ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಿಂದ ಆರು ವರ್ಷ ಉಚ್ಚಾಟನೆ
Recommended Video

ಕಲಬುರಗಿ, ಮಾರ್ಚ್ 30: ಬಿಜೆಪಿ ಸೇರುವ ಬಗ್ಗೆ ಘೋಷಣೆ ಮಾಡಿದ್ದ ಕಲಬುರಗಿ ಜಿಲ್ಲೆ ಅಫಜಲಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಈ ಆದೇಶ ಹೊರಡಿಸಿದ್ದು, ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷ ಅವಧಿಗೆ ಉಚ್ಚಾಟಿಸಿದ್ದಾರೆ.
ಸ್ಪೀಕರ್ ಕೆ.ಬಿ. ಕೋಳಿವಾಡ ಅವರನ್ನು ಶುಕ್ರವಾರ ಭೇಟಿ ಮಾಡಿ, ತಮ್ಮ ರಾಜೀನಾಮೆ ಪತ್ರ ಸಲ್ಲಿಸಬೇಕು ಎಂದಿದ್ದರು ಮಾಲೀಕಯ್ಯ ಗುತ್ತೇದಾರ್. ಆ ನಂತರ ಮೈಸೂರಿನಲ್ಲಿ ಶನಿವಾರ ಬಿಜೆಪಿ ಸೇರುವ ಇರಾದೆ ಇದ್ದ ಮಾಲೀಕಯ್ಯ ಗುತ್ತೇದಾರ್ ಗೆ ಸ್ಪೀಕರ್ ಭೇಟಿಗೆ ಅವಕಾಶ ಸಿಕ್ಕಿಲ್ಲ.
ಕೆ.ಬಿ.ಕೋಳಿವಾಡ ಅವರು ಬೆಂಗಳೂರಿನಲ್ಲಿ ಇಲ್ಲದ ಕಾರಣ ರಾಜೀನಾಮೆ ಪತ್ರ ಸಲ್ಲಿಸಿಲ್ಲ. ಆದರೆ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಾಗಿ ಹೇಳಿಕೊಂಡಿದ್ದರು. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಪಕ್ಷ, ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ ಸಲ್ಲಿಕೆಗೆ ಮುನ್ನವೇ ಉಚ್ಚಾಟಿಸುವ ಕ್ರಮ ಕೈಗೊಂಡಿದೆ.

ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ವಾತಾವರಣ
ಕಾಂಗ್ರೆಸ್ ನಲ್ಲಿ ಉಸಿರುಗಟ್ಟುವ ವಾತಾವರಣ ಇರುವುದರಿಂದ ಪಕ್ಷಕ್ಕೆ ಗುಡ್ ಬೈ ಹೇಳಿರುವುದಾಗಿ ಅವರು ತಿಳಿಸಿದ್ದರು. ಗುತ್ತೇದಾರ ಬಿಜೆಪಿ ಪಾಳಯಕ್ಕೆ ಬಂದಿರುವುದರಿಂದ ಮಾಜಿ ಶಾಸಕ ಎಂ.ವೈ.ಪಾಟೀಲ ಅವರಿಗೆ ಇರುಸುಮುರುಸು ಉಂಟಾಗಿದ್ದು, ಬಿಜೆಪಿಯವರು ಪಾಟೀಲ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ಮಾಲೀಕಯ್ಯ ಗುತ್ತೇದಾರ್ ಸೇರ್ಪಡೆಗೆ ಈಶ್ವರಪ್ಪ ಪ್ರತಿಕ್ರಿಯೆ
ಇನ್ನು ಮಾಲೀಕಯ್ಯ ಗುತ್ತೇದಾರ್ ಬಿಜೆಪಿ ಸೇರ್ಪಡೆಗೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾತನಾಡಿದ ಪರಿಷತ್ ವಿಪಕ್ಷ ನಾಯಕ ಕೆಎಸ್ ಈಶ್ವರಪ್ಪ, ಗುತ್ತೇದಾರ್ ರನ್ನು ನೀವೇ ಪಕ್ಷಕ್ಕೆ ಕರೆದರಾ ಅಥಾವ ಅವರಾಗಿಯೇ ಬಂದರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡಿದರು.

ಪ್ರೀತಿ ಹುಡುಗನ ಕಡೆಯಿಂದ ಹುಟ್ಟುತ್ತಾ, ಹುಡುಗಿ ಕಡೆಯಿಂದ ಹುಟ್ಟುತ್ತಾ?
ಪ್ರೀತಿ ಎಡಗಡೆ ಹುಟ್ಟುತ್ತಾ ಅಥಾವ ಬಲಗಡೆ ಹುಟ್ಟುತ್ತಾ? ಪ್ರೀತಿ ಹುಡುಗನ ಕಡೆಯಿಂದ ಹುಟ್ಟುತ್ತಾ ಅಥವಾ ಹುಡುಗಿ ಕಡೆಯಿಂದ ಹುಟ್ಟುತ್ತಾ ಎಂದು ಮಾಧ್ಯಮದವರಿಗೆ ಮರುಪ್ರಶ್ನೆ ಹಾಕಿದ ಈಶ್ವರಪ್ಪ, ಪ್ರೀತಿ ಎಲ್ಲಿಂದಲೇ ಹುಟ್ಟಲಿ ಮತ್ತು ಯಾರಿಂದಲೇ ಹುಟ್ಟಲಿ, ಪ್ರೀತಿ ಮುಖ್ಯ ಎಂದು ಉತ್ತರಿಸಿದರು.

ಅಭ್ಯರ್ಥಿಗಳ ಆಯ್ಕೆಗೆ ಮೂರು ಅಂಶದ ಸೂತ್ರ
ಮಾಲೀಕಯ್ಯ ಗುತ್ತೇದಾರ್ ತಾವಾಗಿಯೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಟಿಕೆಟ್ ನೀಡುತ್ತೇವೆ ಎಂದು ಯಾವುದೇ ಭರವಸೆ ನೀಡಿಲ್ಲ. ರಾಜ್ಯದ 224 ಕ್ಷೇತ್ರಗಳ ಟಿಕೆಟ್ ಇನ್ನೂ ಅಂತಿಮ ಆಗಿಲ್ಲ. ಟಿಕೆಟ್ ಫೈನಲ್ ಎಂದು ಕೇವಲ ಮಾಧ್ಯಮಗಳಲ್ಲಿ ಬರುತ್ತಿದೆ. ಅಭ್ಯರ್ಥಿಗಳ ಆಯ್ಕೆಗೆ ಕೇಂದ್ರ ಸಮಿತಿ ಮೂರು ಅಂಶದ ಸೂತ್ರ ರಚಿಸಿದೆ ಎಂದು ಹೇಳಿದರು.












Click it and Unblock the Notifications