ಮಳೆ ಅನಾಹುತ: ಮಳಖೇಡದ ಉತ್ತರಾದಿಮಠದಲ್ಲಿ 60 ಲಕ್ಷದಷ್ಟು ನಷ್ಟ

Posted By:
Subscribe to Oneindia Kannada

ಮಳಖೇಡ, ಸೆಪ್ಟೆಂಬರ್ 25: ಕಲಬುರಗಿ ಜಿಲ್ಲೆಯ ಮಳಖೇಡದಲ್ಲಿರುವ ಉತ್ತರಾದಿ ಮಠದಲ್ಲಿ ಮಳೆಯಿಂದ ಭಾರೀ ನಷ್ಟವಾಗಿದೆ. ಅಲ್ಲಿನ ಉಸ್ತುವಾರಿ ವಹಿಸಿರುವ ವೆಂಕಣ್ಣಯ್ಯ ಅವರು ಒನ್ ಇಂಡಿಯಾ ಕನ್ನಡದ ಜತೆ ಮಾತನಾಡಿ, ಅಂದಾಜು 50ರಿಂದ 60 ಲಕ್ಷ ರುಪಾಯಿಯಷ್ಟು ನಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಮಳೆಗೆ ಮಠದ ಎರಡು ಗೋವು ಕೊಚ್ಚಿ ಹೋಗಿವೆ. 2-3 ಲಕ್ಷದಷ್ಟು ಕಟ್ಟಿಗೆ ನಷ್ಟವಾಗಿದೆ. ಒಂದೂವರೆ ಲಕ್ಷದಷ್ಟು ಮೌಲ್ಯದ ಅಕ್ಕಿ, ಸಕ್ಕರೆ, ಎಣ್ಣೆ ಸೇರಿದಂತೆ ಇತರ ದಿನಸಿಗಳು ಹಾಳಾಗಿವೆ. ಶುಕ್ರವಾರ ಹಾಗೂ ಶನಿವಾರ ಮಠದಲ್ಲಿ ಹಸ್ತೋದಕ ಮಾಡಲು ಸಾಧ್ಯವಾಗಿಲ್ಲ. ಜಯತೀರ್ಥರ ವೃಂದಾವನ ಮುಳುಗಿಹೋಗಿದೆ. ಮಠದ ಕಚೇರಿಯಲ್ಲಿ ಕನಿಷ್ಠ ಒಂದು ಅಡಿಯಷ್ಟು ನೀರು ನಿಂತಿದೆ ಎಂದು ತಿಳಿಸಿದರು.[ಕಲಬುರಗಿಯಲ್ಲಿ ಜಲಪ್ರಳಯ : 5 ಜನ ರೈತರ ಪ್ರಾಣ ರಕ್ಷಣೆ!]

Malakheda Uttaradi mutt lost 60 lakhs worth of things to rain

ಮಠದ ಬೆಳ್ಳಿ ರಥವನ್ನು ಕಚೇರಿಯಲ್ಲಿ ಇಟ್ಟಿದ್ದರಿಂದ ನೀರು ತುಂಬಿಕೊಂಡು, ಅದು ಕಪ್ಪು ಬಣ್ಣಕ್ಕೆ ತಿರುಗಿದೆ. ಎರಡು ದಿನದಿಂದ ಮಠದಲ್ಲಿ ಅಡುಗೆ ಮಾಡಲು ಸಾಧ್ಯವಾಗದೆ ಅವಲಕ್ಕಿ-ಉಪ್ಪಿಟ್ಟು ತಿಂದುಕೊಂಡಿದ್ದೆವು. ಹೊರಗಿನಿಂದ ಹತ್ತು ಜನ ಭಕ್ತರು ಬಂದಿದ್ದರು. ಭಾನುವಾರ ಅವರನ್ನು ವಾಪಸ್ ಕಳಿಸಿದೆವು ಎಂದು ವೆಂಕಣ್ಣಯ್ಯ ಅವರು ತಿಳಿಸಿದರು.

ಇತ್ತೀಚೆಗೆ ಸಾವಿರ ಗಂಧದ ಮರ, ಸಾವಿರ ಟೀಕ್ ಹಾಗೂ 800 ಮಾವಿನ ಸಸಿ ನೆಡೆಸಿದ್ದೆವು. ಅವುಗಳಿಗಾಗಿ 12 ಲಕ್ಷಕ್ಕೆ ಮಾತನಾಡಿ, 9 ಲಕ್ಷ ಕೊಟ್ಟಿದ್ದೆವು. ಈಗ ಅವುಗಳಿಗೆ ಬಹಳ ಹಾನಿಯಾಗಿದೆ. ಅದರ ಜತೆಗೆ ಪಂಪ್ ಸೆಟ್-ಪೈಪ್ ಲೈನ್ ಗೂ ನಷ್ಟವಾಗಿದೆ. ಮಠಕ್ಕೆ ಬರುವ ರಸ್ತೆ ಹಾಳಾಗಿದೆ ಎಂದು ಮಳೆಯಿಂದಾದ ನಷ್ಟದ ಬಗ್ಗೆ ವಿವರ ನೀಡಿದರು.[ಕಲಬುರಗಿಯಲ್ಲಿ ಮಳೆರಾಯ ಮೊಕ್ಕಾಂ: ಬೆಳೆ ನಷ್ಟ, ಸೇತುವೆ ಮುಳುಗಡೆ]

Malakheda Uttaradi mutt lost 60 lakhs worth of things to rain

ಈಗ ಪಿತೃಪಕ್ಷವಾದ್ದರಿಂದ ಕನಿಷ್ಠ ನೂರು-ನೂರೈವತ್ತು ಮಂದಿ ಕಾರ್ಯ ಮಾಡಿಸುತ್ತಿದ್ದರು. ಶುಕ್ರವಾರ ಅವಿಧವಾ ನವಮಿ ಇತ್ತು. ಮಠದ ವಿದ್ಯಾರ್ಥಿಯೊಬ್ಬನ ತಾಯಿಯ ಕಾರ್ಯ ಮಾತ್ರ ಮಾಡಿಸಿದ್ವಿ. ವಿದ್ಯಾರ್ಥಿಗಳು, ನೌಕರರು ಸೇರಿ ನಾವು ಮಠದವರು ಮೂವತ್ತು ಮಂದಿ ಇಲ್ಲಿದ್ದೇವೆ. ಕಲಬುರಗಿ ಜಿಲ್ಲಾಡಳಿತದಿಂದ ಈ ವರೆಗೂ ನಮ್ಮ ಸ್ಥಿತಿಯನ್ನು ಯಾರೂ ವಿಚಾರಿಸಿಲ್ಲ.

ಸತ್ಯಾತ್ಮ ತೀರ್ಥರು ಹಲವು ಬಾರಿ ಕರೆ ಮಾಡಿ, ನಮ್ಮ ಸ್ಥಿತಿ-ಗತಿ ವಿಚಾರಿಸಿದರು. ಹೆಲಿಕಾಪ್ಟರ್ ನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಸದ್ಯಕ್ಕೆ ಅದರ ಅಗತ್ಯ ಇಲ್ಲ ಎಂದು ನಾವೇ ಹೇಳಿದ್ದೇವೆ. ಬಹಳ ತೊಂದರೆ ಆಗಿರುವುದು ಗೋವುಗಳಿಗೆ. ಒಂದೂವರೆ ಲಾರಿಯಷ್ಟಿದ್ದ ಹಿಂಡಿ ಗೊಬ್ಬರ ಹೊರಟು ಹೋಗಿದೆ ಎಂದು ವೆಂಕಣ್ಣಯ್ಯ ಬೇಸರ ವ್ಯಕ್ತಪಡಿಸಿದರು.[ಕಲಬುರಗಿಯಲ್ಲಿ ಮಳೆ-ಚಳಿಯ ಜುಗಲ್ ಬಂದಿ]

Malakheda Uttaradi mutt lost 60 lakhs worth of things to rain

ಮೂವತ್ತು ವರ್ಷದ ನಂತರ ಇಂಥ ಮಳೆ ಆಗಿದೆ. ಊರಿನ ಹುಡುಗರು ಭಾನುವಾರ ಸಹಾಯ ಮಾಡಿದ್ದಾರೆ ಆದ್ದರಿಂದ ಇವತ್ತು ಅಡುಗೆ ಮಾಡಬಹುದು. ಆದರೆ ಟೀಕಾಚಾರ್ಯರ ವೃಂದಾವನ ಇನ್ನೂ ನೀರೊಳಗೆ ಮುಳುಗಿದೆ ಎಂದು ಮಾಹಿತಿ ನೀಡಿದರು.

ಇನ್ನು ಬೆಂಗಳೂರಿನಲ್ಲಿರುವ ಉತ್ತರಾದಿ ಮಠದ ವಿದ್ಯಾಧೀಶಾಚಾರ್ ಮಾತನಾಡಿ, ಸರಕಾರದ ಕಡೆಯಿಂದ ಯಾರೂ ಮಾತನಾಡಿಲ್ಲ. ಸೇಡಂ, ಕಲಬುರಗಿಯಲ್ಲಿ ಮಠಕ್ಕೆ ನಡೆದುಕೊಳ್ಳುವವರಿದ್ದಾರೆ. ಮಠಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಪರಿಹಾರಕ್ಕೆ ಸರಕಾರಕ್ಕೆ ಮನವಿ ಮಾಡುವ ಬಗ್ಗೆ ಹಾಗೂ ಭಕ್ತರಿಂದ ನೆರವು ಕೋರುವುದಕ್ಕೆ ಸ್ವಾಮಿಗಳನ್ನು ಕೇಳುತ್ತೇವೆ ಎಂದು ಅವರು ಹೇಳಿದರು.[ಬೀದರ್, ಕಲಬುರಗಿಯಲ್ಲಿ ನಿರಂತರ ಮಳೆ, ಜನತೆ ತತ್ತರ]

ಮಠಕ್ಕೆ ನೆರವು ನೀಡಲು ಇಚ್ಛಿಸುವವರು ಧೀರೇಂದ್ರಾಚಾರ್ ಮೊ.9448484457, ವೆಂಕಣ್ಣಾಚಾರ್ ಮೊ.9448181288 ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Uttaradi mutt in Malakheda lost 60 lakhs worth of things due to heavy rain in Kalaburagai district.
Please Wait while comments are loading...