ಲೋಕಸಭೆ ಚುನಾವಣೆ ಮತ ಎಣಿಕೆ: ಕಲಬುರಗಿಯಲ್ಲಿ ಸಿದ್ಧತೆ ಹೇಗಿದೆ?
ಕಲಬುರಗಿ, ಜೂನ್ 03: ಕಲಬುರಗಿ ಜಿಲ್ಲಾಡಳಿತ ಗುಲಬರ್ಗಾ ಲೋಕಸಭಾ (ಪ.ಜಾ) ಮೀಸಲು ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಅಗತ್ಯ ತಯಾರಿ ಪೂರ್ಣಗೊಳಿಸಿದೆ. ಜೂನ್ 4ರ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗದಲ್ಲಿ ಮತ ಎಣಿಕೆ ಆರಂಭವಾಗಲಿದೆ.
ಗುಲಬರ್ಗಾ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆದಿತ್ತು. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ. ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್. ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಯಾರಿಗೆ ಗೆಲುವು? ಎಂದು ಕಾದು ನೋಡಬೇಕಿದೆ.

ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಮತ ಎಣಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದಲೇ ಸ್ಟ್ರಾಂಗ್ ರೂಂ ತೆರೆಯುವ ಕಾರ್ಯ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಗತ್ಯ ಸಿಬ್ಬಂದಿಗಳ ನೇಮಕ: ಗುಲಬರ್ಗಾ ವಿವಿಯ ಗಣಿತ ವಿಭಾಗದ ಭಾಸ್ಕರ್ ಹಾಲ್‍ನಲ್ಲಿ ಅಫಜಲಪೂರ, ಪರೀಕ್ಷಾ ಕೇಂದ್ರದಲ್ಲಿ ಚಿತ್ತಾಪುರ, ಗುಲಬರ್ಗಾ ಗ್ರಾಮೀಣ ಹಾಗೂ ಪರೀಕ್ಷಾ ಕೇಂದ್ರದ ಸೆಲುಲಾರ್ ಹಾಲ್‍ನಲ್ಲಿ ಜೇವರ್ಗಿ, ಇಂಡೋರ್ ಸ್ಟೇಡಿಯಂನಲ್ಲಿ ಗುರುಮಠಕಲ್ ಮತ್ತು ಗುಲಬರ್ಗಾ ಉತ್ತರ, ಕನ್ನಡ ವಿಭಾಗದ ಹರಿಹರ ಸಭಾಂಗಣದಲ್ಲಿ ಸೇಡಂ ಹಾಗೂ ಸಸ್ಯಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳನ್ನು ಹಾಕಲಾಗಿದೆ. ಪ್ರತಿ ಟೇಬಲ್‍ಗೆ ಓರ್ವ ಎಣಿಕೆ ಮೇಲ್ವಿಚಾರಕರು, ಓರ್ವ ಎಣಿಕೆ ಸಹಾಯಕರು ಹಾಗೂ ಓರ್ವ ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ವಿದಾನಸಭಾ ಕ್ಷೇತ್ರವಾರು ಮತ ಎಣಿಕೆ 14 ಟೇಬಲ್‍ಗಳಿಗೆ 14 ಕೌಂಟಿಂಗ್ ಏಜೆಂಟ್‍ಗಳನ್ನು ಆಯಾ ಅಭ್ಯರ್ಥಿಗಳು ನೇಮಿಸಲು ಅವಕಾಶ ನೀಡಿದ್ದು, ಸದರಿ ಕೌಂಟಿಂಗ್ ಏಜೆಂಟ್‍ಗಳು ಪೆನ್, ಸಿಂಪಲ್ ಕ್ಯಾಲ್ಕುಲೇಟರ್ ಹಾಗೂ ಪೇಪರ್ ಮಾತ್ರ ತರಲು ಅವಕಾಶ ನೀಡಲಾಗಿದೆ.
ಪ್ರತಿ ಸುತ್ತಿನ ಮತ ಎಣಿಕೆ ನಂತರ ಆಯಾ ಅಭ್ಯರ್ಥಿಗಳು ಪಡೆದ ಮತಗಳ ವಿವರವನ್ನು ಮಾಧ್ಯಮದವರಿಗೆ ಕ್ಷಣ-ಕ್ಷಣಕ್ಕೆ ಮಾಹಿತಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರಾಣಿಶಾಸ್ತ್ರ ಸಭಾಂಗಣದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದೆ. ಸ್ಕ್ರೀನ್ ಮೂಲಕ ಎಣಿಕೆಯ ಸಂಪೂರ್ಣ ಅಪಡೇಟ್ ಮಾಹಿತಿ ನೀಡಲಾಗುತ್ತದೆ.
ಮತ ಎಣಿಕೆ ಕೇಂದ್ರಕ್ಕೆ ಹಾನಿಕಾರಕ ಸೇವನೆಗಳಾದ ವಿವಿಧ ರೀತಿಯ ತಂಬಾಕು, ಗುಟ್ಕಾ, ಬೀಡಿ, ಸಿಗರೇಟ್, ಬೆಂಕಿ ಪೊಟ್ಟಣ, ಲೈಟರ್ ಹಾಗೂ ಮದ್ಯಪಾನಗಳು, ವಿದ್ಯುನ್ಮಾನ ಯಂತ್ರಗಳಾದ ಸ್ಮಾರ್ಟ್ ವಾಚ್, ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ಹಾಗೂ ಮಾರಕಾಸ್ತ್ರಗಳಾದ ಗನ್, ಖಡ್ಗ, ಚಾಕು, ಚೂರಿ ಇತರೆ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ.
ಮತ ಎಣಿಕೆ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತಗಟ್ಟೆ ಸುತ್ತಮುತ್ತ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೇ ಜೂನ್ 3ರ ಮಧ್ಯರಾತ್ರಿ 12 ಗಂಟೆಯಿಂದ ಜೂನ್ 4ರ ಮಧ್ಯರಾತ್ರಿ 12ರ ವರೆಗೆ ಮದ್ಯ ಮಾರಾಟ ಸಹ ನಿಷೇಧಿಸಲಾಗಿದೆ.
ಮತ ಎಣಿಕೆ ಕಾರ್ಯ ಸುಗಮವಾಗಿ ನಡೆಸಲು ಹಾಗೂ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ಜಿಲ್ಲೆಯಾದ್ಯಂತ (ಕಲಬುರಗಿ ನಗರಕ್ಕೆ ನಗರ ಪೊಲೀಸ್ ಆಯುಕ್ತರು ಕಲಂ 144ರಡಿ ಆದೇಶ ಹೊರಡಿಸಿರುವುದರಿಂದ ಕಲಬುರಗಿ ನಗರ ಹೊರತುಪಡಿಸಿ) ಇದೇ ಜೂನ್ 4ರ ಬೆಳಗಿನ 6 ಗಂಟೆಯಿಂದ ಜೂನ್ 5ರ ಬೆಳಗಿನ 6 ಗಂಟೆಯವರೆಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ-1973ರ ಕಲಂ 144 ರನ್ವಯ ಕೆಲವೊಂದು ಷರತ್ತು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.












Click it and Unblock the Notifications