾಗಿದ್ದಾನೆ.
ಸಿಐಡಿ ತಂಡದ ಪಿಎಸ್‌ಐ ಆನಂದ್ ನೇತೃತ್ವದಲ್ಲಿ ಪೊಲೀಸರು ಆರೋಪಿ ರುದ್ರಗೌಡ ಪಾಟೀಲ್ ಬಂಧಿಸಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಆನಂದ್ ತಳ್ಳಿ ಆರೋಪಿ ಪರಾರಿಯಾಗಿದ್ದು, ಸಿಐಡಿ ಪೊಲೀಸರು ಈ ಕುರಿತು ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ಹಗರಣ ಬೆಳಕಿಗೆ ಬಂದ ಬಳಿಕ ಪರಾರಿಯಾಗಿದ್ದ. ಬಳಿಕ ಹಗರಣದ ತನಿಖೆ ಕೈಗೊಂಡ ಸಿಐಡಿ ಪೊಲೀಸರು ಮಹಾರಾಷ್ಟ್ರದ ಪುಣೆಯಲ್ಲಿ ಆತನನ್ನು ಬಂಧಿಸಿತ್ತು. ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ಆರೋಪಿ ಪದೇ ಪದೇ ವಿಚಾರಣೆಗೆ ಗೈರಾಗುತ್ತಿದ್ದ.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಅಭ್ಯರ್ಥಿಗಳಿಗೆ ತನ್ನ ಸಹಚರರ ಮೂಲಕ ಬ್ಲೂ ಟುಥ್ ಡಿವೈಸ್ ಅನ್ನು ರುದ್ರಗೌಡ ಪಾಟೀಲ್ ನೀಡುತ್ತಿದ್ದ. ಅವರಿಂದ ಹಣವನ್ನು ಪಡೆಯುತ್ತಿದ್ದ ಎಂಬುದು ಆರೋಪವಾಗಿದೆ.
ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸಹ ನಡೆದಿರುವುದರಿಂದ ಇಡಿ ತನಿಖೆ ಕೈಗೊಂಡಿತ್ತು. ಗುರುವಾರ ಇಡಿ ಪೊಲೀಸರು ರುದ್ರಗೌಡ ಮನೆ ಮೇಲೆ ದಾಳಿ ಮಾಡಿದ್ದರು. ರಾತ್ರಿ ಸಿಐಡಿ ಪೊಲೀಸರು ಬಂಧಿಸಲು ಬಂದಾಗ ಆತ ಮನೆಯಿಂದ ಪರಾರಿಯಾಗಿದ್ದಾನೆ.












Click it and Unblock the Notifications