Kalaburagi: ಕ್ಷೇತ್ರದಿಂದ ಮಲ್ಲಿಕಾರ್ಜುನ್ ಖರ್ಗೆ ಸ್ಪರ್ಧಿಸಲ್ಲ, ಅಳಿಯ ಸ್ಪರ್ಧೆ
ಬೆಂಗಳೂರು, ಮಾರ್ಚ್ 22: ಕರ್ನಾಟಕ ಕಾಂಗ್ರೆಸ್ ಲೋಕಸಭಾ ಚುನಾವಣೆ ಸಂಬಂಧ ಗುರುವಾರ ಬಾಕಿ ಉಳಿದಿದ್ದ 21 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಿದೆ. ಇದರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರಿಲ್ಲ. ಒಂದೂವರೆ ದಶಕದಲ್ಲಿ ಲೋಕಸಭಾ ಚುನಾವಣೆಯ ಅಖಾಡದಲ್ಲಿ ಅವರು ಇಲ್ಲದಿರುವುದು ಇದೇ ಮೊದಲು.
ಹೌದು, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎನ್ನಲಾಗಿದೆ. ಅವರ ತವರು ಕ್ಷೇತ್ರ ಕಲಬುರಗಿಯಿಂದ ಅವರ ಅಳಿಯ ರಾಧಾಕೃಷ್ಣ ಅವರ ಉಮೇದುವಾರಿಕೆಯನ್ನು ಪಕ್ಷ ಗುರುವಾರ ಪ್ರಕಟಿಸಿದೆ. ಈ ಮೂಲಕ ಮಲ್ಲಿಕಾರ್ಜುನ್ ಖರ್ಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ಖಚಿತವಾಗಿದೆ.

ಕಳೆದ 15 ವರ್ಷಗಳಲ್ಲಿ ಮಲ್ಲಕಾರ್ಜುನ್ ಖರ್ಗೆ ಲೋಕಸಭೆ ಚುನಾವಣೆ ಕಣದಲ್ಲಿ ಇಲ್ಲದಿರುವ ಚುನಾವಣೆ ಇದೆ ಎಂದು ಕಲಬುರಗಿ ಕಾರ್ಯಕರ್ತರು, ಅವರ ಬೆಂಬಲಿಗರು ಮಾತನಾಡಿದ್ದರು. ಖರ್ಗೆ ಅವರು 2009-2014ರ ಅವಧಿಯಲ್ಲಿ ಕಲಬುರಗಿ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾದರು.
2019ರಲ್ಲಿ ಖರ್ಗೆಗೆ ಸೋಲು
ಖರ್ಗೆಯವರು ಕಳೆದ ಬಾರಿ (2019 ರಲ್ಲಿ) ತಮ್ಮ ಸ್ಥಾನವನ್ನು ಕಳೆದುಕೊಂಡರು. ಸ್ವ ಕ್ಷೇತ್ರದಲ್ಲಿ ಅವರು ಸೋಲು ಕಂಡರು. ಸದ್ಯ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಜನಿಸಿದ ಖರ್ಗೆಯವರ ಅಳಿಯ ರಾಧಾಕೃಷ್ಣ ಅವರು ಉದ್ಯಮಿ. ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ಅವರು, ತೆರೆಮರೆಯಲ್ಲಿ ಕೆಲಸ ಮಾಡುತ್ತಲೇ ರಾಜಕೀಯದಲ್ಲಿ ನಿರತರಾದವರು. ಖರ್ಗೆ ಅವರ ಪ್ರಚಾರ ಕಾರ್ಯಗಳನ್ನು ನಿರ್ವಹಿಸಿದ್ದಾರೆ. ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಈ ಬಾರಿ ಇವರೇ ಕಣ್ಣಕ್ಕಿಳಿಯಲಿದ್ದಾರೆ.
ಇನ್ನು ರಾಜ್ಯ ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷವು ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಈ ನಾಲ್ಕು ಕ್ಷೇತ್ರ ಬಿಟ್ಟು ಎಲ್ಲ ಕ್ಷೇತ್ರಗಳಿಗೆ ಟಿಕೆಟ್ ಘೋಷಿಸಿದೆ. ಮಲ್ಲಿಕಾರ್ಜುನ್ ಅವರಂತೆ ಇತರ ಕಾಂಗ್ರೆಸ್ ಸಚಿವರುಗಳು ತಮ್ಮ ಮಕ್ಕಳನ್ನು ಕಣಕ್ಕಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೆಚ್ಚು ಸೀಟು ಗೆಲ್ಲಲು ಸಚಿವರ ಮಕ್ಕಳಿಗೆ ಟಿಕೆಟ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ (ಬೆಳಗಾವಿ), ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ (ಬೆಂಗಳೂರು ದಕ್ಷಿಣ), ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (ಚಿಕ್ಕೋಡಿ), ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತ ಪಾಟೀಲ್ (ಬಾಗಲಕೋಟೆ) ಪುತ್ರಿ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ (ಬೀದರ್) ಅವರನ್ನು ಚುನಾವಣೆ ಅಖಾಡಕ್ಕೆ ತರುವಲ್ಲಿ ಸಫಲರಾಗಿದ್ದಾರೆ.
ಕಾಂಗ್ರೆಸ್ ನಲ್ಲಿ ಕೆಲವು ಕ್ಷೇತ್ರಗಳಲ್ಲಿ ರಾಜಕೀಯ ಕುಟುಂಬದವರಿಗೆ ಕೆಲವು ಟಿಕೆಟ್ ಹಂಚಿಕೆ ಆಗಲಿದೆ ಎಂಬ ಮಾತು ನಿಜವಾಗಿದೆ. ಇದರಿಂದ ಆಯಾ ಕ್ಷೇತ್ರದಲ್ಲಿದ್ದ ಕಾಂಗ್ರೆಸ್ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಹಾಲಿ ಸಚಿವರ ಮಕ್ಕಳಿಗೆ, ಕುಟುಂಬಸ್ಥರಿಗೆ ಟಿಕೆಟ್ ಕೊಡುವ ಮೂಲಕ ಒಟ್ಟು 28 ಕ್ಷೇತ್ರಗಳಲ್ಲಿ ಹೆಚ್ಚು ಸೀಟು ಗೆಲ್ಲುವ ಕಾಂಗ್ರೆಸ್‌ನ ತಂತ್ರಗಾರಿಕೆಯು ಇದರಲ್ಲಿ ಅಡಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications