Breaking; ಪಿಎಸ್‌ಐ ನೇಮಕಾತಿ; ಕಲಬುರಗಿಯಲ್ಲಿ ಮತ್ತೊಬ್ಬನ ಬಂಧನ
ಕಲಬುರಗಿ, ಏಪ್ರಿಲ್ 26; ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಕಲಬುರಗಿಯಲ್ಲಿ ಮತ್ತೊಬ್ಬ ಆರೋಪಿ ಬಂಧಿಸಿದ್ದಾರೆ. ಈತ ಎಲೆಕ್ಟ್ರಾನಿಕ್ ಉಪಕರಣ ಬಳಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾನೆ ಎಂದು ಶಂಕಿಸಲಾಗಿದೆ.
ಕಲಬುರಗಿಯ ನಿವಾಸಿ ಎಸ್. ವಿ. ಸುನೀಲ ಕುಮಾರ್ ಬಂಧಿತ ಆರೋಪಿ. ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿಯೇ ಈತ ಪರೀಕ್ಷೆ ಬರೆದಿದ್ದ. ಕಲಬುರಗಿಯಲ್ಲಿರುವ ಸಿಐಡಿ ತಂಡ ಆರೋಪಿ ಬಂಧಿಸಿ, ವಿಚಾರಣೆ ನಡೆಸುತ್ತಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರುದ್ರಗೌಡ ಡಿ. ಪಾಟೀಲ ಬಂಧಿಸಲಾಗಿದೆ. ಈತನ ವಿಚಾರಣೆ ವೇಳೆ ಸಿಕ್ಕ ಮಾಹಿತಿಯಂತೆ ಸುನೀಲ ಕುಮಾರ್ ಬಂಧಿಸಲಾಗಿದೆ. ಎಲೆಕ್ಟ್ರಾನಿಕ್ ಉಪಕರಣ ಬಳಕೆ ಮಾಡಿಕೊಂಡು ಪರೀಕ್ಷೆ ಬರೆದಿದ್ದಾನೆ ಎಂಬ ಆರೋಪದ ಹಿನ್ನಲೆ ವಿಚಾರಣೆ ನಡೆಸಲಾಗುತ್ತಿದೆ.

ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಸುನೀಲ್ ಕುಮಾರ್‌ಗೆ ಸಿಐಡಿ ನೋಟಿಸ್ ನೀಡಿತ್ತು. ಸೋಮವಾರ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಸುನೀಲ್ ವಿಚಾರಣೆ ಎದುರಿಸಿದ್ದರು. ವಿಚಾರಣೆ ವೇಳೆ ಸಂದೇಹ ಬಂದ ಕಾರಣ ಪೊಲೀಸರು ಬಂಧಿಸಿದ್ದಾರೆ.
ಸುನೀಲ ಕುಮಾರ್ ಅಕ್ರಮವಾಗಿ ಪರೀಕ್ಷೆ ಬರೆಯಲು 40 ಲಕ್ಷ ರೂ. ಹಣ ನೀಡಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಬಿಜೆಪಿ ನಾಯಕಿ, ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಸ್ಥೆ ದಿವ್ಯಾ ಹಾಗರಗಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.












Click it and Unblock the Notifications