ಪ್ರಧಾನಿ ನರೇಂದ್ರ ಮೋದಿಗೆ ನಾಲಾಯಕ್ ಎಂದ ಪ್ರಿಯಾಂಕ್ ಖರ್ಗೆ; ತಂದೆಯ ದಾರಿ ಹಿಡಿದ ಮಗ
2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ರಣಕಣ ರಂಗೇರಿದ್ದು, ಮೇ 10ರಂದು ನಡೆಯುವ ಮತದಾನಕ್ಕೆ ಮುನ್ನ ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿದ್ದಾರೆ.
ಕರ್ನಾಟಕ ಕುರುಕ್ಷೇತ್ರದಲ್ಲಿ ಪ್ರಚಾರದ ಜೊತೆ ಎದುರಾಳಿಗಳ ಬಗ್ಗೆ ಲಘು ಹೇಳಿಕೆಗಳು ಸದ್ದು ಮಾಡುತ್ತಿವೆ. ರಾಜಕೀಯ ನಾಯಕರು ಟೀಕಿಸುವ ಭರದಲ್ಲಿ ವಿವಾದಾತ್ಮಕ ಮತ್ತು ಅವಹೇಳನಕಾರಿ ಹೇಳಿಕೆ ನೀಡಿ ಪೇಚಿಗೆ ಸಿಲುಕುತ್ತಿದ್ದಾರೆ.

ಇದೀಗ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ನಾಲಾಯಕ್ ಎಂದು ಮೂದಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಆಗಿದ್ದಾರೆ.
"ನರೇಂದ್ರ ಮೋದಿ ಸೇಡಂ ಮತ್ತು ಮಳಖೇಡಕ್ಕೆ ಬಂದಾಗ ಬಂಜಾರ ಸಮಾಜದವರಿಗೆ ನಿಮ್ಮ ಸಮಾಜದ ಮಗ ದೆಹಲಿಯಲ್ಲಿದ್ದಾನೆ ಎಂದು ಹೇಳಿದ್ದರು. ಆದರೆ ಈಗ ಬಂಜಾರ ಸಮುದಾಯದವರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡಲಾಗಿದೆ. ಇಂತಹ ನಾಲಾಯಕ್ ಮಗನಿದ್ದರೆ ದೇಶ ಹೇಗೆ ನಡೆಯುತ್ತದೆ," ಎಂದು ಪ್ರಿಯಾಂಕ್ ಖರ್ಗೆ ನಾಲಿಗೆ ಹರಿಬಿಟ್ಟಿದ್ದಾರೆ.
"ದೇಶ ನಡೆಸುವುದು ಮಾತ್ರವಲ್ಲ, ಮನೆಯಲ್ಲಿ ಒಬ್ಬ ನಾಲಾಯಕ್ ಮಗನಿದ್ದರೂ ಮನೆ ಸುಸೂತ್ರವಾಗಿ ನಡೆಯುವುದಿಲ್ಲ," ಎಂದು ಹೇಳಿದರು.

"ನರೇಂದ್ರ ಮೋದಿಗೆ 91 ಬಾರಿ ಕಾಂಗ್ರೆಸ್ ನಿಂದಿಸಿದ ಬಗ್ಗೆ ಮಾತನಾಡುವುದಕ್ಕೆ ಸಮಯವಿದೆ. ಆದರೆ ಗುತ್ತಿಗೆದಾರರ ಸಂಘ, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ, ಗೂಳಿಹಟ್ಟಿ ಶೇಖರ್ ಅವರ ಪತ್ರದ ಬಗ್ಗೆ ಉತ್ತರ ಕೊಟ್ಟಿಲ್ಲ. ಬಿಜೆಪಿಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮೋದಿ ಮಾತನಾಡಬೇಕು," ಎಂದು ಪ್ರಿಯಾಂಕ್ ಖರ್ಗೆ ಮಾತನಾಡಿದರು.
ಸುದ್ದಿಗೋಷ್ಠಿಯ ಅಂತ್ಯದಲ್ಲಿ ನಾನು ನರೇಂದ್ರ ಮೋದಿಗೆ ಹಾಗೆ ಅಂದಿಲ್ಲ. ನನಗೆ ವೈಯಕ್ತಿಕ ನಿಂದನೆಗಿಂತ ನನ್ನ ಪ್ರಶ್ನೆಗಳಿಗೆ ಉತ್ತರ ಬೇಕಿತ್ತು ಎಂದು ಪ್ರಿಯಾಂಕ್ ಖರ್ಗೆ ತನ್ನ ನಾಲಾಯಕ್ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಚುನಾವಣಾ ಪ್ರಚಾರದ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನರೇಂದ್ರ ಮೋದಿಯವರನ್ನು ವಿಷದ ಸರ್ಪಕ್ಕೆ ಹೋಲಿಸಿದ್ದರು. "ಮೋದಿ ವಿಷದ ಹಾವು ಇದ್ದಂತೆ, ನೀವೇನಾದರೂ ನೆಕ್ಕಿ ನೋಡಿದರೆ ಸತ್ರಿ' ಅಂತಾ ಹೇಳಿಕೆ ನೀಡಿ ವಿವಾದ ಮೈಮೇಲೆಳೆದುಕೊಂಡಿದ್ದರು. ನಂತರ ನಾನು ವೈಯಕ್ತಿಕವಾಗಿ ಹೇಳಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷದ ಹಾವು ಹೇಳಿಕೆಗೆ ಚುನಾವಣಾ ಪ್ರಚಾರದ ವೇಳೆ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ, "ಸರ್ಪ ಶಿವನ ಕೊರಳಲ್ಲಿರುತ್ತದೆ. ನನಗೆ ಜನರೇ ಸಾಕ್ಷಾತ್ ಶಿವನಿದ್ದಂತೆ, ನಾನು ಅವರ ಜೊತೆ ಇರಲು ಬಯಸುತ್ತೇನೆ," ಎಂದು ತಿರುಗೇಟು ನೀಡಿದ್ದರು.
ಇದೀಗ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಂತೆ ಮಗ ಪ್ರಿಯಾಂಕ್ ಖರ್ಗೆನೂ ಕೂಡ ದೇಶದ ಪ್ರಧಾನಿಯನ್ನು ಟೀಕಿಸುವ ಭರದಲ್ಲಿ ವೈಯಕ್ತಿಕ ಮತ್ತು ಕೀಳುಮಟ್ಟದಲ್ಲಿ ನಿಂದನೆ ಮಾಡುವುದನ್ನು ಮುಂದುವರೆಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಕಾಂಗ್ರೆಸ್‌ನಿಂದ ಪ್ರಿಯಾಂಕ್ ಖರ್ಗೆ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ಮಣಿಕಂಠ ರಾಥೋಡ್ ಕಣಕ್ಕಿಳಿದಿದ್ದಾರೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದ್ದು, ಬಳಿಕ ಯಾವ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಲಿದೆ ಎಂಬ ಕುತೂಹಲ ಮೂಡಿದೆ.












Click it and Unblock the Notifications